ADVERTISEMENT

ಮಚ್ಚು ಸದ್ದು, ಸ್ವಲ್ಪ ಪ್ರೀತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

`ನಿರ್ಮಾಪಕನಾದವನು ನಟನೆ ಮಾಡುವುದು ತುಂಬಾ ಕಷ್ಟ~ ಎನ್ನುವುದು ಮೊದಲ ಚಿತ್ರದಲ್ಲೇ ನಿರ್ಮಾಪಕರಾಗಿ ಜೊತೆಗೆ ಬಣ್ಣವನ್ನೂ ಹಚ್ಚಿರುವ ಪಿ.ಮೂರ್ತಿ ಅನುಭವ. ಚಿತ್ರಕ್ಕೆ ಬಂಡವಾಳ ಹೂಡುವ ಜೊತೆಯಲ್ಲಿ ನಟಿಸಬೇಕೆಂಬ ಆಸೆಯನ್ನೂ ಅವರು ಈಡೇರಿಸಿಕೊಂಡಿದ್ದಾರೆ.
 
ನಟನೆ ಕಷ್ಟವೆನಿಸಿದರೂ ಸಿನಿಮಾ ಮೂಡಿಬಂದ ರೀತಿ ಅವರಿಗೆ ಖುಷಿ ತಂದಿದೆ. ತಮ್ಮ ಪಾಲಿಗೆ ಈ ಚಿತ್ರ ಸಾಧನೆಯೇ ಸರಿ ಎಂದು ಅವರು ಹೇಳಿಕೊಂಡಿದ್ದು `ಸ್ಲಂ~ ಚಿತ್ರದ ದನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ.

ಸ್ಲಂನಲ್ಲಿ ಹುಟ್ಟಿ ಬೆಳೆಯುವ ಇಬ್ಬರು ಯುವಕರ ಕಥೆಯನ್ನಿಟ್ಟುಕೊಂಡು ಸ್ಲಂ ಚಿತ್ರ ಹೆಣೆಯಲಾಗಿದೆ. ಮಚ್ಚು ಲಾಂಗು ಸದ್ದು, ಸ್ವಲ್ಪ ಪ್ರೀತಿ, ಐಟಂ ಹಾಡು ಹೀಗೆ ಒಂದಷ್ಟು ಮಸಾಲೆ ಬೆರೆಸಲಾಗಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಸ್ಲಂಗಳನ್ನು ಸೆಟ್ ಹಾಕಿಯೇ ನಿರ್ಮಿಸುತ್ತಾರೆ.

ಆದರೆ ಇಲ್ಲಿ ನೈಜ ಸ್ಲಂಗಳಲ್ಲಿಯೇ ಚಿತ್ರೀಕರಣ ನಡೆಸಲಾಗಿದೆಯಂತೆ. ನಿಜವಾದ ಸ್ಲಂನಲ್ಲಿ ಚಿತ್ರೀಕರಿಸುವುದು ತುಂಬಾ ಕಷ್ಟ. ಸನ್ನಿವೇಶಗಳು ಸಹಜವಾಗಿ ಮೂಡಿಬರಲು ಈ ಪ್ರಯತ್ನವೇ ಕಾರಣ ಎನ್ನುವುದು ನಟ ಮಯೂರ್ ಪಟೇಲ್ ಮಾತು.

ಒಂದು ಚಿತ್ರ ನಿರ್ದೇಶಿಸಿ ಸೋತು ಚಿತ್ರೋದ್ಯಮದ ಸಹವಾಸವೇ ಬೇಡ ಎಂದು ಅದನ್ನು ಬಿಟ್ಟು ಹೋಗುತ್ತಿದ್ದ ನಿರ್ದೇಶಕ ಮಹೇಶ್‌ಕುಮಾರ್ ಅವರನ್ನು ಹಿಡಿದು ಸಿನಿಮಾ ಮಾಡು ಎಂದು ಪಟ್ಟು ಹಿಡಿದದ್ದು ಪಿ. ಮೂರ್ತಿ. ನಿರ್ಮಾಪಕರು ಪ್ರಾಮಾಣಿಕರೆಂದು ಕಂಡಾಗ ಮಹೇಶ್‌ಕುಮಾರ್ ತಮ್ಮ ನಿರ್ಧಾರ ಬದಲಿಸಿ ಮತ್ತೆ ನಿರ್ದೇಶನದ ಹೊಣೆ ಹೊರಲು ಒಪ್ಪಿಕೊಂಡರಂತೆ.

ಕೇರಳದಲ್ಲಿ ಚಿತ್ರೀಕರಣದ ವೇಳೆ ಸಮುದ್ರ ಪಾಲಾಗುತ್ತಿದ್ದ ಘಟನೆಯನ್ನು ನೆನಪಿಸಿಕೊಂಡರು ನಟಿ ನೇಹಾ ಪಾಟೀಲ್. ಚಿತ್ರೀಕರಣದ ದಿನಗಳು ಅವರಿಗೆ ಮರೆಯಲಾಗದ ಖುಷಿ ಕೊಟ್ಟಿವೆಯಂತೆ. ಪಕ್ಕಾ ಲೋಕಲ್ ಸ್ಲಂನ ಕ್ಯೂಟ್ ಲವ್ ಸ್ಟೋರಿ ಎಂದವರು ಚಿತ್ರವನ್ನು ಬಣ್ಣಿಸಿದರು. ಚಿತ್ರಕ್ಕೆ ಸಂಗೀತ ಹೆಣೆದಿರುವವರು ಹೇಮಂತ್. ಐದು ಹಾಡುಗಳಿಗೆ ಎರಡೇ ದಿನಗಳಲ್ಲಿ ಮಟ್ಟು ಹಾಕಿದ್ದನ್ನು ಅವರು ಹೇಳಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.