ADVERTISEMENT

ಮಿಂಚುವ ಮುನ್ನ...

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST
ಮಿಂಚುವ ಮುನ್ನ...
ಮಿಂಚುವ ಮುನ್ನ...   

`ಕ್ಯಾಮೆರಾ ಸಹಾಯಕನಾಗಿದ್ದವನು ಚಿತ್ರದ ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಛಾಯಾಗ್ರಾಹಕನಾಗುತ್ತಿರುವುದು ಇದೇ ಮೊದಲು. ಇದು ದೇಶದಲ್ಲೇ ಮೊದಲು. ಚಿತ್ರಕ್ಕೆ ಸೆನ್ಸಾರ್‌ನಿಂದ ಪ್ರಮಾಣಪತ್ರ ಬರುತ್ತಿದ್ದಂತೆ ನನ್ನ ಹೆಸರು ಗಿನ್ನಿಸ್ ದಾಖಲೆ ಸೇರುವುದು ಖಂಡಿತ~.


ಹೀಗೆ, ದಾಖಲೆ ಸೃಷ್ಟಿಸುವ ಧಾಟಿಯಲ್ಲಿ ಪತ್ರಿಕಾಗೋಷ್ಠಿ ಉದ್ದಕ್ಕೂ ಮಾತನಾಡಿದರು ವೆಸ್ಲೆ. ತಮ್ಮ `ಮೊದಲ ಮಿಂಚು~ ಚಿತ್ರದ ಶೇ 70ರಷ್ಟು ಚಿತ್ರೀಕರಣವನ್ನು ಹತ್ತು ದಿನಗಳಲ್ಲಿ ಅವರು ಮುಗಿಸಿದ್ದಾರಂತೆ.

`ಹದಿನಾರು ವರ್ಷ ಉದ್ಯಮದಲ್ಲಿದ್ದೆ. ಅದೇ ಅನುಭವ ಇಟ್ಟುಕೊಂಡು ಸಾವಿರ ಫ್ರೇಮ್ ಬಳಸಿ ಐದು ನಿಮಿಷದ ಒಂದು ಹಾಡನ್ನು ಚಿತ್ರೀಕರಿಸಿದ್ದೇನೆ. ಈ ಮೊದಲು ಅಲ್ಲಲ್ಲಿ ಬಳಕೆಯಾಗಿದ್ದ ಈ ತಂತ್ರಜ್ಞಾನವನ್ನು ಬಳಸಿ ನಾನು ಇಡೀ ಹಾಡನ್ನೇ ಚಿತ್ರಿಕರಿಸಿದ್ದೇನೆ. ಇದು ಅಲ್ಟ್ರಾ ಸ್ಲೋಮೊಷನ್‌ನಲ್ಲಿ ಇರುತ್ತೆ. ಇನ್ನೊಂದು ನಾಲ್ಕು ನಿಮಿಷದ ಹಾಡನ್ನು ನಾಲ್ಕೇ ಶಾಟ್‌ನಲ್ಲಿ ಮುಗಿಸಿದ್ದೇನೆ~ ಎಂದರು.

`ತಂತ್ರಜ್ಞಾನ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಕಥೆ ಚೆನ್ನಾಗಿರಬೇಕು. ಗೌಡರ ಮನೆಯಲ್ಲಿ ಬೆಳೆಯುವ ಹುಡುಗ, ಗೌಡರ ಮಗಳ ಮದುವೆ ಮಾಡುವುದು ಚಿತ್ರದ ಕಥೆ. ಆತ್ಮಹತ್ಯೆ ಮಹಾಪಾಪ ಎಂದು ಸಿನಿಮಾದಲ್ಲಿ ಹೇಳಿದ್ದೇನೆ.

ವಿದೇಶಿ ಮತ್ತು ಸ್ವದೇಶಿ ಸಂಸ್ಕೃತಿಯ ಸಮ್ಮಿಲನ ಚಿತ್ರದಲ್ಲಿದೆ. ಕಾಮಿಡಿ ದೃಶ್ಯಗಳಿಗಾಗಿ ರ‌್ಯಾಟ್ ಅನಿಮೇಶನ್ ಮಾಡಿಸಿದ್ದೇನೆ. ಮೇಲುಕೋಟೆಯನ್ನು ಇದುವರೆಗೂ ಯಾರೂ ತೋರಿಸದ ರೀತಿಯಲ್ಲಿ ತೋರಿಸುವೆ. ಹೊಸ ಹೊಸ ಕೋನಗಳನ್ನು ಪರಿಚಯಿಸುವೆ. ಯಾರೂ ಚಿತ್ರೀಕರಿಸದ ತಾಣಗಳನ್ನು ಹುಡುಕಿ ಚಿತ್ರೀಕರಣ ನಡೆಸುತ್ತಿದ್ದೇನೆ. ಆನ್‌ಲೈನ್‌ನಲ್ಲಿ ಓದಿ ತಾಂತ್ರಿಕವಾಗಿ ಕಲಿತು ನಾನು ಮಾಡುತ್ತಿರುವ ಚಿತ್ರ ಇದು~ ಎಂದರು.

`ಮೊದಲ ಮಿಂಚು~ ಚಿತ್ರದ ನಾಯಕಿ ಸುಪ್ರೀತಾ. `ಮೈಯಲ್ಲಿ ಹುಷಾರಿಲ್ಲ~ ಎಂದು ಹೇಳಿ ಮಾತು ಆರಂಭಿಸಿದ ಆಕೆ- `ನೂರಕ್ಕೆ ಮುಕ್ಕಾಲು ಪಾಲು ಹೆಣ್ಣುಮಕ್ಕಳು ಗಂಡಸರ ಅಡಿಯಾಳಾಗಿ ಇರುವುದು ಇಂದಿನ ಪರಿಸ್ಥಿತಿ. ಅಂಥ ಪಾತ್ರವೊಂದರಲ್ಲಿ ನಟಿಸುತ್ತ್ದ್ದಿದೇನೆ. ಪಾತ್ರ ಕ್ಯೂಟಾಗಿದೆ~ ಎಂದು ವಿರೋಧಾಭಾಸದ ಮಾತನಾಡಿದರು.
ನಾಯಕ ಅಭಿ ಚಿತ್ರದಲ್ಲಿ ಹಳ್ಳಿ ಹೈದನಂತೆ. ಮೊದಲ ದಿನ ಕ್ಯಾಮೆರಾ ಎದುರಿಸುವಾಗಿದ್ದ ಭಯ ಈಗಿಲ್ಲ ಎಂದು ಅಭಿ ಮಾತು ಮುಗಿಸಿದರು.

ಚಿತ್ರದಲ್ಲಿ ಇರುವ ಜಾನಪದ ಹಾಡಿನಲ್ಲಿ ತಮಟೆ, ಡೋಲಕದಂಥ ವಾದ್ಯಗಳನ್ನು ಸಂಗೀತ ನಿರ್ದೇಶಕ ಆಶ್ಲೆ ಬಳಸಿದ್ದಾರಂತೆ. ಐಟಂ ಹಾಡಿನಲ್ಲಿ ರಿದಂ ಬೀಟ್ ಇರುವುದು, ಪ್ಯಾಥೋ ಹಾಡಿನಲ್ಲಿ ಜಂಬೆ ವಾದ್ಯ ಬಳಸಿರುವುದು, ನಾಯಕನ ಪರಿಚಯದ ಹಾಡಿನಲ್ಲಿ ಮೆಲೋಡಿ ಹಾರ್ಮೋನಿ ಬಳಸಿರುವುದು ತಮ್ಮ ವಿಭಿನ್ನತೆ ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT