ರೀಮೇಕ್ ಮಾಡುವುದು ನನ್ನ ಮಕ್ಕಳಿಗೆ ಇಷ್ಟವೇ ಇಲ್ಲ ಎಂದು ಅನಿಲ್ ಕಪೂರ್ ಹೇಳುತ್ತಿದ್ದಾರೆ. `ನಾಯಕ್~, `ವಿರಾಸತ್~, `ಬೇಟಾ~ಗಳಂಥ ರೀಮೇಕ್ ಯಶಸ್ವಿ ಚಿತ್ರ ನೀಡಿರುವ ಅನಿಲ್ ಕಪೂರ್‌ನ ಮಕ್ಕಳು ಮಾತ್ರ ರೀಮೇಕ್ ಎಂದರೆ ಖಡಾಖಂಡಿತವಾಗಿ ನಿರಾಕರಿಸುತ್ತಾರಂತೆ.
ಚಲನಚಿತ್ರ ನಟಿ ಸೋನಂ ಕಪೂರ್, ನಿರ್ಮಾಪಕಿ ರಿಯಾ ಮತ್ತು ಮಗ ಹರ್ಷವರ್ಧನ್ ಕೇವಲ ಸ್ವಂತ ಚಿತ್ರಗಳನ್ನೇ ಮಾಡಬೇಕೆಂಬುದು ತಮ್ಮಿಷ್ಟ ಎಂದು ತಿಳಿಸಿದ್ದಾರೆ. ಅವರಿಗೆ ಸ್ವಾತಂತ್ರ್ಯ ಬೇಕು. ತಮ್ಮ ಪರಿಕಲ್ಪನೆಯಲ್ಲಿಯೇ ಸ್ಕ್ರಿಪ್ಟ್ ಬೆಳೆಯಬೇಕು ಎಂಬ ಹಟ.
ಪುಸ್ತಕಗಳನ್ನು ಚಿತ್ರಕ್ಕಾಗಿ ಅಳವಡಿಸಬೇಕು. ಅಥವಾ ತಾವೇ ಸ್ಕ್ರಿಪ್ಟ್ ತಯಾರಿಸಬೇಕು ಎಂದೂ ಇಷ್ಟ ಪಡುತ್ತಾರೆ ಎಂದು ಅನಿಲ್ ಕಪೂರ್ ಮಕ್ಕಳ ಬಗ್ಗೆ ಅಭಿಮಾನದಿಂದ ಹೇಳಿಕೊಂಡಿದ್ದಾರೆ.
`ಹೊಸ ತಲೆಮಾರು, ಹೊಸ ಮನೋಭಾವ. ಸಿದ್ಧ ಸೂತ್ರಗಳಲ್ಲಿ ಇವರು ಕೆಲಸ ಮಾಡುವುದನ್ನು ಒಪ್ಪುವುದೇ ಇಲ್ಲ. ರೀಮೇಕ್‌ಗಳು ಯಶಸ್ವಿಯಾಗುತ್ತವೆ ಎಂದೆಲ್ಲ ಮನವರಿಕೆ ಮಾಡಿ, ಅವರ ದಾರಿ ತಪ್ಪಿಸುವ ಪ್ರಯತ್ನವನ್ನೂ ಮಾಡಿದ್ದೇನೆ. ಆದರೆ ಅವರು `ಅಪ್ಪ ನೀವು ಮಾಡಿದ್ದೀರಲ್ಲ, ಸಾಕು. ನಾವು ಮಾಡುವುದಿಲ್ಲ~ ಎಂದು ಸ್ಪಷ್ಟವಾಗಿಯೇ ಉತ್ತರಿಸುತ್ತಾರೆ ಎಂದು ಅನಿಲ್ ನಸುನಗುತ್ತ ಹೇಳುತ್ತಾರೆ.
ಅನಿಲ್ ಕಪೂರ್ 2002ರಲ್ಲಿ `ಬಧಾಯಿ ಹೋ ಬಧಾಯಿ~ ಚಿತ್ರದ ಮೂಲಕ ಚಿತ್ರ ನಿರ್ಮಾಣ ಆರಂಭಿಸಿದರು. 2005ರಲ್ಲಿ `ಮೈ ವೈಫ್ಸ್ ಮರ್ಡರ್~, 2007ರಲ್ಲಿ `ಗಾಂಧಿ, ಮೈ ಫಾದರ್~ 2011ರಲ್ಲಿ `ಆಯೆಶಾ~ ಚಿತ್ರಗಳನ್ನು ನಿರ್ಮಿಸಲಾಗಿದೆ. ಸದ್ಯ `ಹೀರೊಗಿರಿ~ ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿದ್ದಾರೆ.
ಇವರ ನಿರ್ಮಾಣದ ಎಲ್ಲ ಚಿತ್ರಗಳನ್ನೂ ಪುಸ್ತಕದಿಂದಲೇ ತೆಗೆದುಕೊಳ್ಳಲಾಗಿದೆ. `ಹೀರೊಗಿರಿ~ ಸಹ ಪುಸ್ತಕದಿಂದಲೇ ಪ್ರೇರಿತ. ಆದರೆ ಸ್ಕ್ರೀನ್‌ಪ್ಲೇ ಓದಿದರೆ ಅದು ಸಹ ಸಂಪೂರ್ಣವಾಗಿ ಒರಿಜಿನಲ್ ಎಂದೇ ಎನಿಸುತ್ತದೆ ಎಂದೆಲ್ಲ ಅನಿಲ್ ಕಪೂರ್ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.