ADVERTISEMENT

`ಶೇಖರ್ ಕಪೂರ್ ಜೊತೆ ಕೆಲಸ ಮಾಡುವ ಆಸೆ'

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಶೇಖರ್ ಕಪೂರ್ ತಮ್ಮ ಹೊಸ ಚಿತ್ರ `ಪಾನಿ'ಗೆ ಪಾತ್ರಗಳನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಈಗಾಗಲೇ ಬಿ ಟೌನ್‌ನಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಮುಖ್ಯ ಪಾತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸಲಿದ್ದಾರೆ ಎಂಬ ಗಾಳಿಸುದ್ದಿಯೊಂದು ಬಲವಾಗಿದೆ.

ಇದೀಗ ಇದನ್ನು ದೃಢಪಡಿಸುವಂತೆ ಹೃತಿಕ್ ರೋಷನ್, ಶೇಖರ್ ಕಪೂರ್ ಜೊತೆಗೆ ಕೆಲಸ ಮಾಡುವುದು ಅವರ ಕನಸು ಎಂದು ಮುಂಬೈನಲ್ಲಿ ಹೇಳಿದ್ದಾರೆ.

ಶೇಖರ್ ಜೊತೆಗೆ ಕೆಲಸ ಮಾಡುವುದೆಂದರೆ ನಟಿಸಲೇಬೇಕು ಎಂದೇನಿಲ್ಲ. ಆ ವ್ಯಕ್ತಿಯೊಂದಿಗೆ ಸಮಯ ಕಳೆಯುವುದೇ ಒಂದು ಅನುಭವ. ಶೇಖರ್ ಒಡನಾಟವೇ ಆನಂದಕರ. ಅವರೊಂದಿಗೆ ಕೆಲಸ ಮಾಡುವುದು ನನ್ನ ಬಹುದಿನದ ಕನಸು. ಕೆಲಸ ಮಾಡಲಾಗದಿದ್ದರೂ ಅವರೊಂದಿಗೆ ಇರುವಂತೆಯಾದರೂ ಆಗಬೇಕು' ಎಂದೆಲ್ಲ ಹೃತಿಕ್ ರೋಷನ್ ಹೇಳಿದ್ದಾರೆ.

`ಪಾನಿ' ಚಿತ್ರಕ್ಕಾಗಿ ಸಹಿ ಹಾಕಿರುವರೆ ಎಂದು ಪ್ರಶ್ನಿಸಿದರೆ, `ಸದ್ಯ ಅದು ನನ್ನ ಕನಸು. ಇದು ಸತ್ಯವಾಗುವ ಸಮಯ ಬರಬಹುದು' ಎಂದು ಮಾತ್ರ ಹೃತಿಕ್ ಹೇಳುತ್ತಿದ್ದಾರೆ.

ನಿರ್ದೇಶಕ ಶೇಖರ್ ಕಪೂರ್, `ಪಾನಿ ಚಿತ್ರದ ಪಾತ್ರಗಳ ಬಗ್ಗೆ ಏನೇನೂ ಪ್ರಶ್ನಿಸಬೇಡಿ. ಇದು 15 ವರ್ಷಗಳ ಹಿಂದೆಯೇ ಸಿದ್ಧಪಡಿಸಿದ್ದ ಪ್ರಾಜೆಕ್ಟ್. ಸೂಕ್ತ ನಿರ್ಮಾಪಕನಿಗಾಗಿ ಹುಡುಕುತ್ತಿದ್ದೆ. ಆದಿತ್ಯ ಚೋಪ್ರಾ ಇದೀಗ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ತೆರೆಕಾಣಲಿದೆ. ಸಿಂಗಪುರದಲ್ಲಿ ಚಿತ್ರೀಕರಣ ನಡೆಯಲಿದೆ' ಎಂಬುದನ್ನು ಮಾತ್ರ ಸ್ಪಷ್ಟಪಡಿಸಿದ್ದಾರೆ.

`ಪಾನಿ' ಚಿತ್ರಕ್ಕೆ ಹೊಸ ಮುಖಗಳನ್ನು ಪರಿಚಯಿಸುವ ಹುಮ್ಮಸ್ಸು ಶೇಖರ್‌ಗೆ ಇದೆ. ಇದಕ್ಕೆ ಆದಿತ್ಯ ಚೋಪ್ರಾ ಸಹ ಅನುಮೋದಿಸಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ನಿರ್ಮಾಪಕ ಹಾಗೂ ನಿರ್ದೇಶಕರು ಇಬ್ಬರೂ ಹೊಸಬರೊಂದಿಗೆ ಕೆಲಸ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಹೊಸಮುಖಗಳನ್ನು ಪರಿಚಯಿಸಿದಾಗ, ಇಬ್ಬರಿಗೂ ಉತ್ತಮ ಪ್ರತಿಕ್ರಿಯೆಗಳೇ ವ್ಯಕ್ತವಾಗಿರುವುದು ಇದಕ್ಕೆ ಕಾರಣ ಇರಬಹುದು ಎಂಬ ಲೆಕ್ಕಾಚಾರವೂ ಈ ಚಿತ್ರದೊಂದಿಗೆ ಇದೆ.

ಸದ್ಯಕ್ಕೆ ಎನ್‌ಡಿಎ (ನಾನ್ ಡಿಸ್‌ಕ್ಲೋಶರ್ ಅಗ್ರಿಮೆಂಟ್) ಅಡಿಯಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿರುವುದರಿಂದ ನಾನೇನೂ ವಿವರಿಸಲಾರೆ ಎಂದು ಶೇಖರ್ ಕಪೂರ್ ಹೇಳುತ್ತಿದ್ದಾರೆ. ಕೆಲ ದಿನಗಳವರೆಗೂ `ಪಾನಿ' ಪಾತ್ರಗಳ ಬಗ್ಗೆ ಇನ್ನು ಸುದ್ದಿಗಳು ಹೀಗೆಯೇ ಹರಡಲಿವೆ.

ಆದರೆ ಈ ಚಿತ್ರದ ನಂತರ ಭಾರತೀಯ ಮಕ್ಕಳಿಗಾಗಿ ಒಂದು ಮಕ್ಕಳ ಚಿತ್ರವನ್ನು ನಿರ್ದೇಶಿಸುವುದಾಗಿಯೂ ಶೇಖರ್ ಕಪೂರ್ ಒಪ್ಪಿಕೊಂಡಿದ್ದಾರೆ. `ಮಿ.ಇಂಡಿಯಾ' ಚಿತ್ರದ ನಂತರ ಮಕ್ಕಳಿಗಾಗಿಯೇ ಒಂದು ಚಿತ್ರ ಮಾಡುವ ಆಸೆ ಇದೆ. ಅದಕ್ಕಾಗಿ ಬೇಕಿರುವ ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದೆ. ಆದರೆ `ಪಾನಿ' ಚಿತ್ರದ ನಂತರವೇ ಆ ಚಿತ್ರದ ಬಗ್ಗೆ ಆರಂಭಿಸುವುದಾಗಿ ಶೇಖರ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.