ADVERTISEMENT

ಲಿಮಿಟ್ ಲೋಕ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST
ಲಿಮಿಟ್ ಲೋಕ
ಲಿಮಿಟ್ ಲೋಕ   

ವೇದಿಕೆ ಮೇಲಿದ್ದ ಕುರ್ಚಿಗಳೆಲ್ಲಾ ಭರ್ತಿ. ಕಲಾವಿದರ ದಂಡಿನ ಮಧ್ಯೆ ಅನಂತನಾಗ್ ಬಿಳಿ ಜುಬ್ಬ ಮಿಂಚುತ್ತಿತ್ತು. ಅವರ ಬಾಯಲ್ಲಿ ಚೂಯಿಂಗ್‌ಗಮ್. ಹಿಂದಿನ ದಿನವಷ್ಟೇ ಭಾರತವು ಪಾಕಿಸ್ತಾನವನ್ನು ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೋಲಿಸಿದ ಕ್ಷಣಗಳನ್ನು ಅವರು ಕಣ್ತುಂಬಿಕೊಂಡಿದ್ದರು. ಅಗೆಯುತ್ತಿದ್ದ ಚೂಯಿಂಗ್‌ಗಮ್ ಜೊತೆಗೆ ಕ್ರಿಕೆಟ್ ನೆನಪುಗಳೂ ಬೆರೆತಿದ್ದವು. ಯಾಕೆಂದರೆ, ಹಿಂದಿನ ದಿನವೂ ಅವರು ಚೂಯಿಂಗ್‌ಗಮ್ ಅಗೆಯುತ್ತಲೇ ಕ್ರಿಕೆಟ್ ನೋಡಿದ್ದರು. ಹೆಂಡತಿ, ಮಗಳ ಜೊತೆ ತಲಾ ಒಂದು ಸಾವಿರ ರೂಪಾಯಿ ಬೆಟಿಂಗ್ ಕಟ್ಟಿ ಸೋತಿದ್ದರು. ಇದು ಅವರ ಸಿನಿಮೇತರ ಚಟುವಟಿಕೆ. ವೇದಿಕೆ ಹತ್ತಲು ಕಾರಣ ‘ಲಿಮಿಟ್’ ಹಾಗೂ ‘ಮತ್ತೊಂದ್ ಮದುವೇನಾ’ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅವರು ಅಭಿನಯಿಸಿರುವುದು.

ದಿನೇಶ್ ಬಾಬು ನಿರ್ದೇಶನದಲ್ಲಿ ಅನಂತನಾಗ್ ಹದಿನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅನುಭವದ ಪ್ರಕಾರ ಸಮಾಜದ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿಯುವ ಚಿತ್ರಗಳನ್ನೇ ದಿನೇಶ್ ಬಾಬು ಮಾಡುತ್ತಾರೆ. ಅಪ್ಪ-ಅಮ್ಮ ಕಷ್ಟಪಟ್ಟು ಬೆಳೆಸುವ ಮಕ್ಕಳು ಮುಂದೆ ಅದೇ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಕಳಿಸುವುದೋ ಹುಚ್ಚಾಸ್ಪತ್ರೆಗೆ ಸೇರಿಸುವುದೋ ಎಂದು ಯೋಚಿಸುವ ದಾರುಣ ಸ್ಥಿತಿಯನ್ನು ದಿನೇಶ್ ಬಾಬು ‘ಲಿಮಿಟ್’ ಚಿತ್ರದಲ್ಲಿ ತೋರಿಸಿದ್ದಾರಂತೆ. ‘ನಾನು ನಿಮಿತ್ತ. ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ. ನೋಡಿದವರೆಲ್ಲಾ ಅಯ್ಯೋ ಪಾಪ ಎಂಬ ಭಾವನೆ ಮೂಡುವಂತೆ ಅಭಿನಯಿಸಿದ್ದೇನೆ ಎಂದರು. ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂಬುದು ಖಾತರಿಯಾಗುವುದೇ ಇಂಥ ಮಾತುಗಳಿಂದ’ ಎಂದು ಅನಂತ್ ತಮ್ಮ ಮಾತನ್ನು ಚುಟುಕಾಗಿಸಿದರು.

ಹಿರಿಯ ನಟ ಶ್ರೀನಿವಾಸಮೂರ್ತಿಯವರಿಗೆ ನಿರ್ಮಾಪಕರಾದ ಉಮೇಶ್ ಬಣಕಾರ್ ಹಾಗೂ ಅನಿಲ್ ವೆುಣಸಿನಕಾಯಿ ಒಂದಾದ ಮೇಲೊಂದರಂತೆ ಎರಡು ಚಿತ್ರಗಳನ್ನು ನಿರ್ಮಿಸಿರುವುದು ಅಚ್ಚರಿಯ ಸಂಗತಿಯಾಗಿ ಕಂಡಿದೆ.

