ADVERTISEMENT

ಮದುವಣಗಿತ್ತಿಯೇ ನಾಪತ್ತೆ!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಬಣ್ಣ ಬಣ್ಣದ ಹೂಗಳು ಸಭಾಂಗಣವನ್ನು ಅಲಂಕರಿಸಿದ್ದವು. ಥಟ್ಟನೆ ನೋಡಿದರೆ ಮದುವೆ ಮನೆಯ ಕಳೆ. ವೇದಿಕೆಯಂತೂ ಮದುವೆ ಮಂಟಪದಂತೆ ಕಂಗೊಳಿಸುತ್ತಿತ್ತು. ಬಂಧುಮಿತ್ರರ ಬಳಗವೂ ಸೇರಿತ್ತು. ಆದರೆ ಮದುವಣಗಿತ್ತಿಯೇ ಪತ್ತೆಯಿಲ್ಲ!
ಸತತ ಮೂರು ಬಾರಿ ಹಾಡುಗಳ ದನಿಮುದ್ರಿಕೆಯ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದ ಚಿತ್ರತಂಡ ಇನ್ನು ಕಾಯಲು ಸಾಧ್ಯವಿಲ್ಲ ಎಂಬ ಹತಾಶೆಯ ಭಾವದೊಂದಿಗೆ ಮುಖ್ಯಕಲಾವಿದೆಯ ಗೈರಿನಲ್ಲಿಯೇ ಅನಿವಾರ್ಯವಾಗಿ ಹಾಡುಗಳನ್ನು ಹೊರತರಲು ಮುಂದಾಗಿತ್ತು.

‘ಮೀಡಿಯಾ ಅಂದ್ರೆ ಯಾಕೋ ಮೇಡಂ ಹೆದರ್ತಾರೆ’– ಸೀಡಿ ಬಿಡುಗಡೆ ಸಮಾರಂಭ ಹಲವು ಬಾರಿ ಮುಂದಕ್ಕೆ ಹೋಗಿದ್ದರ ಒಳಗುಟ್ಟನ್ನು ತೆರೆದಿಟ್ಟರು ನಿರ್ಮಾಪಕ ಕಾಂತರಾಜು. ಈ ಮೇಡಂ ಬೇರಾರೂ ಅಲ್ಲ, ‘ಮಳೆ ಹುಡುಗಿ’ ಪೂಜಾ ಗಾಂಧಿ. ‘ಕಲ್ಯಾಣಮಸ್ತು’ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಚಿತ್ರ. ಮೂರು ಸಲ ಆಡಿಯೊ ಸೀಡಿ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಪೂಜಾ ಗಾಂಧಿ ಪ್ರತಿಬಾರಿಯೂ ಒಂದೊಂದು ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದರು.

ಈ ಬಾರಿಯ ದಿನಾಂಕವನ್ನು ನಿಗದಿಪಡಿಸಿದ್ದು ಸ್ವತಃ ಪೂಜಾ ಗಾಂಧಿ. ಅಂದೂ ಕೂಡ ಅವರು ನಾಪತ್ತೆ!
ಚಿತ್ರರಂಗದಲ್ಲಿ ಸುದೀರ್ಘ ಅನುಭವವುಳ್ಳ ನಿರ್ದೇಶಕ ಮಲ್ಲೇಶ್‌, ನಿರ್ದೇಶಕನಿಗೆ ಪ್ರತಿ ಸೂಕ್ಷ್ಮ ವಿಚಾರಗಳೂ ತಿಳಿದಿರಬೇಕು ಎನ್ನುವುದು ಹಿಂದೆ ಮುಖ್ಯವಾಗಿತ್ತು. ಆದರೆ ಈಗ ಯಶಸ್ಸನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದರು.

ಚಿತ್ರಕ್ಕೆ ಬಂಡವಾಳ ಹೂಡಿರುವ ಕಾಂತರಾಜು ಅವರೊಂದಿಗೆ ರಾಜಶೇಖರ್‌ ಕೈಜೋಡಿಸಿದ್ದಾರೆ. ಮನೆಕಟ್ಟುವುದಕ್ಕಿಂತಲೂ ಸಿನಿಮಾ ಮಾಡುವುದು ಕಷ್ಟದ ಕೆಲಸ ಎನ್ನುವುದು ಕಾಂತರಾಜು ಅನುಭವದ ಮಾತು. ಲಾಭದ ಸಲುವಾಗಿ ಸಿನಿಮಾ ಮಾಡಿಲ್ಲ, ಖುಷಿಗಾಗಿ ಮಾಡಿದ್ದೇನೆ ಎಂದರು ಅವರು. ಎಲ್ಲಾ ವಯೋಮಾನದ ಜನರು ಇಷ್ಟಪಡುವಂಥ ಸಿನಿಮಾ ಇದು ಎನ್ನುವುದು ಕಾಂತರಾಜು ಅಭಿಮತ.

ನಟಿ ತೇಜಸ್ವಿನಿ, ಎಸ್‌.ಎ. ಗೋವಿಂದರಾಜು, ಕೋಟೆ ನಾಗರಾಜ್‌, ನಿರ್ದೇಶಕ ನಾಗಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.