ADVERTISEMENT

ಮಸಣದ ಹೂವು ‘ಶುಭ್ರ’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2016, 19:30 IST
Last Updated 11 ಆಗಸ್ಟ್ 2016, 19:30 IST
ತನ್ಮಯಿ
ತನ್ಮಯಿ   

ಸಮಾಧಿ ಅಗೆಯುವ ಕೆಲಸವನ್ನು ಮಾಡುವವರು ಸಾಮಾನ್ಯವಾಗಿ ಪುರುಷರೇ ಆಗಿರುತ್ತಾರೆ. ಮಹಿಳೆಯರಿಗೆ ಅಲ್ಲಿ ನಿಷೇಧ ಇಲ್ಲದಿದ್ದರೂ ಅಂಥ ಕೆಲಸಗಳಲ್ಲಿ ಅವರು ತೊಡಗಿಕೊಳ್ಳುವುದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಆದರೆ ಹೊಸದಾಗಿ ನಿರ್ಮಾಣವಾಗಿರುವ ‘ಶುಭ್ರ’ ಚಿತ್ರದಲ್ಲಿ ಹುಡುಗಿಯೊಬ್ಬಳು ಸಮಾಧಿಯ ಕುಣಿ ತೋಡುವ ಕಾಯಕದವಳು. ಆಕೆಯೇ ಕಥಾನಾಯಕಿ. ಸ್ಮಶಾನವೇ ಅವಳ ಮನೆ. ಆಕೆಯ ಹೆಸರು ಶುಭ್ರ.

ತಾಯಿ ತೀರಿಕೊಂಡ ನಂತರ ಜೀವನ ನಿರ್ವಹಣೆಗೆ ತೀವ್ರ ಸಂಕಷ್ಟ ಅನುಭವಿಸುವ ಶುಭ್ರ ಸ್ಮಶಾನದಲ್ಲಿ ಬದುಕು ಕಟ್ಟಿಕೊಳ್ಳುತ್ತಾಳೆ. ಇಂಥದ್ದೊಂದು ಕಥೆ ರಚಿಸಿ ನಿರ್ದೇಶನ ಮಾಡುತ್ತಿರುವವರು ಬಿ. ರಾಮಮೂರ್ತಿ. ಅವರು ಈ ಸ್ಕ್ರಿಪ್ಟ್ ಬರೆದ ನಂತರ ಇಂಥದ್ದೇ ಕೆಲಸ ಮಾಡುವ ಮಹಿಳೆಯೊಬ್ಬರನ್ನು ಭೇಟಿಯೂ ಆಗಿದ್ದಾರಂತೆ.

‘ನಾನು ಈವರೆಗೆ ಸಿದ್ಧಸೂತ್ರಗಳ ಸಿನಿಮಾಗಳು, ಸಮಾಜಕ್ಕೆ ಸಂದೇಶ ನೀಡುವ ಆಫ್‌ಬೀಟ್ ಸಿನಿಮಾಗಳನ್ನು ಮಾಡಿದ್ದೇನೆ. ಅವುಗಳಲ್ಲಿ ಕೆಲವು ಯಶಸ್ವಿಯಾದರೆ ಕೆಲವು ಸೋತಿವೆ. ಇದು ಅನೇಕ ಸಂದೇಶಗಳಿರುವ ಆಫ್‌ಬೀಟ್ ಚಿತ್ರ’ ಎಂದು ರಾಮಮೂರ್ತಿ ಹೇಳಿದರು. ಅಂದಹಾಗೆ, ಚಿತ್ರರಂಗದಲ್ಲಿ ಅವರದು ಇಪ್ಪತ್ತಾರು ವರ್ಷಗಳ ಅನುಭವ.

ಶುಭ್ರ ಪಾತ್ರದಲ್ಲಿ ತನ್ಮಯಿ ಕಶ್ಯಪ್ ಕಾಣಿಸಿಕೊಂಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜನರ ಆಡಿಶನ್ ನಡೆಸಿದಾಗ ತನ್ಮಯಿ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಮಧುಗಿರಿಯ ಸ್ಮಶಾನದಲ್ಲಿ ಅಭಿನಯಿಸುವ ಧೈರ್ಯ ತೋರಿದ ತನ್ಮಯಿ ಅವರನ್ನು ನಿರ್ದೇಶಕರು ಮೆಚ್ಚಿಕೊಂಡು ಮಾತನಾಡಿದರು.

ರಾಮಮೂರ್ತಿ ಅವರ ಸಂಬಂಧಿ ರಾಜೇಶ್ ಶಾಸ್ತ್ರಿ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತ ಜೋಡಿಸುವುದರೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿರ್ದೇಶಕರ ಸ್ನೇಹಿತರಾದ ಮೂರ್ತಿ ವಿ.ಎನ್., ಎಸ್.ಎಸ್. ಪಾಟೀಲ್, ಮಂಜುನಾಥ್ ಗೌಡ ಮತ್ತು ಈಚೆಗೆ ತೀರಿಕೊಂಡ ಬಲರಾಮಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡ ಮಹಿಪಾಲ ರೆಡ್ಡಿ, ‘ಇದೊಂದು ಅಪರೂಪದ ಚಿತ್ರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.