ADVERTISEMENT

ಸಾಗರದ ನಿರೀಕ್ಷೆ!

ಪಂಚರಂಗಿ

ಅಮಿತ್ ಎಂ.ಎಸ್.
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಸಾಗರದ ನಿರೀಕ್ಷೆ!
ಸಾಗರದ ನಿರೀಕ್ಷೆ!   

ಗೆಳೆಯನ ಮನೆಯಲ್ಲಿ ಕುಳಿತು ಟೀವಿಯಲ್ಲಿ `ಎಸ್‌ಪಿ ಸಾಂಗ್ಲಿಯಾನಾ' ಸಿನಿಮಾ ನೋಡುತ್ತಿದ್ದ ಹುಡುಗನ ಮನದಲ್ಲಿ ಮೂಡಿದ ಬಯಕೆ ತಾನೂ ಶಂಕರ್‌ನಾಗ್‌ರಂತೆ ಆಗಬೇಕೆಂದು. ಅಂದಿನಿಂದ ಮೈಮನಗಳಲ್ಲಿ ಶಂಕರ್‌ನಾಗ್ ಅವರೇ ತುಂಬಿಕೊಂಡಿದ್ದರು. ನಡೆ ನುಡಿಗಳಲ್ಲಿಯೂ ಅವರು ಆವರಿಸಿದ್ದರು. ಅಪಘಾತದಲ್ಲಿ ಶಂಕರ್‌ನಾಗ್ ಸತ್ತಾಗ ವಾರವಿಡೀ ಬಿಕ್ಕಿಬಿಕ್ಕಿ ಅತ್ತಿದ್ದ ಹುಡುಗನ ಕ್ಯಾಮೆರಾ ಮುಂದೆ ನಿಲ್ಲುವ ಕನಸು ಈಡೇರುತ್ತಿದೆ. ಹಲವು ಕವಲುಗಳಲ್ಲಿ ಸಾಗಿದ ಬದುಕಿಗೀಗ ಸೂಕ್ತ ಪಥ ದಕ್ಕಿದೆ ಎಂಬ ನೆಮ್ಮದಿ ನಟ ಭರತ್ ಸಾಗರ್ ಅವರದು.

`ಊರ್ವಶಿ' ಎಂಬ ಚಿತ್ರದ ಮೂಲಕ ನಾಯಕನ ಪಟ್ಟಕ್ಕೇರಿರುವ ಭರತ್ ಬಣ್ಣದ ಲೋಕದ ನಂಟನ್ನು ಬಿಗಿಗೊಳಿಸುತ್ತಿದ್ದಾರೆ. ರಾಘವ ಲೋಕಿ, ಎಂ.ಡಿ. ಶ್ರೀಧರ್, ನಾಗಶೇಖರ್ ಮುಂತಾದ ಖ್ಯಾತ ನಿರ್ದೇಶಕರಿಂದ ಅವಕಾಶಗಳ ಭರವಸೆಯನ್ನೂ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಭರತ್‌ಗೆ ಜನ ತಮ್ಮನ್ನು ಗುರುತಿಸುವಂಥ ಸಾಧನೆ ಮಾಡಬೇಕೆಂಬ ಹಂಬಲ ಬಾಲ್ಯದಲ್ಲಿಯೇ ಮೂಡಿತ್ತು. ಅಂದುಕೊಂಡದ್ದನ್ನು ಸಾಧಿಸುವ ಹಟವೂ ಅವರ ಸಂಗಾತಿ. ಓದಿನಲ್ಲಿ ಆರಂಭದಿಂದಲೂ ಆಸಕ್ತಿ ಅಷ್ಟಕಷ್ಟೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿರಲಿಲ್ಲ. ಓದು, ಉದ್ಯೋಗ ತನಗಲ್ಲ, ಬೇರೇನೋ ಮಾಡಬೇಕು ಎಂಬ ವ್ಯಕ್ತಪಡಿಸಲಾಗದ ತುಡಿತ. ಔಷಧದ ಅಂಗಡಿ ನಡೆಸುತ್ತಿದ್ದ ತಂದೆಯ ಒತ್ತಾಯಕ್ಕೆ ಮಣಿದು ಮುಂದೆ ಬಿ ಫಾರ್ಮಕ್ಕೆ ಸೇರಿಕೊಂಡರು. ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪಡೆಯುವಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಅವರಲ್ಲಿ ಕನಸಿಗೆ ರೂಪ ಸಿಗತೊಡಗಿತು. ಪ್ರೇಮ ವೈಫಲ್ಯ ಬದುಕಿನ ಪಾಠ ಕಲಿಸಿತು. ಆದರಿನ್ನೂ ನಿರ್ದಿಷ್ಟ ಗುರಿ ದಕ್ಕಿರಲಿಲ್ಲ. ಓದು ಮುಗಿಸಿ ಮಾರ್ಕೆಟಿಂಗ್ ಉದ್ಯೋಗದಲ್ಲಿ ಸೇರಿಕೊಂಡಿದ್ದವರಲ್ಲಿ ಮತ್ತೆ ಓದುವ ಬಯಕೆ ಚಿಗುರಿತು. `ಎಂ ಫಾರ್ಮಾ'ದಲ್ಲಿ ಅಧ್ಯಯನ ಮುಂದುವರಿಯಿತು. ಅಲ್ಲಿ ಮನದ ತೊಳಲಾಟ, ಆಸೆಗಳನ್ನು ಅರಿತುಕೊಂಡು ಬೆನ್ನುತಟ್ಟುವ ಗೆಳೆಯರೂ ಸಿಕ್ಕರು. `ನೋಡಲು ಚೆನ್ನಾಗಿದ್ದೀಯಾ, ಮಾಡೆಲಿಂಗ್ ಮಾಡು' ಎಂಬ ಗೆಳತಿಯೊಬ್ಬಳ ಪ್ರೋತ್ಸಾಹದ ನುಡಿ ಬಾಲ್ಯದಲ್ಲಿ ಕಾಡುತ್ತಿದ್ದ ಶಂಕರ್‌ನಾಗ್‌ರನ್ನು ನೆನಪಿಸಿತು. ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದ ದಿನಗಳಲ್ಲಿ `ಸಂಚಯ' ರಂಗತಂಡದ ನಂಟು ಬೆಸೆಯಿತು. ಶಶಿಧರ ಭಾರಿಘಾಟ್ ಗರಡಿಯಲ್ಲಿ ನಟನೆಯ ಪಟ್ಟುಗಳನ್ನು ಕಲಿತ ಭರತ್ ಅವರನ್ನು ಚಿತ್ರರಂಗದ ಸಂಪರ್ಕ ಉಳ್ಳವರೊಬ್ಬರು ಸಿನಿಮಾ ಜಗತ್ತಿಗೆ ಕರೆತಂದರು.

