ADVERTISEMENT

ಸಯಾಲಿ ಕನ್ನಡಕ್ಕೆ ಹೊಸ ಮಿಂಚುಳ್ಳಿ

ಅಮಿತ್ ಎಂ.ಎಸ್.
Published 6 ಫೆಬ್ರುವರಿ 2014, 19:30 IST
Last Updated 6 ಫೆಬ್ರುವರಿ 2014, 19:30 IST
ಸಯಾಲಿ
ಸಯಾಲಿ   

‘ನಟನೆಗೆ ಭಾಷೆಯ ಹಂಗಿಲ್ಲ, ಅದರ ಅಗತ್ಯವೂ ಇಲ್ಲ. ಹೊಸ ಭಾಷೆಯ ಗಡಿಯೊಳಗೆ ಕಾಲಿಟ್ಟಾಗಲೂ ಹೊಸ ಅನುಭವ ದಕ್ಕುತ್ತಲೇ ಹೋಗುತ್ತದೆ. ಹೀಗಾಗಿಯೇ ಎಲ್ಲೆಗಳನ್ನು ಮೀರುವ ತವಕ ನನ್ನದು’ ಎಂದು ಸಣ್ಣನೆ ತುಟಿ ಅರಳಿಸಿದರು ಸಯಾಲಿ ಭಗತ್‌.

ಹಿಂದಿ ಸಿನಿಮಾ ಪ್ರಿಯರಿಗೆ ಸಯಾಲಿ ಭಗತ್‌ ಪರಿಚಿತ ಹೆಸರು. ದೊಡ್ಡ ಯಶಸ್ಸು ಕಾಣದಿದ್ದರೂ ಸಯಾಲಿ ಬಾಲಿವುಡ್‌ ಪಯಣ ಹಿತಕರವಾಗಿದೆ. ‘ದಿ ಟ್ರೈನ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಮೊದಲು ಸುದ್ದಿಯಾದದ್ದು ‘ಮಿಸ್‌ ಇಂಡಿಯಾ’ ಕಿರೀಟವನ್ನು ಮುಡಿಗೇರಿಸಿಕೊಂಡಾಗ.

ಆ ಮುಕುಟವೇ ಅವರನ್ನು ಚಿತ್ರರಂಗದಲ್ಲಿ ಬೇರೂರುವಂತೆ ಮಾಡಿದ್ದು. ‘ಹಲ್ಲಾ ಬೋಲ್‌’, ‘ಗುಡ್‌ಲಕ್‌’, ‘ರಾಜ್‌ಧಾನಿ ಎಕ್ಸ್‌ಪ್ರೆಸ್‌’, ‘ಘೋಸ್ಟ್‌’, ‘ಯಾರಿಯಾನ್‌’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಯಾಲಿ, ಹಿಂದಿಯಲ್ಲಿ ಅವಕಾಶಗಳ ಮೂಟೆ ಇದ್ದಾಗಲೂ ಪ್ರಾದೇಶಿಕ ಭಾಷಾ ಸಿನಿಮಾಗಳೆಡೆಗಿನ ಕುತೂಹಲದಿಂದ ಹೊಸ್ತಿಲು ದಾಟಿ ಹೊರಬಂದವರು.

ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಅವರೀಗ ಕನ್ನಡ ಸಿನಿಲೋಕಕ್ಕೂ ಕಾಲಿರಿಸಿದ್ದಾರೆ. ಕನ್ನಡದ ಸಿನಿಮಾ ಮುಗಿಯುತ್ತಿದ್ದಂತೆಯೇ ಬಂಗಾಳಿ ಮತ್ತು ಪಂಜಾಬಿ ಚಿತ್ರರಂಗದಿಂದಲೂ ಆಹ್ವಾನಗಳು ಎದುರಾಗಿವೆ. ಚಿತ್ರರಂಗದ ಬದುಕು ವರ್ಣಮಯ ಎನ್ನುವುದು ಅರ್ಥಪೂರ್ಣ ಎನಿಸುವುದು ಭಾಷಾ ವೈವಿಧ್ಯದ ಜಗತ್ತನ್ನು ಒಪ್ಪಿಕೊಂಡಾಗಲೇ ಎನ್ನುವುದು ಸಯಾಲಿ ಅನುಭವದ ಮಾತು.

ಹಿಂದಿ ಚಿತ್ರರಂಗವಾಗಲೀ, ಕನ್ನಡ, ತಮಿಳು ಅಥವಾ ತೆಲುಗು ಚಿತ್ರರಂಗವಾಗಲೀ, ಸಿನಿಮಾ ಸೃಷ್ಟಿ ಪ್ರಕ್ರಿಯೆಗಳಲ್ಲಿ ಅಂಥ ವ್ಯತ್ಯಾಸಗಳಿಲ್ಲ, ಇರುವುದು ಭಾಷೆಯಲ್ಲಿ ಮಾತ್ರ ಎನ್ನುತ್ತಾರೆ ಅವರು. ಗುಜರಾತ್‌ ಮೂಲದ ಸಯಾಲಿ ಭಗತ್‌, ಬೆಳೆದದ್ದು ಮಹಾರಾಷ್ಟ್ರದಲ್ಲಿ. ಕಾಲೇಜು ಮೆಟ್ಟಿಲೇರಿದಾಗಲೇ ಮಾಡುವಾಗಲೇ ಮಾಡೆಲಿಂಗ್‌ ಜಗತ್ತಿನತ್ತ ಬೆರಗು ಮೂಡಿತು.

ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಪದವಿಗೂ ಮುನ್ನವೇ ಮಿಸ್‌ ಇಂಡಿಯಾ ಕಿರೀಟ ಒಲಿಯಿತು. ಅದರ ಬೆನ್ನ ಹಿಂದೆಯೇ ಹತ್ತಾರು ಜಾಹೀರಾತು ಉತ್ಪನ್ನಗಳಿಗೆ ರೂಪದರ್ಶಿ ಆಗುವ ಅವಕಾಶ. ಅದನ್ನು ಮೆಟ್ಟಿಲಾಗಿ ಬಳಸಿಕೊಂಡ ಸಯಾಲಿ ಚಿತ್ರರಂಗದ ಪಡಸಾಲೆ ಪ್ರವೇಶಿಸಿದರು. ಸ್ಟಾರ್‌ ನಟರ ಜೊತೆ ನಟಿಸಿ, ದೊಡ್ಡ ಯಶಸ್ಸು ಕಾಣುವ ಅವಕಾಶವಿನ್ನೂ ಸಯಾಲಿಗೆ ದೊರೆತಿಲ್ಲ.

ADVERTISEMENT

ಅದನ್ನು ಬಯಸುವುದೂ ಇಲ್ಲ ಎನ್ನುತ್ತಾರೆ ಅವರು. ನಟಿಸಿದ ಪ್ರತಿ ಚಿತ್ರದಲ್ಲೂ ವೈವಿಧ್ಯವಿದೆ ಎನ್ನುವ ಸಯಾಲಿಗೆ ಸಾಧ್ಯವಾದಷ್ಟು ಭಾಷಾ ಸಿನಿಮಾಗಳಲ್ಲಿ ನಟಿಸುವ ಬಯಕೆಯಿದೆ.‘ಹೋಮ್‌ ಸ್ಟೇ’ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರುವ ಸಯಾಲಿಗೆ ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ‘ಹೋಮ್‌ ಸ್ಟೇ’ನಲ್ಲಿ ಅವರದು ಟೀವಿ ಚಾನೆಲ್‌ ವರದಿಗಾರ್ತಿಯ ಪಾತ್ರ.

ಇಡೀ ಚಿತ್ರ ಸಾಗುವುದು ಅವರ ಪಾತ್ರದ ಮೇಲೆಯೇ. ಸಸ್ಪೆನ್ಸ್‌ ಮತ್ತು ಥ್ರಿಲ್ಲರ್ ಬೆರೆತ ಚಿತ್ರ ಪ್ರೇಕ್ಷಕನನ್ನು ಸೀಟಿನಂಚಿನಲ್ಲಿ ಕೂರಿಸುವುದು ಖಂಡಿತಾ ಎಂಬ ಭರವಸೆ ಅವರದು. ಮಂಗಳೂರು ಹೋಮ್‌ ಸ್ಟೇ ದಾಳಿ ಪ್ರಕರಣದ ಪ್ರೇರಣೆ ಇದ್ದರೂ, ಕಥೆ ಬೇರೆಯ ವಿಷಯವನ್ನೇ ಹೇಳುತ್ತದೆ ಎನ್ನುತ್ತಾರೆ ಸಯಾಲಿ.

ಬೆಂಗಳೂರಿನೊಂದಿಗಿನ ಅವರ ನಂಟು ಚಿಕ್ಕದಾದರೂ ಅವಿಸ್ಮರಣೀಯವಂತೆ. 2005ರಲ್ಲಿ ಮಿಸ್‌ ಇಂಡಿಯಾ ಆದಾಗ ಮೊದಲ ಸುದ್ದಿಗೋಷ್ಠಿ ನಡೆದದ್ದು ಬೆಂಗಳೂರಿನಲ್ಲಿಯೇ ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ. ಇತ್ತೀಚೆಗೆ ದೆಹಲಿ ಮೂಲದ ಉದ್ಯಮಿಯೊಬ್ಬರನ್ನು ವಿವಾಹವಾಗಿರುವ ಸಯಾಲಿ, ಸಿನಿಮಾ ಮತ್ತು ಸಂಸಾರ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಉಮೇದಿನಲ್ಲಿದ್ದಾರೆ.

ಅವರ ಮನದೊಳಗೆ ಹತ್ತಾರು ಕಥೆಗಳಿವೆಯಂತೆ. ಅವುಗಳಿಗೆ ಸ್ವತಃ ಆ್ಯಕ್ಷನ್‌ ಕಟ್‌ ಹೇಳುವ ಬಯಕೆಯೂ ಅವರಲ್ಲಿದೆ. ಆದರೆ ಕಥೆಯನ್ನು ಸಿನಿಮಾ ರೂಪಕ್ಕಿಳಿಸುವ ಶ್ರಮ ಅವರಿಗೆ ಸುಲಭ ಎನಿಸಿಲ್ಲ. ಇನ್ನೂ ಐದಾರು ವರ್ಷ ಅದರ ಬಗ್ಗೆ ಯೋಚಿಸುವುದೂ ಇಲ್ಲ. ಅಲ್ಲಿವರೆಗೂ ತಮ್ಮ ಗಮನ ನಟನೆ ಮೇಲೆ ಮಾತ್ರ ಎನ್ನುತ್ತಾರೆ ಸಯಾಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.