ADVERTISEMENT

ಸಮ್ಮರ್ ಸಿನಿಮಾ

ವಿಶಾಖ ಎನ್.
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST
ಸಮ್ಮರ್ ಸಿನಿಮಾ
ಸಮ್ಮರ್ ಸಿನಿಮಾ   

ವಿವಾದಪರ್ವ ಮುಗಿದು ಸಿನಿಮಾ ವಿರಾಟಪರ್ವ ಶುರುವಾಗುತ್ತಿದೆ. ಏಪ್ರಿಲ್ ಬಂತೆಂದರೆ ಸಿನಿಮಾಗಳ ಸುಗ್ಗಿ ಎಂದೇ ಅರ್ಥ. ಈ ವರ್ಷ ಕೂಡ ಫಸಲಿನ ಬಗ್ಗೆ ನಿರೀಕ್ಷೆಗಳಿವೆ. ರಮ್ಯಾ ಆರ್ಥಿಕ ನೆರವು ನೀಡಿದ ‘ಸಂಜು ವೆಡ್ಸ್ ಗೀತಾ’ ಯಶಸ್ಸಿನ ಮೂಲಕ ನಿರೀಕ್ಷೆಯ ಗೇಟ್ ತೆರೆದುಕೊಂಡಿದೆ. ದರ್ಶನ್ ಅಭಿನಯದ ‘ಪ್ರಿನ್ಸ್’ ಉತ್ತರ ಕರ್ನಾಟಕದಲ್ಲಿ ಒಂದಿಷ್ಟು ಕಾಸು ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಬಹುತೇಕ ಚಿತ್ರಮಂದಿರಗಳಲ್ಲಿ ‘ಸಂಜು ವೆಡ್ಸ್ ಗೀತಾ’ ಇನ್ನೂ ತೆರೆಕಂಡಿಲ್ಲ. ಸೃಜನಶೀಲ ಚಿತ್ರತಂಡದ ಕಾಳುಗೂಡಿಸುವ ಶ್ರದ್ಧೆಯ ಫಲದಂತೆ ‘ಸಂಜು...’ ಕಂಡರೆ ಹೋಟೆಲ್ ಉದ್ಯಮಿ ಸಂದೇಶ್ ನಾಗರಾಜ್ ಸಾಲುಸಾಲು ಚಿತ್ರಗಳಲ್ಲಿ ಇದೂ ಒಂದು ಎಂಬಂತೆ ‘ಪ್ರಿನ್ಸ್’ ಬಂದಿದೆ. ಆರ್ಥಿಕವಾಗಿ ಎರಡೂ ಚಿತ್ರಗಳ ಧಾಟಿ ಬೇರೆ.

‘ಅರಮನೆ’ ಚಿತ್ರದ ಮೂಲಕ ನವಿರಾದ ಚಿತ್ರಗಳನ್ನು ಕೊಡುವ ಉಮೇದು ಹೊರಹಾಕಿದ್ದ ನಾಗಶೇಖರ್ ಮೂರು ವರ್ಷದ ನಂತರ ಮತ್ತೊಂದು ಚಿತ್ರವನ್ನು ಕೊಟ್ಟಿದ್ದಾರೆ. ರಮ್ಯಾ ವಿವಾದ ಈಗ ತಣ್ಣಗಾಗಿರುವುದರಿಂದ ನಾಗಶೇಖರ್ ಅವರಿಗಿದ್ದ ಆತಂಕದ ಸಣ್ಣ ಗೆರೆಯೂ ಈಗ ಮಾಯ.

ದರ್ಶನ್ ಚಿತ್ರಗಳ ಇತ್ತೀಚಿನ ಕಥೆ ಶೋಚನೀಯ. ‘ಪೊರ್ಕಿ’, ‘ಶೌರ್ಯ’ ಮಕಾಡೆಯಾದ ಮೇಲೆ ಆರಂಭಶೂರತ್ವವನ್ನಷ್ಟೇ ತೋರಿದ ‘ಬಾಸ್’ ದರ್ಶನ್ ಸ್ಟಾರ್‌ಗಿರಿಯ ಕುರಿತು ಅನುಮಾನಗಳನ್ನು ಹುಟ್ಟುಹಾಕಿತ್ತು. ‘ಪ್ರಿನ್ಸ್’ಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿದರೆ ಆ ಅನುಮಾನ ಇನ್ನು ಬಲವಾಗಲಿದೆ.

