ADVERTISEMENT

ಮೋಸಹೋದವನ ಪ್ರಲಾಪ

ಪೂರ್ವಿ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST
ಮೋಸಹೋದವನ ಪ್ರಲಾಪ
ಮೋಸಹೋದವನ ಪ್ರಲಾಪ   

ಎಡಗೈಯನ್ನು ಭೂಮಿ ಮೇಲಿಟ್ಟು, ದೇಹದ ಭಾರವನ್ನೆಲ್ಲಾ ಅದರ ಮೇಲೆ ಬಿಟ್ಟು ವ್ಯಾಯಾಮ ಮಾಡಿ ದಿಗ್ಗನೆದ್ದು ನಿಂತು ಬೆವರೊರೆಸಿಕೊಂಡ ರಣಬೀರ್ ಕಪೂರ್‌ಗೆ ಆಡಲು ಸಾಕಷ್ಟು ಮಾತುಗಳಿದ್ದವು.
 
`ರಾಕ್‌ಸ್ಟಾರ್~ ಚಿತ್ರದ ಪ್ರಚಾರದ ಸಲುವಾಗಿ ಅವರೀಗ ಮೌನದ ಚಿಪ್ಪಿನಿಂದ ಹೊರಬಂದಿದ್ದಾರೆ. ಆರು ತಿಂಗಳಾಗಿತ್ತು ಅವರು ಮಾಧ್ಯಮದ ಎದುರು ಮುಕ್ತವಾಗಿ ಮಾತನಾಡಿ. ಈಗ ಪುಂಖಾನುಪುಂಖವಾಗಿ ಅವರ ಸಂದರ್ಶನಗಳು ಪ್ರಕಟಗೊಳ್ಳತೊಡಗಿವೆ. ದೀಪಿಕಾ, ಸೋನಂ ಕಪೂರ್ ತನ್ನ ಬಗ್ಗೆ ನೀಡಿರುವ ಪ್ರತಿಕ್ರಿಯೆಗಳಿಗೆ ಮರುಮಾತನ್ನು ಹೊರಹಾಕಲು ಕೂಡ ರಣಬೀರ್ ಈಗ ಹಿಂದುಮುಂದು ನೋಡುತ್ತಿಲ್ಲ.

`ದೀಪಿಕಾ, ಸೋನಂ ಇಬ್ಬರೂ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಜೊತೆ ಚೆನ್ನಾಗಿಯೇ ಇದ್ದರು. ಮಾಧ್ಯಮ ನಮ್ಮೆಲ್ಲರ ನಡುವೆ ಕಟ್ಟಿದ ಕಥೆಗಳಿಂದ ಅವರಿಗೆ ಬೇಸರ ಬಂದು ಹಾಗೆಲ್ಲಾ ಮಾತನಾಡಿದರೋ ಏನೋ~ ಎಂದು ಕಿವಿಮೇಲೆ ಹೂವಿಡಲು ಯತ್ನಿಸುವಂತೆ ಮಾತನಾಡುವ ರಣಬೀರ್‌ಗೆ ತನ್ನ ಕೆಲವು ತಪ್ಪುಗಳ ಅರಿವಾಗಿದೆಯಂತೆ.

`ನನಗೊಂದು ಕಾಂಡೊಮ್ ಪ್ಯಾಕ್ ಗಿಫ್ಟ್ ಕೊಡುವುದಾಗಿ ದೀಪಿಕಾ ಹೇಳಿದ್ದನ್ನು ನೋಡಿ ನನಗೆ ಏನೂ ಅನ್ನಿಸಲಿಲ್ಲ. ಯಾಕೆಂದರೆ, ನಾನು ಏನೆಂಬುದು ನನಗೆ ಚೆನ್ನಾಗಿ ಗೊತ್ತು. ಒಂದು ವೇಳೆ ಅವಳು ಬಂದು ಕಾಂಡೊಮ್ ಪ್ಯಾಕೆಟ್ ಕೊಟ್ಟರೆ, ಸೇಫ್ ಸೆಕ್ಸ್‌ಗೆ ಮಾರ್ಗದರ್ಶನ ಕೊಟ್ಟಿದ್ದಕ್ಕಾಗಿ ಧನ್ಯವಾದ ಎಂದು ಹೇಳಿ ಅದನ್ನು ಪಡೆಯುತ್ತೇನೆ. ಇನ್ನು ಸೋನಂ ನಾನು ಸೆಕ್ಸಿ ಅಲ್ಲ ಅಂತ ಹೇಳಿದ್ದಾಳೆ. ಅದಕ್ಕೆ ನಾನು ಜವಾಬ್ದಾರನಲ್ಲ.

