ADVERTISEMENT

ಮಣಿಯ ಬೆಟ್ಟದ ಕಥೆಯು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST
ಮಣಿಯ ಬೆಟ್ಟದ ಕಥೆಯು
ಮಣಿಯ ಬೆಟ್ಟದ ಕಥೆಯು   

ಮುನ್ನಾರ್‌ನ ಬೆಟ್ಟತಪ್ಪಲು. ಸುತ್ತಲ ಒಂಬತ್ತು ಮೈಲಿ ಪ್ರದೇಶಕ್ಕೆ ಇದ್ದದ್ದು ಒಂದೇ ಸ್ಟುಡಿಯೋ. ಮಣಿ ಎಂಬಾತ ಅದರ ಒಡೆಯ. ಆ ಪ್ರದೇಶದಲ್ಲಿ ಯಾವ ಕೊಲೆಯಾದರೂ ಫೋಟೋ ತೆಗೆಯಲು ಪೊಲೀಸರು ಕರೆಯುತ್ತಿದ್ದುದು ಮಣಿಯನ್ನೇ. ಪೊಲೀಸರ ಮಾತಿಗೆ ಒಲ್ಲೆ ಎನ್ನಲಾಗದೆ ಮಣಿ ಹೋಗುವುದು ರೂಢಿಯಾಗಿತ್ತು. ಬರ್ಬರವಾಗಿ ಹತ್ಯೆಯಾದ ದೇಹಗಳ ಫೋಟೋ ತೆಗೆದ ದಿನ ಆತನಿಗೆ ಊಟವೇ ಸೇರುತ್ತಿರಲಿಲ್ಲ.

ಒಂದು ದಿನ ಧೋ ಎಂದು ಮಳೆ ಸುರಿಯುತ್ತಿತ್ತು. ಇನ್ನೇನು ಸ್ಟುಡಿಯೊ ಕದ ಮುಚ್ಚಬೇಕು, ಅಷ್ಟರಲ್ಲಿ ಪೊಲೀಸ್ ಜೀಪ್ ಬಂತು. ಕ್ಯಾಮೆರಾ ಎತ್ತಿಕೊಂಡು ಮಣಿ ಜೀಪ್ ಹತ್ತಿದ್ದೇ ಅದು ಬೆಟ್ಟದ ಮೇಲಕ್ಕೆ ಹೊರಟಿತು. ಅಲ್ಲಿ ಒಂಟಿಮನೆ. ‘ಯಾರು ಸತ್ತಿರೋರು?’ ನಿಧಾನವಾಗಿ ಮಣಿ ಪ್ರಶ್ನಿಸಿದಾಗ, ಪೊಲೀಸರು ಕಣ್ಣು ಸಣ್ಣಗೆ ಮಾಡಿಕೊಂಡು ‘ಎಂಟು ತಿಂಗಳ ಮಗು’ ಎಂದರು. ಕುಡಿದ ಅಮಲಿನಲ್ಲಿ ಆ ಮಗುವಿನ ತಂದೆ ಅದರ ಕಾಲನ್ನು ಹಿಡಿದು ಜೋರಾಗಿ ಗೋಡೆಗೆ ಅಪ್ಪಳಿಸಿದ್ದ. ಪುಟ್ಟ ಜೀವ ಕ್ಷಣದಲ್ಲೇ ಹಾರಿಹೋಗಿತ್ತು. ‘ಮಗುವಿನ ಶವವನ್ನಂತೂ ನೋಡಲಾರೆ’ ಎಂದು ಮಣಿ ಮನಸ್ಸಿನಲ್ಲೇ ಅಂದುಕೊಂಡು, ಕ್ಯಾಮೆರಾಗೆ ಲೆನ್ಸ್ ಹಾಕಿದ. ಮಗುವಿನ ಮುಖ ನೋಡದೆಯೇ ಕ್ಯಾಮೆರಾವನ್ನು ಒಂದಿಷ್ಟು ದೂರವಿಟ್ಟು ಲೆನ್ಸ್ ಅಡ್ಜಸ್ಟ್ ಮಾಡಿ ಫೋಟೋಗಳನ್ನು ಕ್ಲಿಕ್ಕಿಸಿ ಬೇಸರದಿಂದ ಹೊರಬಂದ. ಫೋಟೋ ಪ್ರಿಂಟ್ ಹಾಕುವಾಗ ಮಗುವಿನ ಮುಖ ನೋಡಿ ಮಣಿ ಕಣ್ಣಲ್ಲಿ ನೀರಾಡಿತು.
*
ಈ ಕಥೆಯ ಮಣಿಯೇ ಈಗಿನ ಚಿತ್ರ ನಿರ್ದೇಶಕ ದಿನೇಶ್ ಬಾಬು. ತಮ್ಮ ಬದುಕಿನ ಹಳೆಯ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಅವರೀಗ ಬೆಂಗಳೂರಲ್ಲೇ ನೆಲೆಗೊಂಡಿದ್ದಾರೆ. ಕಡಿಮೆ ಬಜೆಟ್‌ನ ನವಿರುಹಾಸ್ಯದ ಚಿತ್ರಗಳಿಗೆ ಅವರು ಬ್ರಾಂಡ್. ಟಿವಿ ಚಾನೆಲ್ ಹಕ್ಕುಗಳಿಂದ ಬರುವ ಹಣದಲ್ಲೇ ನಿರ್ಮಾಪಕ ಸೇಫ್ ಆಗಬೇಕೆಂಬುದು ಅವರ ಪಾಲಿಸಿ. ತಮ್ಮ ಈ ಎಲ್ಲಾ ಮಿತಿ ಹಾಗೂ ಸಾಮರ್ಥ್ಯವನ್ನು ದಿನೇಶ್ ಬಾಬು ಸಮರ್ಥಿಸಿಕೊಳ್ಳುತ್ತಾರೆ.