ವಿಶ್ವಕಪ್ ಕ್ರಿಕೆಟ್‌ನ ಹ್ಯಾಂಗೋವರ್‌ನಲ್ಲಿದ್ದ ಜನತೆ ಥಿಯೇಟರ್‌ಗಳ ಕಡೆ ಮುಖ ಮಾಡುವ ತಿಂಗಳು ಏಪ್ರಿಲ್.

ಶಾಲಾ ಕಾಲೇಜು ಮಕ್ಕಳಿಗೆ ಇದು ರಜೆಯ ಸಮಯ. ಹಾಗಾಗಿ ಯುಗಾದಿಯೊಟ್ಟಿಗೆಯೇ ಸಿನಿಮಾದಲ್ಲೂ ವಸಂತನಾಗಮನ. ಮೇ ತಿಂಗಳಲ್ಲಿ ಪುನೀತ್, ಶ್ರೀನಗರ ಕಿಟ್ಟಿ ಹಾಗೂ ಯೋಗಿ ಅಭಿನಯಿಸಿರುವ ‘ಹುಡುಗರು’ ಬಿಡುಗಡೆಯಾಗಲಿದೆ. ಶಿವರಾಜ್‌ಕುಮಾರ್ ಹಾಗೂ ಪ್ರೇಮ್ ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿರುವ ‘ಜೋಗಯ್ಯ’ ಕೂಡ ತೆರೆಗೆ ಬರುವ ಲಕ್ಷಣಗಳಿವೆ. ಗಣೇಶ್ ಕೂಡ ಇದೇ ಬೇಸಿಗೆಯಲ್ಲಿ ‘ಕೂಲ್’ ಎನ್ನುತ್ತಿದ್ದಾರೆ. ಗಣೇಶ್, ಪುನೀತ್, ದರ್ಶನ್, ಶಿವರಾಜ್‌ಕುಮಾರ್ ಎಲ್ಲರ ಚಿತ್ರಗಳೂ ಒಂದಾದ ಮೇಲೆ ಒಂದರಂತೆ ಬಿಡುಗಡೆಗೆ ಹೀಗೆ ಸಾಲುಗಟ್ಟಿ ತುಂಬಾ ಕಾಲವಾಗಿತ್ತು. ಲೂಸ್ ಮಾದ ಎಂದೇ ಜನಪ್ರಿಯರಾಗಿರುವ ಯೋಗೀಶ್ ಅಭಿನಯದ ಕೆಲವು ಚಿತ್ರಗಳು ಡಬ್ಬಾಗಳಲ್ಲೇ ಇವೆ. ಆ ಪೈಕಿ ‘ಧೂಳ್’ ದೂಳು ಕೊಡವಿಕೊಂಡು ಹೊರಬರಲಿದೆ. ಅದಕ್ಕೆ ಸಿಗುವ ಪ್ರತಿಕ್ರಿಯೆ ಆಧರಿಸಿ ‘ದೇವದಾಸ್’ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಉಂಟು. ಈ ಬೆಳವಣಿಗೆಗಳನ್ನು ಗಮನಿಸಿದರೆ ಚಿತ್ರರಂಗದ ಈ ವರ್ಷದ ಗಳಿಕೆಯ ಬಾಬತ್ತನ್ನು ಮುಂದಿನ ಕೆಲವು ತಿಂಗಳುಗಳು ನಿರ್ಧರಿಸಲಿರುವುದಂತೂ ಸತ್ಯ.