‘ಲಿಮಿಟ್’ ಚಿತ್ರದ ನಾಯಕ ಅಕ್ಷಯ್‌ಗೆ ಡಬ್ಬಿಂಗ್ ಮಾಡುವಾಗಲೇ ಹೊಟ್ಟೆ ಹುಣ್ಣಾಗುವಷ್ಟು ನಗು ಬಂತಂತೆ. 
‘ಮತ್ತೊಂದ್ ಮದುವೇನಾ’ ಚಿತ್ರವು ಈ ವಾರ ತೆರೆಕಾಣುತ್ತಿದ್ದು, ಆ ಚಿತ್ರದ ನಾಯಕ ನವೀನ್ ಕೃಷ್ಣ ಕೂಡ ನಕ್ಕು ನಕ್ಕು ಸುಸ್ತಾಗುವ ಸಿನಿಮಾ ಬರುತ್ತಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ‘ಅಮೃತ ವರ್ಷಿಣಿ’ ಚಿತ್ರ ನೋಡಿ ದಿನೇಶ್ ಬಾಬು ಅವರ ಅಭಿಮಾನಿಯಾದ ನಟಿ ಪ್ರಿಯಾಂಕಾ ಚಂದ್ರ, ಅವರದ್ದೇ ಚಿತ್ರದ ನಾಯಕಿಯಾಗುವ ಅವಕಾಶದಿಂದಾಗಿ ಭಾವುಕತೆಯಲ್ಲಿ ಒದ್ದೆಮುದ್ದೆಯಾಗಿದ್ದರು.

‘ಲಿಮಿಟ್’ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಡುಗಳ ಬಗ್ಗೆ ಮಾತಾಡಲು ಹೆಚ್ಚೇನೂ ಇರಲಿಲ್ಲ. ಯಾಕೆಂದರೆ, ಚಿತ್ರದಲ್ಲಿ ಇರುವುದು ಎರಡೇ ಹಾಡು. ಗಂಧರ್ವ ಎರಡಕ್ಕೂ ಸಾಹಿತ್ಯ ಬರೆದು, ರಾಗ ಸಂಯೋಜನೆ ಮಾಡಿದ್ದಾರೆ. ‘ಮತ್ತೊಂದ್ ಮದುವೇನಾ’ ಚಿತ್ರದ ಒಂದೇ ಹಾಡಿಗೆ ಮಟ್ಟು ಹಾಕಿರುವ ಗಿರಿಧರ್ ದಿವಾನ್ ಕೂಡ ಸಮಾರಂಭದಲ್ಲಿದ್ದರು.

ಬರೀ ಎರಡೇ ಹಾಡುಗಳ ಸೀಡಿ ಕೈಲಿಡುವುದು ಹೇಗೆ? ಅದಕ್ಕೇ ಸೀಡಿ ಮೇಲೆ ‘ಬಣ್‌ಕಾರ್ ಹಿಟ್ಸ್’ ಎಂಬ ಲೇಬಲ್ ಇತ್ತು. ಝಂಕಾರ್ ಆಡಿಯೋ ಕಂಪೆನಿಯವರು ಉಮೇಶ್ ಬಣಕಾರ್ ಅವರ ಆಯ್ಕೆಯನ್ನೇ ಕೇಳದೆ ಅವರು ಇಷ್ಟಪಟ್ಟ ಹಾಡುಗಳು ಸೀಡಿಯಲ್ಲಿವೆ ಎಂಬುದನ್ನು ಸೂಚ್ಯವಾಗಿ ತಿಳಿಸಲು ಆ ಲೇಬಲ್ ಬಳಸಿದ್ದರು. ‘ನಾನು ಹೇಳೇ ಇಲ್ಲ. ಅವರೇ ಹಾಕಿಬಿಟ್ಟಿದ್ದಾರೆ...’ ಎಂದು ಬಣಕಾರ್ ಪೇಚಾಡಿಕೊಂಡರಷ್ಟೆ.

ಎಲ್ಲರ ಮಾತಿಗೂ ಸಾಕ್ಷಿಯಾದ ದಿನೇಶ್ ಬಾಬು ವೇದಿಕೆ ಮೇಲೆ ಮಾತ್ರ ಏನೊಂದನ್ನೂ ಮಾತನಾಡಲಿಲ್ಲ. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎ.ಎಸ್.ಮೂರ್ತಿಯವರನ್ನು ಚಿತ್ರತಂಡ ಸನ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.