ADVERTISEMENT

ರಾಜಿಗೆ ಒಲ್ಲದ ಕೃಷ್ಣ ಸುಂದರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ನೀಳಕಾಯದ ಕಾರಣ ರ‌್ಯಾಂಪ್‌ನಲ್ಲಿ ಸಿಕ್ಕ ಯಶಸ್ಸು ಕಾಜಲ್ ಮನದಲ್ಲಿ ಸಿನಿಮಾಕ್ಕೂ ಕಾಲಿಡಬೇಕು ಎನ್ನುವ ಆಸೆ ಮೂಡಿಸಿತು. ಆದರೆ ಅವಕಾಶ ಹುಡುಕಲು ಹೊರಟಾಗ ಕಂಡಿದ್ದು ಬಣ್ಣದ ಲೋಕದ ಕರಾಳ ಮುಖ. `ಅಬ್ಬಾ ಹೀಗೆಲ್ಲಾ ನಡೆಯುತ್ತದೆಯೇ?~ ಎಂದು ಬೆವರಿ ನೀರಾದಳು. ಆದ್ದರಿಂದ ಮತ್ತೆ ರ‌್ಯಾಂಪ್ ಮತ್ತು ರನ್‌ವೇ ಫ್ಯಾಷನ್ ಕಡೆಗೆ ತಿರುಗಿತು ಚಿತ್ತ. ಒಳ್ಳೆಯ ರೀತಿಯಲ್ಲಿ ನಡೆದು ಅವಕಾಶ ಗಿಟ್ಟಿಸುವುದೇ ಕಷ್ಟ ಎನ್ನುವಂಥ ಅಭಿಪ್ರಾಯವೂ ಇವಳ ಮನದಲ್ಲಿ ಗಟ್ಟಿಯಾಗಿಬಿಟ್ಟಿದೆ.

ಆದರೂ ಎಂದಾದರೊಂದು ದಿನ ಒಳಿತುಗಳ ರಾಜಮಾರ್ಗದಲ್ಲಿ ಉತ್ತಮವಾದ ಅವಕಾಶವೊಂದು ಹುಡುಕಿಕೊಂಡು ಬರುತ್ತದೆ ಎನ್ನುವ ಆಶಯ. ಸದ್ಯಕ್ಕೆ ಕಾಜಲ್ ಬದುಕು ಫ್ಯಾಷನ್ ಪ್ರದರ್ಶನಗಳಿಂದ ಸಾಗಿದೆ. ಬರೆಯುವ ಹವ್ಯಾಸ ಹಾಗೂ ಹಾಡುವ ಕಲೆಯ ಸಾಂಗತ್ಯವೂ ಇದೆ. ಮೀನುಕಂಗಳಲ್ಲಿ ಕನಸುಗಳನ್ನು ಕಟ್ಟಿಕೊಂಡಿರುವ ಈ ಬೆಡಗಿಯ ಜೊತೆ ಮಾತಿಗಿಳಿದರೆ ಪುಟ್ಟ ಅನುಭದ ಜೊತೆಗೆ ಕೆಟ್ಟ ಜನರ ಚಿತ್ರವೂ ಕಣ್ಣೆದುರು ಬಂದು ನಿಲ್ಲುತ್ತದೆ...

ಫ್ಯಾಷನ್ ಜಗತ್ತಿನಲ್ಲಿ ಕಾಜಲ್ ಸ್ಥಾನ?
ಇನ್ನೂ ಹೊಸಬಳು. ಆದರೆ ಒಂದಿಷ್ಟು ಒಳ್ಳೆ ಪ್ರಾಜೆಕ್ಟ್ ಮಾಡಿದ್ದೇನೆ. ಚೆನ್ನೈ ಮೂಲದ ಆಭರಣ ಕಂಪೆನಿಗೆ ರೂಪದರ್ಶಿ ಆಗಿದ್ದು ಆರಂಭ. ಆನಂತರ ಅನೇಕ ಬ್ರಾಂಡ್‌ಗಳ ಚಿನ್ನಾಭರಣ ತೊಟ್ಟುಕೊಂಡು ತೆರೆಯ ಮೇಲೆ ಹಾಗೂ ಮುದ್ರಣ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇನೆ. ಜೀ ನೆಟ್‌ವರ್ಕ್‌ನ ಶೈಕ್ಷಣಿಕ ಕೇಂದ್ರಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಸಿಕ್ಕ ಸಂತಸ ಹೆಚ್ಚು. ಫ್ಯಾಷನ್ ಹಾಗೂ ನಟನೆ ಜೊತೆಗೆ ಬರೆಯುವ ಹವ್ಯಾಸವೂ ಇದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಮೂರು ಭಾಷೆಯ ಮೇಲೆ ಹಿಡಿತ ಇದೆ ಎಂದುಕೊಂಡಿದ್ದೇನೆ. ಹಿಂದಿಯಲ್ಲಿ `ಹೃದಯ ತಟ್ಟುವ ಪದಗಳ ಹಾಡು~ ನನ್ನ ಮೊದಲ ಪ್ರಯತ್ನ. ಅದನ್ನು ಮುಂಬೈನ ಕಂಪೆನಿಯೊಂದು ಆಲ್ಬಮ್ ಮಾಡಿದೆ. ಕನ್ನಡದ ರವಿಚಂದ್ರನ್ ಅವರ ಜೊತೆಗೂ ಕೆಲಸ ಮಾಡಿದ್ದೇನೆ. ಸಿನಿಮಾ ಸಂಗೀತ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಅಪಾರ ಜ್ಞಾನ ಹೊಂದಿರುವ ಪ್ರತಿಭಾವಂತರಾಗಿದ್ದಾರೆ ಅವರು.