ನನ್ನ ಸೃಷ್ಟಿಕರ್ತರಾದ ಅಪ್ಪ-ಅಮ್ಮನ ಹೊಣೆ ಅದು. ನಾನು ಸೆಕ್ಸಿ ಅಲ್ಲವೆಂಬುದು ನನಗೂ ಗೊತ್ತಿದೆ. ಸೋನಂ ಪ್ರಾಮಾಣಿಕವಾಗಿ ಅದನ್ನೇ ಹೇಳಿದಳು ಅಷ್ಟೆ. ಮುಂದೊಂದು ದಿನ ದೀಪಿಕಾ, ಸೋನಂ ಜೊತೆ ನಟಿಸುವ ಅವಕಾಶ ಮತ್ತೆ ಬಂದರೂ ಬರಬಹುದು. ಆಗ ನಾನು ಅವರಾಡಿರುವ ಮಾತುಗಳನ್ನೆಲ್ಲಾ ಮರೆತು ಅವರೊಟ್ಟಿಗೆ ಕೆಲಸ ಮಾಡುತ್ತೇನೆ...~ ರಣಬೀರ್ ಕಿಂಚಿತ್ತೂ ವಿಚಲಿತರಾಗದವರಂತೆ ಹೇಳುತ್ತಾರೆ.

`ಹಾಸಿಗೆಗಳ ಜಿಗಿತಗಾರ~, `ಸೆಕ್ಸ್ ಮಷೀನ್~ ಎಂಬ ಬಿರುದುಗಳು ಕೂಡ ರಣಬೀರ್‌ಗೆ ಸುತ್ತಿಕೊಂಡಿವೆ. ಆ ಕುರಿತು ಮನೆಯಲ್ಲೂ ಅಪ್ಪ ರಿಷಿ ಕಪೂರ್ ಸಣ್ಣದೊಂದು ಚರ್ಚೆ ನಡೆಸಿದ್ದಾಗಿದೆ. ಸ್ವಲ್ಪವೂ ಮುಚ್ಚುಮರೆಯಿಲ್ಲದೆ ತಮ್ಮ ಮಗನ ಲೈಂಗಿಕ ಅಸ್ತಿತ್ವದ ಬಗ್ಗೆ ಹೆಣ್ಣುಮಕ್ಕಳು, ನಟಿಯರು ಮಾತನಾಡಲು ಶುರುವಿಟ್ಟಿದ್ದು ಅವರಲ್ಲಿ ಸಹಜವಾಗಿಯೇ ಬೇಸರ ಮೂಡಿಸಿತ್ತು. `ಡೈನಿಂಗ್ ಟೇಬಲ್ ಮೇಲೆ ತಿಂಡಿಗೆ ಒಟ್ಟಿಗೆ ಕೂತಾಗ ಅಪ್ಪನ ಕೈಲೊಂದು ಮ್ಯಾಗಜೀನ್ ಇತ್ತು. ಅದರಲ್ಲಿ ನನ್ನದೇ ಗಾಸಿಪ್. ಅವರು ಅದನ್ನು ನನಗೆ ತೋರಿಸಿದರು.

ನಾನು ಎಂದಿನಂತೆ ನಕ್ಕೆ. ಅವರು ನಗಲಿಲ್ಲ. ಅಪ್ಪನಾಗಿ ಅವರು ಮಾಡಿದ್ದು ಸರಿ. ಆ ಗಾಸಿಪ್‌ನಲ್ಲಿ ಇದ್ದದ್ದು ಶುದ್ಧ ಸುಳ್ಳೆಂಬುದು ನನಗೆ ಗೊತ್ತಿತ್ತು. ಹಾಗಾಗಿ ನಾನೂ ಸರಿ. ನನ್ನ ಹಾಸಿಗೆ ಕತೆಗಳ ಬಗ್ಗೆ ಅಪ್ಪನಾಗಲೀ ಅಮ್ಮನಾಗಲೀ ಈಗ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅವರಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಶ್ರಮ ಹಾಕಿ ಕೆಲಸ ಮಾಡುತ್ತಿದ್ದೇನೆ. ಅಭಿನಯದಲ್ಲಿ ಏಣಿ ಹತ್ತುತ್ತೇನೆ. ಮುಂದೊಂದು ದಿನ ಅಪ್ಪನಿಗೆ ತಕ್ಕ ಮಗ ಎಂದು ಇದೇ ಬಾಲಿವುಡ್‌ನ ಜನ ಹೇಳುವಂತೆ ಮಾಡುತ್ತೇನೆ~- ಸಿನಿಮೀಯ ಶೈಲಿಯಲ್ಲಿ ಭಾವುಕರಾಗಿ ಹೇಳುವ ರಣಬೀರ್ ನುಡಿಸಾಲುಗಳ ನಡುವೆ ಬೇರೆ ಅರ್ಥವೂ ಹಣಕುತ್ತದೆ.

`ಬರ್ಫಿ~ ಚಿತ್ರದಲ್ಲಿ ಕಿವುಡ ಹಾಗೂ ಮೂಗನ ಪಾತ್ರ ರಣಬೀರ್‌ಗೆ ಸಿಕ್ಕಿದೆ. `ರಾಕ್‌ಸ್ಟಾರ್~ ಬಗ್ಗೆ ನಿರೀಕ್ಷೆಗಳ ನಿರಿಗೆಗಳಿವೆ. ನಿತ್ಯವೂ ಕನಿಷ್ಠ ಒಂದು ಸ್ಕ್ರಿಪ್ಟ್ ಮನೆ ತಲುಪುತ್ತಿದೆ. ಹೀಗಾಗಿ ರಣಬೀರ್‌ಗೆ ಕೈತುಂಬಾ ಕೆಲಸ. ಯಾರೇ ಪ್ರಶ್ನೆ ಕೇಳಿದರೂ ದೀಪಿಕಾ, ಸೋನಂ ಹೆಸರು ಸುಳಿದು ಹೋಗುವುದು ಮಾಮೂಲು. ಅದಕ್ಕೆ ಉತ್ತರಗಳನ್ನು ಕೊಡಲು ಕೂಡ ಅವರು ಬೇಸರ ಪಡುತ್ತಿಲ್ಲ.

`ಒಂದು ಸಂಬಂಧದಲ್ಲಿ ನಾನು ಮೋಸ ಹೋದೆನೆಂಬುದು ಸತ್ಯ. ಈಗ ಭೂಮಿ ಬಗೆಯುತ್ತಿದ್ದೇನೆ. ನಮ್ಮ ಜನರೇಷನ್‌ನ ಹುಡುಗರು ನಟನೆಯಲ್ಲಿ ಛಾಪು ಮೂಡಿಸದೇ ಇದ್ದರೆ ಬಾಲಿವುಡ್‌ನಲ್ಲಿ ಇನ್ನು ಇಪ್ಪತ್ತು ವರ್ಷ ಖಾನ್‌ಗಳ ಕಾರುಬಾರೇ ನಡೆಯುತ್ತದೆ. ಸುಮ್ಮನೆ ಮಾತಿನ ಗಾಳಿಪಟ ಹಾರಿಸುವುದರ ಬದಲು ಕಷ್ಟಪಟ್ಟು ಕೆಲಸ ಮಾಡುವುದು ಸೂಕ್ತ~ ಎಂದು ಮಾತಿನ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದು ಆತ್ಮವಿಶ್ವಾಸದ ನಗೆ ನಗುತ್ತಾರೆ ರಣಬೀರ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.