ADVERTISEMENT

ಸಾಫ್ಟ್‌ವೇರ್ ದೇವದಾಸ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಚಿತ್ರ: ದೇವದಾಸ್
ನಿರ್ದೇಶಕ: ಎಬಿಸಿಡಿ ಶಾಂತಕುಮಾರ್
ನಿರ್ಮಾಪಕ: ಮುನಿರಾಜು, ಕೃಷ್ಣಮೂರ್ತಿ
ನಾಯಕ: ಯೋಗೀಶ್

‘ದೇವದಾಸ್’ ಚಿತ್ರತಂಡದ ಮಾತುಗಳನ್ನು ಅವರದೇ ಮಾತುಗಳಲ್ಲಿ ಓದಿಕೊಳ್ಳಿ:

ಎಬಿಸಿಡಿ ಶಾಂತಕುಮಾರ್: ಇಪ್ಪತ್ತೈದು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾರ್ಯಕಾರಿ ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ಇದೀಗ ಕತೆ, ಚಿತ್ರಕತೆ ಬರೆದು ‘ದೇವದಾಸ್’ ಚಿತ್ರದ ನಿರ್ದೇಶಕನಾಗಿದ್ದೇನೆ. ನನ್ನ ಚಿತ್ರದ ಹೈಲೈಟ್ ಎಂದರೆ ಚಿತ್ರೀಕರಣದ ನಂತರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಧ್ವನಿಮುದ್ರಣ ಮಾಡಿರುವುದು.

ಪ್ರೀತಿಗೆ ಇನ್ನೊಂದು ಹೆಸರು ದೇವದಾಸ್. ದೇವದಾಸ್ ಸಾರಾಯಿ ಬಾಟ್ಲಿ ಹಿಡಿದು, ನಾಯಿ ಜೊತೆ ಅಲೆದಾಡುತ್ತಾನೆ. ಆದರೆ ನನ್ನ ದೇವದಾಸ್ ಸಾರಾಯಿ ಬಾಟ್ಲಿ ಹಿಡಿದು, ಗೋಣಿಚೀಲದೊಳಗೆ ಹುಡುಗಿಯನ್ನು ತುಂಬಿಕೊಂಡು ಸಾಫ್ಟ್‌ವೇರ್ ಎಂಜಿನಿಯರ್ ಉಡುಪಿನಲ್ಲಿ ಇರುತ್ತಾನೆ. ಈ ಚಿತ್ರದಿಂದ ಪ್ರೀತಿಗೆ ಮೋಸ ಮಾಡಬೇಡಿ ಎಂದು ಸಂದೇಶ ನೀಡಲಿದ್ದೇನೆ.

ನನ್ನ ಸಿನಿಮಾಕ್ಕೆ ಯೋಗೀಶ್ ಸೂಕ್ತ ನಾಯಕ ಎನಿಸಿದರು. ಒಬ್ಬ ಕಲಾವಿದನಿಗೆ ಜೀವಮಾನದಲ್ಲಿ ಸಿಗುವ ವಿಶಿಷ್ಟವಾದ ಪಾತ್ರ ಯೋಗಿಶ್‌ಗೆ ಸಿಕ್ಕಿದೆ. ಆರು ಹಾಡುಗಳಿಗೆ ಆರು ನೃತ್ಯ ನಿರ್ದೇಶಕರಿಂದ ನಿರ್ದೇಶನ ಮಾಡಿಸಿದ್ದೇನೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಕ್ಲೈಮ್ಯಾಕ್ಸ್‌ಗೆ ಒಂದು ಒಳ್ಳೆಯ ಹಾಡು ಬೇಕಿತ್ತು. ಎಸ್.ನಾರಾಯಣ್ ಬರೆದಿರುವ, ಸಾಧುಕೋಕಿಲ ರಾಗ ಸಂಯೋಜಿಸಿರುವ ‘ಸಾರಾಯಿ ಶೀಶೆಯಲಿ..’ ಹಾಡನ್ನು ರೀಮಿಕ್ಸ್ ಮಾಡಿ ಎಸ್‌ಪಿ ಅವರಿಂದ ಮತ್ತೆ ಹಾಡಿಸಿದ್ದೇವೆ. ಹಾಡಿನ ಸೀಡಿಗಳು ಈಗಾಗಲೇ ಬಿಡುಗಡೆಯಾಗಿದ್ದು, ಗೀತೆಗಳಿಗೆ ಜನಪ್ರಿಯತೆ ಸಿಕ್ಕಿದೆ. ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವಾಸೆ ಇದೆ.

ಅಂದಹಾಗೆ, ‘ದೇವದಾಸ್’ ಎಲ್ಲಾ ಕಾಲಮಾನಕ್ಕೂ ಹೊಂದುವ ಚಿತ್ರ. (‘ದೇವದಾಸ್ ಹೆಸರನ್ನು ನಾನು ನೋಂದಣಿ ಮಾಡಿಸಿದ್ದೆ. ಎಬಿಸಿಡಿ ಶಾಂತಕುಮಾರ್ ಕೋರಿಕೊಂಡ ಕಾರಣ ಅವರಿಗೆ ಸಂತೋಷದಿಂದ ನೀಡಿದೆ’- ಇದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕರಿಸುಬ್ಬು ಮಾತು). ಮುನಿರಾಜು: ನನ್ನದು ಮತ್ತು ನಿರ್ದೇಶಕರದು ಹತ್ತು ವರ್ಷಗಳ ಪರಿಚಯ. ಹಾಡುಗಳು ಹಿಟ್ ಆಗಿವೆ. ಸಿನಿಮಾ ಗೆಲ್ಲುವ ವಿಶ್ವಾಸವಿದೆ.

ಕೃಷ್ಣಮೂರ್ತಿ: ಚಿತ್ರೀಕರಣ ಮುಗಿದಿದೆ. ಯೋಗಿ ಯುವಪೀಳಿಗೆಗೆ ಸ್ಫೂರ್ತಿ ತುಂಬುವ ನಾಯಕನಟ. ಚಿತ್ರದಲ್ಲಿ ಸಂದೇಶ ಇದೆ. ಹಾಡು ಹಿಟ್ ಆಗಿದ್ದು, ಯಶಸ್ಸಿಗೆ ಅದೇ ಮುನ್ನುಡಿ.

ಯೋಗೀಶ್: ನನ್ನದು ಮುಗ್ಧ ಹುಡುಗನ ಪಾತ್ರ. ಪ್ರೀತಿ ಮಾಡಿ ಮೋಸ ಹೋದ ಮೇಲೆ ಕುಡಿತಕ್ಕೆ ಬೀಳುತ್ತೇನೆ. ಇದು ನನಗೆ ಹೊಸ ಅನುಭವ. ಇದುವರೆಗೆ ಕುಡುಕನ ಪಾತ್ರ ಮಾಡಿದ್ದೆ. ಆದರೆ ಇಷ್ಟು ಕುಡಿದಿರಲಿಲ್ಲ. ಈ ಚಿತ್ರದಲ್ಲಿ ಹೆಚ್ಚು ಕುಡಿಯುವ ಕುಡುಕನ ಪಾತ್ರ ಮಾಡಿರುವೆ. ಕಷ್ಟಪಟ್ಟು ಮಾಡಿದ್ದೀನಿ. ಗೋವಾ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ನಾಯಕಿಯರಾದ ಜಿನಲ್ ಪಾಂಡೆ, ನತನ್ಯಾ ಜೊತೆ ನಟಿಸಿದ್ದು ಖುಷಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.