ADVERTISEMENT

‘ವರ್ತಮಾನ’ಕ್ಕೆ ಭವಿಷ್ಯದಲ್ಲಿ ನಂಬಿಕೆ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
ಸಂಚಾರಿ ವಿಜಯ್ ಮತ್ತು ಸಂಜನಾ ಪ್ರಕಾಶ್
ಸಂಚಾರಿ ವಿಜಯ್ ಮತ್ತು ಸಂಜನಾ ಪ್ರಕಾಶ್   

ಮನುಷ್ಯ ಸದಾ ಭೂತ– ಭವಿಷತ್‌ಗಳ ಎಳೆಯಲ್ಲಿ ಬಂದಿಯಾಗಿರುತ್ತಾನೆ. ಈ ಎರಡರಲ್ಲಿಯೇ ಮಾನಸಿಕವಾಗಿ ತೊಳಲುತ್ತಿರುವ ಅವನಿಗೆ ವರ್ತಮಾನದ ಮಹತ್ವದ ಬದುಕು ಸೋರಿಹೋಗುತ್ತಿರುವುದು ತಿಳಿಯುವುದೇ ಇಲ್ಲ. ‘ವರ್ತಮಾನ’ದ ಮಹತ್ವ, ಅದನ್ನು ಬದುಕಬೇಕಾದ ರೀತಿ, ಅದನ್ನು ಅರ್ಥಮಾಡಿಕೊಳ್ಳಬೇಕಾದ ಬಗೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಉಮೇಶ್ ಅಂಶಿ. ಅದರ ಹೆಸರೂ ‘ವರ್ತಮಾನ’.

ಕಳೆದ ಮೂರು ವರ್ಷಗಳಿಂದ ಅವಿರತವಾಗಿ ಶ್ರಮಿಸಿ ರೂಪಿಸಿರುವ ಈ ಚಿತ್ರವನ್ನು ಅವರು ಇದೇ ವಾರ ತೆರೆಗೆ ತರಲಿದ್ದಾರೆ.

ಅಂದಹಾಗೆ ಈ ವಾರ ಒಟ್ಟು ಹನ್ನೊಂದು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಇಷ್ಟೆಲ್ಲ ಚಿತ್ರಗಳ ಜತೆಗೆ ಬಂದರೆ ನೀವು ಗೆಲ್ಲುತ್ತೀರಾ? ಎಂಬ ಪ್ರಶ್ನೆಗೆ ಆತ್ಮವಿಶ್ವಾಸದಿಂದಲೇ ಉತ್ತರ ಕೊಡುತ್ತಾರೆ ಉಮೇಶ್‌.

ADVERTISEMENT

‘ನಮ್ಮದು ಪೂರ್ತಿ ಬೇರೆ ಬಗೆಯ ಚಿತ್ರ. ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಯಾರೂ ಇಂಥ ಪ್ರಯತ್ನ ಮಾಡಿಲ್ಲ. ಹಾಗೆಯೇ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ಬಗೆಯ ಭಿನ್ನ ಚಿತ್ರಗಳನ್ನು ಜನರು ಸೋಲಿಸಿಲ್ಲ. ಅಲ್ಲದೆ ಇದು ನಗರದ ಕಥೆ ಒಳಗೊಂಡಿರುವ ಸಿನಿಮಾ. ಈ ಚಿತ್ರದ ಪ್ರೇಕ್ಷಕರೂ ಮುಖ್ಯವಾಗಿ ನಗರವಾಸಿಗಳೇ ಆಗಿರುತ್ತಾರೆ. ಆದ್ದರಿಂದ ಮಲ್ಟಿಪ್ಲೆಕ್ಸ್‌ ಅನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಎಲ್ಲ ಮಲ್ಟಿಪ್ಲೆಕ್ಸ್‌ನವರೂ ಸಹಕಾರ ನೀಡಲು ಒಪ್ಪಿದ್ದಾರೆ’ ಎಂದರು.

