‘ಆಯೇಷಾ’ದಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಕ್ಕೆ ಹಣ ಹೂಡಿದ ರಿಯಾ ಕಪೂರ್ ಈಗ ‘ಖೂಬ್‌ಸೂರತ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಯೇಷಾದಲ್ಲಿ ರಿಯಾ ಕಪೂರ್ ಅವರ ಸಹೋದರಿ ಸೋನಂ ಕಪೂರ್ ಮತ್ತು ಅಭಯ್ ದೆವೊಲ್ ಅಭಿನಯಿಸಿದ್ದರು.
80ರ ದಶಕದಲ್ಲಿ ರೇಖಾ ಹಾಗೂ ರಾಕೇಶ್ ರೋಷನ್, ಅಶೋಕ್ ಕುಮಾರ್ ಜೊತೆಯಾಗಿದ್ದ ‘ಖೂಬ್‌ಸೂರತ್’ ಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದರು.
ಶಶಾಂಕ ಘೋಷ್ ನಿರ್ದೇಶನದ ‘ಖೂಬ್‌ಸೂರತ್’ ಚಿತ್ರದಲ್ಲಿ ಸೋನಂ ಕಪೂರ್ ಮತ್ತು ಪಾಕಿಸ್ತಾನಿ ನಟ ಫಾವದ್ ಖಾನ್ ನಟಿಸಲಿದ್ದಾರೆ.
‘ಆಯೇಷಾ’ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಖೂಬ್‌ಸೂರತ್ ಸಿನಿಮಾ ಯಶಸ್ಸು ತಂದುಕೊಡಲಿದೆ ಎನ್ನುವುದು ರಿಯಾ ಅವರ ಅಭಿಪ್ರಾಯ.
‘ಈ ಚಿತ್ರದ ಕುರಿತು ತುಂಬಾ ಉತ್ಸುಕಳಾಗಿದ್ದೇನೆ. ಸವಾಲುಗಳು ಇದ್ದರೂ ಅವನ್ನು ಸುಲಭವಾಗಿ ನಿಭಾಯಿಸಿದೆವು. ