ADVERTISEMENT

ಮಹಾರಾಜರ ‘ಮರ್ಯಾದೆ’!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST
ಮಹಾರಾಜರ ‘ಮರ್ಯಾದೆ’!
ಮಹಾರಾಜರ ‘ಮರ್ಯಾದೆ’!   

‘ಮೂವತ್ತು ದಿನದಲ್ಲಿ ನನಗೆ ಕನ್ನಡ ಭಾಷೆಯೇ ಮರೆತು ಹೋದಂತಾಗಿತ್ತು’
–ನಟ ರವಿಚೇತನ್ ತಮಾಷೆಗೆ ಹೀಗೆ ನುಡಿದರೂ ಅವರ ಮಾತಿನಲ್ಲಿ ಅರ್ಥವಿತ್ತು. ನಿರ್ದೇಶಕರ ಮಾತು ಕೇಳಿದವರು ತಮ್ಮ ಭಾಷೆಯನ್ನು ಒಮ್ಮೆ ಮರೆತರೂ ಅಚ್ಚರಿಯಿರಲಿಲ್ಲ. ಕನ್ನಡ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಿಶ್ರಣ ಮಾಡಿ ಮಾತನಾಡುವ ಕಲೆಗಾರಿಕೆ ನಿರ್ದೇಶಕ ಮಹಾರಾಜ ಅವರದು.

ಕೇರಳ ಮೂಲದವರಾದ ನಿರ್ದೇಶಕ ಮಹಾರಾಜ ತಮಿಳಿನಲ್ಲಿಯೂ ಕೆಲಸ ಮಾಡಿದವರು. ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. ಹೀಗಾಗಿ ಮಾತಿಗಿಳಿದಾಗ ಮೂರೂ ಭಾಷೆಗಳ ಜೊತೆಗೆ ಇಂಗ್ಲಿಷ್ ಕೂಡ ಬೆರೆತಿತ್ತು. ಅವರ ಸಿನಿಮಾ ಹೆಸರು ‘ಮರ್ಯಾದೆ’.
ಅದು ‘ಮರ್ಯಾದೆ’ಯ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. ಸೀಡಿ ಬಿಡುಗಡೆ ಮಾಡಿದ್ದು ಮಂಗಳಮುಖಿಯರ ದಂಡು.

ಮಂಗಳಮುಖಿಯರಿಗೂ ಚಿತ್ರಕ್ಕೂ ಇರುವ ನಂಟು ಹಿರಿದು. ಚಿತ್ರದ ಕಥೆಯ ಮೂಲವಿರುವುದೇ ಮಂಗಳಮುಖಿಯರ ಬದುಕಿನ ಮೇಲೆ. ಅನಾಥ ಮಗುವನ್ನು ಸಾಕುವ ಮಂಗಳಮುಖಿಯರು, ಅವರು ಸಮಾಜದಲ್ಲಿ ಎದುರಿಸುವ ಸಮಸ್ಯೆಗಳ ಮುಖವನ್ನು ‘ಮರ್ಯಾದೆ’ ಚಿತ್ರಿಸಿದೆಯಂತೆ. ಅಂದಹಾಗೆ, ನಿಜವಾದ ಮಂಗಳಮುಖಿಯರು ಸಿನಿಮಾದಲ್ಲಿ ನಟಿಸಿದ್ದರೂ ಮುಖ್ಯಪಾತ್ರದಲ್ಲಿ ಮಂಗಳಮುಖಿಯ ವೇಷ ತೊಟ್ಟಿರುವುದು ರವಿಚೇತನ್. ‘ಸತ್ಯಾನಂದ’ ಚಿತ್ರದಲ್ಲಿನ ಅಭಿನಯ ನೋಡಿ ರವಿಚೇತನ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆಯಂತೆ. ಮಂಗಳಮುಖಿಯರ ನಡುವೆ ಬೆಳೆಯುವ ಅನಾಥಮಗುವಾಗಿ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಬಂಡವಾಳವನ್ನೂ ಹೂಡಿರುವ ನಾಗರಾಜ್. ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಅವರಿಗಿದು ಕನ್ನಡದಲ್ಲಿ ಪದಾರ್ಪಣೆಯ ಸಿನಿಮಾ.

ನಟಿ ಹರ್ಷಿಕಾ ಪೂಣಚ್ಚ ಅವರಿಗೆ ನಾಯಕನಿಗೆ ಸರಿಸಮವಾದ ಪಾತ್ರ ಸಿಕ್ಕಿದೆ ಎಂಬ ಖುಷಿ. ನಿರ್ದೇಶಕರ ಭಾಷಾ ಸಮಸ್ಯೆ ಹೊರತುಪಡಿಸಿದರೆ ಬೇರೇನೂ ಸಮಸ್ಯೆ ಎದುರಾಗಲಿಲ್ಲ ಎಂದರು ಅವರು. ಕಡಿಮೆ ಅವಧಿಯಲ್ಲಿ ಚಿತ್ರದ ನಾಲ್ಕು ಹಾಡುಗಳನ್ನು ಬರೆದು ನೀಡುವ ಅವಕಾಶವನ್ನು ನಿಭಾಯಿಸಿದ ಸಂತಸ ಸಿನಿ ಸಾಹಿತಿ ಕವಿರಾಜ್ ಅವರದು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ. ಗಂಗರಾಜು, ನಟರಾದ ಸುಚೇಂದ್ರಪ್ರಸಾದ್, ಲಯೇಂದ್ರ, ಮನ್‌ದೀಪ್‌ರಾಯ್, ಪ್ರದೀಪ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.