ADVERTISEMENT

ಸೂರ್ಯನ ಸ್ನೇಹಸೇತು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:30 IST
Last Updated 21 ಏಪ್ರಿಲ್ 2011, 19:30 IST
ಸೂರ್ಯನ ಸ್ನೇಹಸೇತು!
ಸೂರ್ಯನ ಸ್ನೇಹಸೇತು!   

ರಾಮ್‌ಸೇತು. ಇದು ಶ್ರೀರಾಮನ ವಾನರಸೇನೆ ಲಂಕೆಗೆ ಸೇತುವೆ ಕಟ್ಟಿದ ಕಥೆಯಲ್ಲ.ರಾಮ ಮತ್ತು ಸೇತು ಎನ್ನುವ ಗೆಳೆಯರಿಬ್ಬರ ಈ ಕಥೆಗೆ ಪುರಾಣದೊಂದಿಗೆ ಯಾವ ನಂಟೂ ಇಲ್ಲ.

ರಾಮ್ ಮತ್ತು ಸೇತು ಎನ್ನುವ ಸ್ನೇಹಿತರಿಬ್ಬರು ಹಳ್ಳಿಯಿಂದ ಪಟ್ಟಣಕ್ಕೆ ಬರುವುದು, ಇಲ್ಲಿ ದುಷ್ಟಕೂಟದೊಂದಿಗೆ ಸಂಪರ್ಕ ಹೊಂದುವುದು, ಸೇತು ಕೊಲೆಯಾಗುವುದು, ಆ ಕೊಲೆಯ ಸಿಕ್ಕಿನಲ್ಲಿ ರಾಮ್ ತಳಮಳಿಸುವುದು- ಹೀಗೆ ಸಾಗುತ್ತದಂತೆ ‘ರಾಮ್‌ಸೇತು’ ಕಥನ. ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದು ನಿರ್ದೇಶಕ ಅಣ್ಣಯ್ಯ ಹಾಗೂ ನಿರ್ಮಾಪಕ ರಾಮ ರೆಡ್ಡಿ. ಸಂದರ್ಭ: ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ.


‘ರಾಮ್‌ಸೇತು’ ಒಂದರ್ಥದಲ್ಲಿ ಕೌಟುಂಬಿಕ ಚಿತ್ರವೂ ಹೌದು. ಏಕೆಂದರೆ ನಿರ್ಮಾಪಕ ರಾಮ ರೆಡ್ಡಿ ಈ ಚಿತ್ರ ನಿರ್ಮಿಸಿರುವುದೇ ತಮ್ಮ ಪುತ್ರ ಸೂರ್ಯಕಾಂತ್‌ಗೆ ನಾಯಕನ ಪಟ್ಟ ದೊರಕಿಸಿಕೊಡುವ ಉದ್ದೇಶಕ್ಕಾಗಿ. ಈ ಸಿನಿಮಾದ ಬಗ್ಗೆ ಅವರು ಎಷ್ಟರಮಟ್ಟಿಗೆ ಕಾಳಜಿ ವಹಿಸಿದ್ದಾರೆಂದರೆ, ಚಿತ್ರಕಥೆಯನ್ನು ಸ್ವತಃ ರೂಪಿಸಿದ್ದಾರೆ. ಸಿನಿಮಾ ನಿರ್ಮಾಣದ ಪ್ರತಿ ಹಂತದಲ್ಲೂ ಮುಂದೆ ನಿಂತು, ಮಗನ ಪಾತ್ರ ಕಳೆಗಟ್ಟುವಂತೆ ಎಚ್ಚರವಹಿಸಿದ್ದಾರೆ.

ಚಿತ್ರದಲ್ಲಿ ಆರು ಗೀತೆಗಳಿವೆಯಂತೆ. ಒಂದೊಂದು ಹಾಡೂ ಭಿನ್ನ ಎನ್ನುವುದು ಚಿತ್ರತಂಡದ ಹೇಳಿಕೆ. ಚಿತ್ರೀಕರಣ ಬೆಂಗಳೂರು, ಮಂಗಳೂರು, ಮೈಸೂರು, ಇನ್ನೋವೇಟೀವ್ ಫಿಲಂ ಸಿಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿದೆಯಂತೆ.

ಸೂರ್ಯಕಾಂತ್ ಹೆಚ್ಚು ಮಾತನಾಡುವ ಪೈಕಿಯಲ್ಲ ಎನ್ನುವುದು ಸುದ್ದಿಗೋಷ್ಠಿಯಲ್ಲಿ ಸಾಬೀತಾಯಿತು. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಎಂದು ಒತ್ತಿ ಹೇಳುವಷ್ಟಕ್ಕೆ ಅವರ ಮಾತು ಸೀಮಿತವಾಯಿತು. ಮಾತಿನಲ್ಲಿ, ಸೂರ್ಯನಿಗೆ ಜೋಡಿಯಾಗಿ ನಟಿಸಿರುವ ಹೊಸ ಹುಡುಗಿ ಸಂಗೀತಾ ಶೆಟ್ಟಿಯೇ ವಾಸಿ. ಆಕೆಗೆ ಚೊಚ್ಚಿಲ ಅನುಭವದ ಪುಳಕ.

ಹೆತ್ತವರು ಮಕ್ಕಳನ್ನು ತಿದ್ದಿದಂತೆ ನಿರ್ದೇಶಕ ಅಣ್ಣಯ್ಯನವರು ತಮಗೆ ನಟನೆ ಹೇಳಿಕೊಟ್ಟಿದ್ದನ್ನು ಸಂಗೀತಾ ಕೃತಜ್ಞತಾಪೂರ್ವಕವಾಗಿ ಹೇಳಿಕೊಂಡರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಚ್.ಡಿ.ಗಂಗರಾಜು ಧ್ವನಿಸುರುಳಿ ಬಿಡುಗಡೆಯ ಅತಿಥಿಗಳಲ್ಲೊಬ್ಬರಾಗಿದ್ದರು. ಚಿತ್ರವೊಂದಕ್ಕೆ ಬರಹಗಾರ ಎಷ್ಟು ಮುಖ್ಯ ಎನ್ನುವುದನ್ನು ಅವರು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದರು. ಗಂಗರಾಜು ಅವರ ಮಾತುಗಳು ಈಚಿನ ಚಿತ್ರಗಳ ಸೋಲಿಗೆ ಕಾರಣ ಹುಡುಕುವ ಪ್ರಯತ್ನದಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT