ADVERTISEMENT

`ವಿಜಲ್' ಟೂರಿಂಗ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಕಲಾತ್ಮಕ ಚಿತ್ರಗಳನ್ನು ಹಳ್ಳಿ, ಹಳ್ಳಿಗಳಿಗೆ ತಲುಪಿಸುವ ಸನ್ನಾಹ ನಡೆಯುತ್ತಿದ್ದರೆ, ಇತ್ತ ವ್ಯಾಪಾರಿ ಚಿತ್ರಗಳೂ ಈ ಟೂರಿಂಗ್ ಕಾರ್ಯಕ್ರಮಕ್ಕೆ ಅಣಿಯಾಗುತ್ತಿವೆ. ಈಗ ಆ ಸರದಿ ಪ್ರಶಾಂತ್ ರಾಜ್ ನಿರ್ದೇಶನದ `ವಿಜಲ್'ಗೆ. ಚಿರಂಜೀವಿ ಸರ್ಜಾ, ಪ್ರಣೀತಾ ನಟನೆಯ `ವಿಜಲ್'ನ ಸೀಟಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮೊಳಗಿಸಲು ಚಿತ್ರ ತಂಡ ಮುಂದಾಗಿದೆ. ಅಭಿಯಾನಕ್ಕಾಗಿ ಶೀಘ್ರವೇ ಚಿತ್ರತಂಡ ಪ್ರವಾಸ ಕೈಗೊಳ್ಳಲಿದೆಯಂತೆ.

`ವಿಜಲ್'ನ ಮೊದಲ ಪ್ರತಿ ಸಿದ್ಧಪಡಿಸುವಾಗ ಎದುರಾದ ಸವಾಲಿನ ಬಗ್ಗೆ ಮಾಹಿತಿ ನೀಡುತ್ತಲೇ ಟೂರಿಂಗ್ ಅಭಿಯಾನದ ಯೋಜನೆಯನ್ನು ನಿರ್ದೇಶಕ ಪ್ರಶಾಂತ್ ರಾಜ್ ವಿವರಿಸಿದರು.

ಮಲ್ಟಿಫ್ಲೆಕ್ಸ್‌ಗಳಲ್ಲಿ `ವಿಜಲ್'ನ ಪ್ರೊಮೊಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎನ್ನುವ ಸಂತಸ ಅವರದ್ದು. ಚಿತ್ರ ಹಿಂದಿಗೆ ರೀಮೇಕ್ ಆಗುವ ಸಾಧ್ಯತೆ ಬಗ್ಗೆಯೂ ಸುಳಿವು ನೀಡಿ, ಆ ಚಿತ್ರವನ್ನೂ ತಾವೇ ನಿರ್ದೇಶಿಸುವ ಅವಕಾಶ ಒದಗಿ ಬಂದಿರುವುದಾಗಿ ಹೇಳಿಕೊಂಡರು.

`ವಿಜಲ್'ನ ನಾಲ್ಕು ಹಾಡುಗಳನ್ನು ಪ್ರದರ್ಶಿಸುವ ಮೂಲಕ ಎರಡು ತಿಂಗಳ ಕಾಲ ಶಬ್ದ ಮತ್ತು ಸಂಗೀತದ ಕೆಲಸಕ್ಕೆ ಪರಿಶ್ರಮ ಹಾಕಿರುವುದಾಗಿ ಅವರು ಒತ್ತಿ ಹೇಳಿದರು. ಚಿತ್ರೀಕರಣ ಮುಗಿದ ಮೂರು ತಿಂಗಳ ನಂತರ ಮೊದಲ ಪ್ರತಿ ಸಿದ್ಧವಾಗಿದೆ. ಈ ವೇಳೆಗಾಗಲೇ ತೆರೆಯಲ್ಲಿ ಮೊಳಗಬೇಕಾಗಿದ್ದ `ವಿಜಲ್', ಚಿತ್ರಮಂದಿರದ ಕೊರತೆಯಿಂದ ಜೂನ್ ಮೊದಲ ಅಥವಾ ಎರಡನೇ ವಾರ ಬಿಡುಗಡೆಯಾಗಲಿದೆಯಂತೆ. 

ಚಿತ್ರಕ್ಕೆ ಒಬ್ಬರೇ ನಿರ್ದೇಶಕರಾದರೂ ನಾಯಕ ಚಿರಂಜೀವಿ ಸರ್ಜಾ ಅವರಿಗೆ ಮಾತ್ರ ಮೂವರು ನಿರ್ದೇಶಕರಿಂದ ಮಾರ್ಗದರ್ಶನ ಪಡೆದ ಅನುಭವ. ಈ ಚಿತ್ರ ನನಗೆ ಅದೃಷ್ಟದಂತೆ ಎಂದ ಚಿರು, ಚಿತ್ರದಲ್ಲಿ ನಟಿಸಿರುವ ನಿರ್ದೇಶಕರಾದ ಗುರುಪ್ರಸಾದ್ ಮತ್ತು ಗುರುದತ್ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

`ನನಗೆ ಈ ಚಿತ್ರ ಲಕ್ಕಿ' ಎಂದಷ್ಟೇ ಹೇಳಿ ಮಾತು ನಿಲ್ಲಿಸಿದ ಚಿರಂಜೀವಿ ಸರ್ಜಾರ ಮಾತನ್ನು ಪೂರ್ಣಗೊಳಿಸಿದ್ದು ನಿರ್ದೇಶಕ ಗುರುಪ್ರಸಾದ್. ಇಲ್ಲಿಯವರೆಗೂ ಚಿರಂಜೀವಿಯ ಪಾತ್ರಗಳು ಏಕತಾನತೆಯಂತಿವೆ. ಈ ಚಿತ್ರದಲ್ಲಿ ಹೊಸ ರೀತಿಯಲ್ಲಿ ಪಾತ್ರ ಪ್ರವೇಶಿಸುವ ಮೂಲಕ ಎಲ್ಲ ಪಾತ್ರಗಳನ್ನೂ ನಿರ್ವಹಿಸಬಲ್ಲೆ ಎನ್ನುವಷ್ಟು ಶಕ್ತರಾಗಿದ್ದಾರೆ ಎಂಬುದು ಗುರುಪ್ರಸಾದ್ ಹೊಗಳಿಕೆ. ಚಿತ್ರದಲ್ಲಿ ನಟಿಸುವುದಷ್ಟೇ ಅಲ್ಲದೆ ಸಂಭಾಷಣೆಯನ್ನೂ ಗುರುಪ್ರಸಾದ್ ಬರೆದಿದ್ದಾರೆ. ಅಕ್ಷರಗಳನ್ನು ಮುದ್ದಿಸಿ ಮಾತುಗಳನ್ನು ಪೋಣಿಸಲು ಅವರಿಗೆ ಎರಡು ತಿಂಗಳು ಬೇಕಾಯಿತಂತೆ.

ಎಲ್ಲರಿಂದಲೂ ಮೆಚ್ಚುಗೆ ಸಂದದ್ದು ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಅವರಿಗೆ. ಅವರ ಕ್ಯಾಮೆರಾ ಚಿತ್ರದಲ್ಲಿ ಚಲನಶೀಲವಾಗಿದೆಯಂತೆ. ನಿರ್ಮಾಪಕರಾದ ನವೀನ್, ಪ್ರಸಾದ್, ನಟ ಗುರುದತ್ ಇತರರು ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.