ಗಳಿಸಿದ ಅನುಭವ?
ರವಿಚಂದ್ರನ್ ಅವರಂಥ ಖ್ಯಾತನಾಮರ ಜೊತೆಗೆ ಕೆಲಸ ಮಾಡುವುದೆಂದರೆ ಅನುಭವ ವೃದ್ಧಿಗೊಳಿಸಿಕೊಳ್ಳುವ ಮಹಾ ಪಾಠಶಾಲೆ ಸೇರಿದಂತೆ. ಆದರೆ ದೊಡ್ಡ ಆಲದ ಮರದ ಅಡಿಯಲ್ಲಿ ಪುಟ್ಟ ಸಸಿಗಳು ಬೆಳೆಯುವುದಿಲ್ಲ! ವೈಯಕ್ತಿಕವಾಗಿ ರೂಪದರ್ಶಿಯಾಗಿ ಹಾಗೂ ಬರಹಗಾರ್ತಿಯಾಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಸವಾಲುಗಳು ಇದ್ದೇ ಇವೆ. ಒಮ್ಮೆ ಹೆಸರು ಗಳಿಸುವವರೆಗೆ ಸಾಹಸ ಮಾಡುತ್ತಲೇ ಇರಬೇಕು.
 
ಮಾತಿನ ಕಲೆ ಬಲ್ಲೆ; ಅದು ಕೂಡ ಈ ಗ್ಲಾಮರ್ ಲೋಕದಲ್ಲಿ ಯಶಸ್ಸಿನ ಹಾದಿ ಹಿಡಿಯಲೊಂದು ಸಾಧನ. ಅಭಿನಯ ಸಾಮರ್ಥ್ಯ ನನಗಿದೆ. ಅದಕ್ಕೆ ಸರಿಯಾದ ಹರಿವೊಂದು ಸಿಗಬೇಕು. ಬಣ್ಣದ ಲೋಕದಲ್ಲಿ ಯಶಸ್ಸು ಸಿಗುವುದು ಅದೃಷ್ಟದ ಬಲದಿಂದ ಮಾತ್ರ. ಅದೇ ಈವರೆಗಿನ ಅನುಭವದಿಂದ ಅರಿತ ಸತ್ಯ.

ಎದುರಾದ ಸವಾಲುಗಳು?
ಒಂದೇ ಒಂದು ಸವಾಲು ಈ ಇಂಡಸ್ತ್ರಿಯಲ್ಲಿ ನಟಿಯರಿಗೆ ಎದುರಾಗುತ್ತದೆ. ನಾನೂ ಎದುರಿಸಿದ್ದೇನೆ. ಅದೇ `ಕಾಂಪ್ರಮೈಸ್~ ಎನ್ನುವ ಮಹಾಮಾರಿ. ಈ ಪದವೊಂದು ಗ್ಲಾಮರ್ ಲೋಕದಿಂದ ಅಳಿಸಿ ಹೋಗಲೆಂದು ನಿತ್ಯ ದೇವರಿಗೆ ಪ್ರಾರ್ಥನೆ ಮಾಡುತ್ತೇನೆ. ಯಶಸ್ಸಿನ ಎತ್ತರಕ್ಕೆ ಏರಿದ ಅದೆಷ್ಟೋ ನಟಿಯರು ಈ ಪದದ ಅನುಭವ ಆಗಿಲ್ಲವೆಂದು ಹೇಳಿದ್ದನ್ನು ಓದಿದ್ದೇನೆ. ಆದರೂ ಅವರ ಮಾತು ಸತ್ಯವೆಂದು ನಾನಂತೂ ದೇವರಾಣೆ ನಂಬಿಲ್ಲ. ಪ್ರತಿಭೆಗೆ ಬೆಲೆ ನೀಡುವ ಬದಲು `ಅಡ್ಜಸ್ಟ್‌ಮೆಂಟ್~ ಮಾಡಿಕೊಳ್ಳಲು ಹೇಳುವ ಜನರು ಇರುವವರೆಗೆ ಈ ಇಂಡಸ್ಟ್ರಿಯು ಸಾಕಷ್ಟು ಪ್ರತಿಭಾವಂತರನ್ನು ಕಳೆದುಕೊಳ್ಳುತ್ತಲೇ ಇರುತ್ತದೆ. ಇಂಥದೊಂದು ಅವಕಾಶ ಗಿಟ್ಟಿಸುವ ಅಡ್ಡದಾರಿಗೆ ಕರೆಯುವವರನ್ನು ಮಾತ್ರ ನಾನು ದೂರುವುದಿಲ್ಲ. ಆ ಹಾದಿಯಲ್ಲಿ ನಡೆಯುವ ಯುವತಿಯರ ವರ್ತನೆಯನ್ನೂ ಆಕ್ಷೇಪಿಸುತ್ತೇನೆ. ಎಲ್ಲರೂ ಇಲ್ಲವೆಂದು ಗಟ್ಟಿಯಾಗಿ ನಿರ್ಧರಿಸಲಿ. ಆಗ `ಕಾಂಪ್ರಮೈಸ್~ ಆಗುವಂತೆ ಕೇಳುವ ಮಂದಿಯೂ ಇಲ್ಲವಾಗುತ್ತಾರೆ.