`ಕಾಫಿ ವಿತ್ ಮೈ ವೈಫ್' ಭರತ್ ಬಣ್ಣಹಚ್ಚಿದ ಮೊದಲ ಚಿತ್ರ. ಬಳಿಕ `ಬರ್ಫಿ', `ಅಗ್ರಜ', `ಪಾರು ವೈಫ್ ಆಫ್ ದೇವದಾಸ್', `ಉಮೇಶ್ ರೆಡ್ಡಿ' ಹೀಗೆ ವಿವಿಧ ಚಿತ್ರಗಳಲ್ಲಿನ ಚಿಕ್ಕಪುಟ್ಟ ಪಾತ್ರಗಳು ಅವರ ಆತ್ಮವಿಶ್ವಾಸ ಹೆಚ್ಚಿಸಿವೆ. ನಟಿಸಿದ ಚಿತ್ರಗಳು ಬಿಡುಗಡೆಯಾಗಿರದಿದ್ದರೂ, ತಮಗೆ ಅವು ಒದಗಿಸಿರುವ ವೇದಿಕೆ ದೊಡ್ಡದು ಎನ್ನುತ್ತಾರೆ ಭರತ್. `ಊರ್ವಶಿ' ಚಿತ್ರದಲ್ಲಿ ನಾಯಕನ ಪಾತ್ರ ಒಲಿದು ಬಂದಾಗಲಂತೂ ಭರತ್‌ಗೆ ಅಚ್ಚರಿ. ಯಾವ ಬಗೆಯ ಪಾತ್ರಗಳಾದರೂ ಸರಿ. ಅದಕ್ಕೆ ಜೀವ ತುಂಬುವಂಥ ಉತ್ತಮ ನಟನಾಗಿ ಬೆಳೆಯಯಬೇಕು ಎನ್ನುವುದು ಭರತ್ ಗುರಿ. ನಟನೆ ಜೊತೆಗೆ ಹುರಿಗಟ್ಟಿದ ದೇಹಕ್ಕೆ ಚಿತ್ರರಂಗದಲ್ಲಿ ಆದ್ಯತೆ ಎನ್ನುವುದನ್ನು ಅರಿತಿರುವ ಅವರು ಜಿಮ್ನಾಸ್ಟಿಕ್ ಮತ್ತು ಜಿಮ್ ಎರಡರ ಕಸರತ್ತಿಗೂ ದೇಹವನ್ನು ಒಡ್ಡಿಕೊಂಡಿದ್ದಾರೆ. `ಹೆಸರಾಂತ ನಿರ್ದೇಶಕರ ಚಿತ್ರಗಳಲ್ಲಿ ಗುರುತಿಸಿಕೊಳ್ಳುವಂಥ ಪಾತ್ರಗಳು ಸಿಕ್ಕರೆ ಸಾಕು. ಅದಕ್ಕಾಗಿ ಎಷ್ಟು ಸಮಯ ಬೇಕಾದರೂ ಕಾಯುತ್ತೇನೆ' ಎನ್ನುವ ಭರತ್ ಕಣ್ಣುಗಳಲ್ಲಿ ಭರವಸೆಯನ್ನು ತುಳುಕಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.