ಇದುವರೆಗೆ ಈ ಚಿತ್ರವನ್ನು ಯಾವ ಕಲಾವಿದರೂ ಪೂರ್ತಿಯಾಗಿ ನೋಡಿಲ್ಲ. ನಾಯಕ, ನಾಯಕಿಗೇ ಚಿತ್ರದ ಕಥೆ ಏನೆಂದು ಗೊತ್ತಿಲ್ಲ. ಇದು ಅವರ ಅಸಡ್ಡೆಯಿಂದ ಆಗಿದ್ದಲ್ಲ. ನಿರ್ದೇಶಕರು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರಂತೆ.

‘ಪ್ರತಿದಿನ ನಾನು ಸೆಟ್‌ಗೆ ಹೋಗುತ್ತಿದ್ದೆ. ಅಲ್ಲಿ ನಿರ್ದೇಶಕರು ಹೇಳಿದ ಸೀನ್‌ಗಳಲ್ಲಿ ನಟಿಸಿ ಬರುತ್ತಿದ್ದೆ. ಇಷ್ಟು ಬಿಟ್ಟರೆ ನನಗೆ ನನ್ನ ಪಾತ್ರದ ಬಗ್ಗೆಯಾಗಲಿ, ಅದು ಸಿನಿಮಾದಲ್ಲಿ ಯಾವ ರೀತಿ ಬರುತ್ತದೆ ಎಂಬ ಬಗ್ಗೆಯಾಗಲಿ ಏನೂ ಗೊತ್ತಿಲ್ಲ. ಆದರೆ, ನನಗೆ ನಿರ್ದೇಶಕರ ಮೇಲೆ ಭರವಸೆ ಇದೆ’ ಎಂದರು ನಾಯಕಿ ಸಂಜನಾ ಪ್ರಕಾಶ್‌.

‘ಇದು ಭೂತ, ಭವಿಷ್ಯಗಳ ನಡುವೆ ಸಿಲುಕಿಕೊಂಡ ವ್ಯಕ್ತಿಯೊಬ್ಬನ ತೊಳಲಾಟ. ಮಾಮೂಲಿ ಮಾದರಿಗಿಂತ ಬೇರೆ ರೀತಿಯಲ್ಲಿ ಸಿನಿಮಾ ಕಟ್ಟಿದ್ದಾರೆ ನಿರ್ದೇಶಕರು. ಹಾಗಾಗಿಯೇ ಉಳಿದ ಸಿನಿಮಾಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಮತ್ತು ಗೆಲ್ಲುತ್ತದೆ’ ಎಂದರು ನಾಯಕ ಸಂಚಾರಿ ವಿಜಯ್‌.

ನಾಯಕ‌ನ ಅಕ್ಕನ ಪಾತ್ರದಲ್ಲಿ ವಾಣಿಶ್ರೀ ನಟಿಸಿದ್ದಾರೆ. ಸರವಣ ಹಿನ್ನೆಲೆ ಸಂಗೀತ ನೀಡಿದ್ದಾರೆ.

‘ಈ ಸಿನಿಮಾದಲ್ಲಿ ಯಾವುದೇ ಹಾಡುಗಳಿಲ್ಲ. ಯಾವುದೂ ಅನುಕ್ರಮಣಿಕೆಯಲ್ಲಿಲ್ಲ. ಯಾವುದೇ ಫಾರ್ಮುಲಾ ಇಲ್ಲದೆ ಮಾಡಿದ ಸಿನಿಮಾ ಇದು’ ಎಂದರು ಸರವಣ.

ವಿಶ್ವನಾಥ ಪೆಡ್ನೇಕರ್‌ ವರ್ತಮಾನಕ್ಕೆ ಸಂಕಲನ ಮಾಡಲು ಆರು ತಿಂಗಳು ತೆಗೆದುಕೊಂಡಿದ್ದಾರಂತೆ. ಗೋವಿಂದರಾಜು ಛಾಯಾಗ್ರಹಣ ಈ ಚಿತ್ರಕ್ಕಿದೆ. ಮನು ಬಿಲ್ಲೆಮನೆ ಮತ್ತು ಹೇಮಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.


ಉಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.