ನಂಬಿರುವ ತತ್ವ?
ನನ್ನ ಪ್ರತಿಭೆಯೇ ನನ್ನ ಬಲ. ಅಡ್ಡದಾರಿಯನ್ನೆಂದೂ ಹಿಡಿಯುವುದಿಲ್ಲ. ಅವಕಾಶ ಕಡಿಮೆ ಆಗಬಹುದು. ಆತ್ಮವಂಚನೆ ಮಾಡಿಕೊಂಡ ಕೊರಗು ಆಗ ಇರುವುದಿಲ್ಲ. `ಶಾರ್ಟ್‌ಕಟ್~ ಒಪ್ಪಿಲ್ಲ; ಮುಂದೆಯೂ ಒಪ್ಪುವುದಿಲ್ಲ. ಭವಿಷ್ಯದಲ್ಲಿ ಭೂತವಾಗಿ ಎದ್ದುನಿಂತು ಕಾಡುವಂಥ ಕೆಲಸವನ್ನಂತೂ ಮಾಡುವುದಿಲ್ಲ. ಈ ಗ್ಲಾಮರ್ ಲೋಕದಲ್ಲಿರುವ ಎಲ್ಲ ನನ್ನ ಸಹೋದರಿಯರೂ ಇದೇ ತತ್ವ ಪಾಲಿಸಬೇಕು ಎನ್ನುವುದು ನನ್ನ ಆಶಯ.

ಮನೆಮಂದಿಯಿಂದ ಸಿಗುತ್ತಿರುವ ಬೆಂಬಲ?
ಶಿಸ್ತಿನ ಹುಡುಗಿ ಎನ್ನುವುದು ಅವರಿಗೆ ಗೊತ್ತು. ಆದ್ದರಿಂದ ಅಡ್ಡಿ ಮಾಡಿಲ್ಲ. ನಾನು ತುಂಬಾ ಪ್ರೀತಿಸುವುದು ನನ್ನ ಕುಟುಂಬದ ಸದಸ್ಯರನ್ನು. ಅಪ್ಪ ವಾಯುಸೇನೆಯ ಮಾಜಿ ಅಧಿಕಾರಿ, ನನ್ನ ಸ್ವೀಟ್ ಅಮ್ಮನಿಗೆ ಮನೆಯ ಕಾಳಜಿ. ಅಣ್ಣ ಐಟಿ ಕಂಪೆನಿಯೊಂದರಲ್ಲಿ ಹಿರಿಯ ವ್ಯವಸ್ಥಾಪಕ. ಅವರಿಗೆ ನಾನೇನು ಎನ್ನುವುದು ಗೊತ್ತು. ಸಭ್ಯತೆಯ ಎಲ್ಲೆಯನ್ನು ಎಲ್ಲಿಯೂ ಮೀರುವುದಿಲ್ಲ ಎನ್ನುವ ನಂಬಿಕೆ ಕೂಡ ಹೊಂದಿದ್ದಾರೆ. ಆ ವಿಶ್ವಾಸವನ್ನು ಕಾಯ್ದುಕೊಂಡು ಹೋಗುವುದು ನನ್ನ ಕರ್ತವ್ಯ.

ಮೆಚ್ಚಿಕೊಂಡ ನಟಿ ಹಾಗೂ ಮುಂದಿನ ಗುರಿ?
ಬಾಲಿವುಡ್‌ನ ಕಾಜಲ್; ಅವಳಂತೆ ನಾನು ಕನ್ನಡದ ಕಾಜಲ್ ಆಗಬೇಕು...! ಆ ಕಾಜಲ್ ನಟನೆ ಇಷ್ಟ. ಅಷ್ಟೇ ಸಹಜವೆನಿಸುವ ಅಭಿನೇತ್ರಿಯಾಗಬೇಕು. `ಸ್ಟಾರ್~ ಅನಿಸಿಕೊಳ್ಳುವುದಕ್ಕಿಂತ ಉತ್ತಮ ನಟಿ ಎನಿಸಿಕೊಳ್ಳುವುದು ಗುರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.