ಬೆಳ್ಳಿತೆರೆಯೋ ಕಿರುತೆರೆಯೋ?
`ಮುಕ್ತ ಮುಕ್ತ' ಧಾರಾವಾಹಿಯ ಮುಕ್ತಾಯದ ಸಂದರ್ಭದಲ್ಲಿ ನಿರ್ದೇಶಕ ಟಿ.ಎನ್. ಸೀತಾರಾಂ ಅವರನ್ನು ಕಾಡಿದ ಪ್ರಶ್ನೆಯಿದು. ಈ ಜಿಜ್ಞಾಸೆಯನ್ನವರು ಸಾಮಾಜಿಕ ಜಾಲತಾಣಗಳ ಮೂಲಕ ಸಹೃದಯರೊಂದಿಗೆ ಹಂಚಿಕೊಂಡಿದ್ದರು. ಉತ್ತರ ಸಿಕ್ಕಿತೋ ಅಥವಾ ಕಿರುತೆರೆಯ ಮಾಯಾಮೃಗ ಮತ್ತೆ ಸೆಳೆಯಿತೋ- ಸೀತಾರಾಂ ಧಾರಾವಾಹಿಗೆ ಮರಳಿದ್ದಾರೆ. ಇದೀಗ `ಮಹಾಪರ್ವ'ದ ಸರದಿ.
`ಮಾಯಾಮೃಗ', `ಮನ್ವಂತರ', `ಮುಕ್ತ', `ಮುಕ್ತ ಮುಕ್ತ' ಧಾರಾವಾಹಿಗಳ ಯಶಸ್ಸಿನ ನಂತರ `ಮ'ಕಾರದ ಶೀರ್ಷಿಕೆಯಲ್ಲಿ ರೂಪುಗೊಳ್ಳುತ್ತಿರುವ ಹೊಸ ಧಾರಾವಾಹಿ `ಮಹಾಪರ್ವ'. ಕಥೆ ಎಂದಿನಂತೆ ಸಮಕಾಲೀನ!
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಸಿನಿಮಾಗಳ ಮುಹೂರ್ತ ಅದ್ದೂರಿಯಾಗಿ ನಡೆಯುವುದು ರೂಢಿ. ಕಳೆದ ವಾರ ಕಂಠೀರವದ ಅಂಗಳದಲ್ಲಿ ನಡೆದ `ಮಹಾಪರ್ವ' ಧಾರಾವಾಹಿಯ ಮುಹೂರ್ತವೂ ಭರ್ಜರಿಯಾಗಿತ್ತು. ಸೀತಾರಾಂ ಅವರ ಹಿತೈಷಿಗಳು, ಕಲಾವಿದರು, ತಂತ್ರಜ್ಞರು ನೆರೆದಿದ್ದ ಅಲ್ಲಿ ಹಬ್ಬದ ವಾತಾವರಣ ಇತ್ತು.
ರಾಜಕಾರಣಿಗಳ ಅಭಿನಯ ಚಾತುರ್ಯವನ್ನು ಅನಾವರಣಗೊಳಿಸಿದ್ದು ಸೀತಾರಾಂ ಅವರ ಕಿರುತೆರೆ ಸಾಹಸಗಳಲ್ಲೊಂದು. ಆ ಕಾರಣದಿಂದಲೇ `ಮಹಾಪರ್ವ'ದ ಮುನ್ನುಡಿ ಸಂದರ್ಭದಲ್ಲಿ ಸಚಿವ ಶ್ರೀನಿವಾಸಪ್ರಸಾದ್, ಸಂಸದ ಜನಾರ್ದನಸ್ವಾಮಿ, ಶಾಸಕರಾದ ರಮೇಶ್‌ಕುಮಾರ್, ಕೆ.ಎಸ್. ಪುಟ್ಟಣ್ಣಯ್ಯ, ವೈ.ಎಸ್.ವಿ. ದತ್ತ ಹಾಜರಿದ್ದರು. ಶುಭ ಕೋರಿದವರ ಸಾಲಿನಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ, ಕವಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್ ಮತ್ತು ಬಿ.ಟಿ. ಲಲಿತಾ ನಾಯಕ್ ಅವರೂ ಸೇರಿದ್ದರು. ನಂದಿನಿ, ಜಯಶ್ರೀ ಸೇರಿದಂತೆ ಸೀತಾರಾಂ ಅವರ ಧಾರಾವಾಹಿಗಳ ನಾಯಕಿಯರೂ ಅಲ್ಲಿದ್ದರು.
ಸೀತಾರಾಂ ಧಾರಾವಾಹಿಗಳ ಜನಪ್ರಿಯತೆಯನ್ನು ಪುಟ್ಟಣ್ಣಯ್ಯ ತಮ್ಮದೇ ಅನುಭವದ ಮೂಲಕ ಕಟ್ಟಿಕೊಟ್ಟರು. ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲದ ಹೋರಾಟದ ಬದುಕಿನಲ್ಲಿ ದೊರೆಯದ ಸ್ಪಂದನ, ಒಂದೇ ಒಂದು ಧಾರಾವಾಹಿಯಲ್ಲಿ ನಟಿಸುವ ಮೂಲಕ ಅವರಿಗೆ ದೊರೆಯಿತಂತೆ. ಅದು ಕಿರುತೆರೆಯ ಹಾಗೂ ಸೀತಾರಾಂ ಧಾರಾವಾಹಿಗಳ ಶಕ್ತಿ.
ಹಳೆಯ ಕಲಾವಿದರ ಉಪಸ್ಥಿತಿಯ ನಡುವೆಯೇ ಸೀತಾರಾಂ, `ಈ ಧಾರಾವಾಹಿಯಲ್ಲಿ ಹೊಸ ಪ್ರತಿಭೆಗಳಿಗೆ ಆದ್ಯತೆ' ಎಂದು ಹೇಳಿದ್ದು ವಿಶೇಷ. `ಬದುಕಿನ ವೈರುಧ್ಯಗಳ ಕಥೆಯನ್ನು ಹೇಳುತ್ತಿರುವೆ. ಯಾವುದರ ವಿರುದ್ಧ ನಾವು ಹೋರಾಟ, ಚಳವಳಿ ನಡೆಸಿಕೊಂಡು ಬರುತ್ತೇವೋ, ಅದರ ಪರವಾಗಿಯೇ ಮತ್ತೊಂದು ಸಂದರ್ಭದಲ್ಲಿ ನಿಲುವು ತಾಳುತ್ತೇವೆ. ಈ ವೈರುಧ್ಯದ ಕಥನ ಹೊಸ ಧಾರಾವಾಹಿಯಲ್ಲಿ ಇರುತ್ತದೆ' ಎಂದು ಅವರು ಹೇಳಿದರು.
ಸೀತಾರಾಂ ಧಾರಾವಾಹಿ ಎಂದರೆ ನೋಡುಗರಲ್ಲಿ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚು. ಈ ನಿರೀಕ್ಷೆಗಳು ಸೀತಾರಾಂ ಅವರಿಗೆ ಪುಳಕವನ್ನೂ ಆತಂಕವನ್ನೂ ತಂದಿದೆ.
ಅಂದಹಾಗೆ, `ಈ ಟೀವಿ' ಕನ್ನಡ ವಾಹಿನಿಯಲ್ಲಿ `ಮಹಾಪರ್ವ'ದ ಪ್ರಸಾರ ಸದ್ಯದಲ್ಲೇ ಆರಂಭವಾಗಲಿದೆ. ಈ ಮೂಲಕ ಈಚೆಗೆ ರೀಮೇಕ್ ಧಾರಾವಾಹಿಗಳಿಗೆ ವೇದಿಕೆಯಾಗಿ ಬದಲಾಗಿದ್ದ ವಾಹಿನಿಯಲ್ಲಿ ಕನ್ನಡದ ದನಿಯೊಂದು ಮತ್ತೆ ಕೇಳಿಸಲಿದೆ. ಇದನ್ನು ಧ್ವನಿಸುವಂತೆ, ಎಚ್ಚೆಸ್ವಿ ಅವರು ಬರೆದ `ಮಹಾಪರ್ವ'ದ ಪ್ರಾರ್ಥನ ಗೀತೆಯನ್ನು ಗಾಯಕಿ ಸಂಗೀತಾ ಕಟ್ಟಿ ತಮ್ಮ ಆರ್ದ್ರ ಹಾಗೂ ಗಟ್ಟಿ ದನಿಯಲ್ಲಿ ಮುಹೂರ್ತ ಸಂದರ್ಭದಲ್ಲಿ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.