‘ನಿರ್ಮಾಪಕನನ್ನು ನಾವು ಮೂರ್ಖನನ್ನಾಗಿಸುವುದು ಸರಿಯಲ್ಲ. ನನ್ನ ಚಿತ್ರ ಹೆಚ್ಚೆಂದರೆ 50 ದಿನ ಅಷ್ಟೇ ಓಡಬಹುದು. ಅದರ ಅರಿವು ಇಟ್ಟುಕೊಂಡೇ ನಾನು ಸಿನಿಮಾ ಮಾಡುತ್ತೇನೆ. ಯಾರೇ ನಿರ್ಮಾಪಕರು ಬಂದು ಒಂದೂವರೆ ಕೋಟಿ ಬಜೆಟ್ಟಿನ ಸಿನಿಮಾ ಮಾಡಿ ಎಂದರೆ ಒಪ್ಪುವುದಿಲ್ಲ. ಅದರಿಂದ ಅವರಿಗೆ ನಷ್ಟವಾಗುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನಾವು ಕಡಿಮೆ ಬಜೆಟ್‌ನಲ್ಲೇ ಹೊಸತೇನನ್ನೋ ಮಾಡಬೇಕು. ರಾಮ್‌ಗೋಪಾಲ್ ವರ್ಮಾ ಮೊನ್ನೆಮೊನ್ನೆ ಡಿಜಿಟಲ್ ಕ್ಯಾಮೆರಾಗಳನ್ನು ಬಳಸಿಯೇ ಒಂದು ಸಿನಿಮಾ ಮಾಡಿದರು. ಅದಾದ ನಂತರ ನನ್ನ ಬಳಿಗೂ ಒಬ್ಬರು ನಿರ್ಮಾಪಕರು ಬಂದು ಅದೇ ರೀತಿಯ ಕ್ಯಾಮೆರಾ ಬಳಸಿ ಚಿತ್ರ ತೆಗೆಯಲು ಕೇಳಿದರು. ನನಗೆ ಆ ಕ್ಯಾಮೆರಾ ಬಗ್ಗೆ ಗೊತ್ತಿಲ್ಲ. ತಿಳಿದುಕೊಂಡ ನಂತರ ಮಾಡುತ್ತೇನೆ ಎಂದೆ. ತಾಂತ್ರಿಕವಾಗಿ ನಾವು ಅಪ್‌ಡೇಟ್ ಆಗುವುದರ ಜೊತೆಗೆ ಬಜೆಟ್ ತಗ್ಗಿಸುವ, ಶೂಟಿಂಗ್ ಸಮಯವನ್ನು ವ್ಯರ್ಥ ಮಾಡದಂತೆ ಕೆಲಸ ಮಾಡುವತ್ತಲೂ ಗಮನ ಹರಿಸಬೇಕು. ಟೀವಿ ಚಾನೆಲ್‌ನಲ್ಲೇ ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನ ಯಾಕಾಗಬಾರದು ಎಂದೂ ನಾನು ಕೆಲವರೊಟ್ಟಿಗೆ ವಾದಿಸಿದ್ದೇನೆ. ಟೀವಿಯಲ್ಲಿ ಮೊದಲು ಸಿನಿಮಾ ನೋಡಿದ ನಂತರ ಚಿತ್ರಮಂದಿರಕ್ಕೆ ಬಂದು ಅದೇ ಚಿತ್ರವನ್ನು ನೋಡುವವರು ಖಂಡಿತಾ ಇದ್ದಾರೆ. ಆ ಪ್ರಯೋಗಕ್ಕೆ ಯಾರಾದರೂ ಕೈಹಾಕಬೇಕು’- ಇದು ದಿನೇಶ್ ಬಾಬು ಲಹರಿ.
ಅಂದಹಾಗೆ, ದಿನೇಶ್ ಬಾಬು ನಿರ್ದೇಶನದ ‘ಮತ್ತೊಂದ್ ಮದುವೇನಾ’ ಈ ವಾರ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.