ಇನ್ನು ಶೂಟಿಂಗ್ ಕಡೆಗೆ ನೋಟ ಹರಿಸಿದರೆ, ಯೋಗರಾಜ ಭಟ್ ಅದಾಗಲೇ ‘ಪರಮಾತ್ಮ’ನಿಗೆ ಆ್ಯಕ್ಷನ್, ಕಟ್ ಹೇಳುತ್ತಿದ್ದಾರೆ. ಅಲ್ಲೂ ಪುನೀತ್ ನಾಯಕ. ಕಳೆದ ವರ್ಷ ‘ಕೃಷ್ಣನ್ ಲವ್ ಸ್ಟೋರಿ’ಯಿಂದ ತಮ್ಮ ಸಾಮರ್ಥ್ಯವನ್ನು ಮರು ನಿರೂಪಿಸಿದ ಶಶಾಂಕ್, ವಿಜಯ್ ನಾಯಕತ್ವದಲ್ಲಿ ‘ಜರಾಸಂಧ’ನನ್ನು ತಯಾರು ಮಾಡುತ್ತಿದ್ದಾರೆ. ಇಮೇಜಿನ ಹಂಗನ್ನು ತೊರೆದು ದರ್ಶನ್ ‘ಸಂಗೊಳ್ಳಿ ರಾಯಣ್ಣ’ನಾಗುವ ಕೆಲಸ ಅವಿರತವಾಗಿ ನಡೆದಿದೆ. ಪ್ರೀತಂ ಗುಬ್ಬಿ ‘ಜಾನಿ ಮೇರಾ ನಾಮ್’ ಎನ್ನುತ್ತಿದ್ದರೆ, ಭರವಸೆಯ ಕಥೆಗಾರ ಪವನ್ ಕುಮಾರ್ ‘ಲೈಫು ಇಷ್ಟೇನೆ’ ಮೂಲಕ ನಿರ್ದೇಶನದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಸೂರಿ ಪಟ್ಟಾಗಿ ಕೂತು ‘ಅಣ್ಣಾ ಬಾಂಡ್’ ಸ್ಕ್ರಿಪ್ಟ್ ತಿದ್ದುತ್ತಾ, ಶಿವರಾಜ್‌ಕುಮಾರ್‌ಗೆಂದೇ ‘ಕಡ್ಡಿಪುಡಿ’ ಎಂಬ ಇನ್ನೊಂದು ಚಿತ್ರದ ಯೋಚನೆಯನ್ನೂ ಮಾಡುತ್ತಿದ್ದಾರೆ.

ಈ ವರ್ಷ ‘ಒಲವೇ ಮಂದಾರ’ ಗುಣಮಟ್ಟದ ಸದ್ದು ಮಾಡಿದ್ದನ್ನು ಬಿಟ್ಟರೆ ಗಲ್ಲಾಪೆಟ್ಟಿಗೆ ತುಂಬಿಸಿದ್ದು ‘ಕೆಂಪೇಗೌಡ’. ಕೋಮಲ್ ತಮ್ಮದೇ ಹಣದಲ್ಲಿ ಸಿದ್ಧಪಡಿಸಿದ ‘ಕಳ್‌ಮಂಜ’ ಕೂಡ ಬಂಡವಾಳಕ್ಕೆ ಮೋಸ ಮಾಡಲಿಲ್ಲ. ಈಗ ‘ಸಂಜು ವೆಡ್ಸ್ ಗೀತಾ’ ಮೂಲಕ ಚಿತ್ರರಂಗದ ಭರವಸೆಯ ಇನಿಂಗ್ಸ್ ಶುರುವಾಗಿದೆ. ಬಿಡುಗಡೆಯ ಭರಾಟೆ, ಬಂದಿರುವ ಚಿತ್ರಗಳ ವ್ಯಾಪಾರದ ಲೆಕ್ಕಾಚಾರ ಕೇಳಿದರೆ ಚಿತ್ರೋದ್ಯಮಕ್ಕೀಗ ‘ಸಮ್ಮರ್ ಕ್ಯಾಂಪ್’ನ ಕಳೆ ಬಂದಿರುವುದಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.