ADVERTISEMENT

ಸುಖಕರ ಲೈಫು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ನಿರ್ದೇಶಕ ಪವನ್‌ಕುಮಾರ್ ಚೊಚ್ಚಿಲ ಇನಿಂಗ್ಸ್‌ನಲ್ಲೇ ಆಯ್ಕೆದಾರರನ್ನು ಸಮರ್ಥಿಸುವ ಆಟವಾಡಿದ್ದಾರೆ. `ಲೈಫು ಇಷ್ಟೇನೆ~ ಸಿನಿಮಾದ ಮೊದಲ ವಾರದ ಗಳಿಕೆ 1.6 ಕೋಟಿ ರೂಪಾಯಿ ಎಂದು ನಿರ್ಮಾಪಕರೇ ಹೇಳಿರುವುದರಿಂದ ಅವರ ಆಟಕ್ಕೆ ಭರ್ಜರಿ ಬೆಲೆ.

`ಲೈಫು ಇಷ್ಟೇನೆ~ ನಗರ ನಾಗರಿಕರಿಗೆ ಇಷ್ಟವಾಗಿದೆ ಎಂಬುದಕ್ಕೆ ಪೂರಕವಾದ ಕೆಲವು ಅಂಕಿಅಂಶವನ್ನು ನಿರ್ಮಾಪಕ ಜಾಕ್ ಮಂಜು ತೆರೆದಿಟ್ಟರು.  ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಮಲ್ಟಿಫ್ಲೆಕ್ಸ್ ಒಂದರಲ್ಲಿ ಪ್ರತಿನಿತ್ಯ ಚಿತ್ರದ ಏಳು ಪ್ರದರ್ಶನ ನಡೆಯುತ್ತಿದೆ.

ಇತ್ತ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲೂ ಹೆಚ್ಚು ಆಸನ ವ್ಯವಸ್ಥೆ ಇರುವೆಡೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೂ ಮಿಗಿಲಾಗಿ ತೆಲುಗಿನ ಆರ್.ಬಿ. ಚೌಧರಿ ಬ್ಯಾನರ್‌ನವರು ಈ ಚಿತ್ರದ ರೀಮೇಕ್ ಹಕ್ಕುಗಳನ್ನು ಖರೀದಿಸುವ ಉತ್ಸಾಹ ತೋರಿದ್ದಾರೆ. ತಮಿಳಿನ ಕೆಲವರೂ ರೀಮೇಕ್ ಹಕ್ಕು ಪಡೆಯುವ ನಿಟ್ಟಿನಲ್ಲಿ ಮಾತುಕತೆ ಪ್ರಾರಂಭಿಸಿದ್ದಾರೆ.

ಪವನ್ ಕುಮಾರ್ ಸಂತೋಷಕ್ಕೆ ಇವಿಷ್ಟು ಕಾರಣಗಳು ಸಾಕು. ನಿರ್ಮಾಪಕರಾದ ಮಂಜು, ಉಪೇಂದ್ರ ಶೆಟ್ಟಿ ಹಾಗೂ ಸೈಯದ್ ಸಲಾಂ ಕೂಡ ಆನಂದತುಂದಿಲರಾಗಿದ್ದಾರೆ.
 
ಇತ್ತೀಚೆಗೆ ಕೆಲವು ರಾಜಕಾರಣಿಗಳಿಗೆ ಹಾಗೂ ತಾರೆಯರಿಗೆಂದೇ ವಿಶೇಷ ಪ್ರದರ್ಶನ ಏರ್ಪಡಿಸಿದ್ದ ತಂಡಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟಿನಲ್ಲಿ ಚಿತ್ರತಂಡದವರದ್ದು ಸುಖಕರ ಲೈಫು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.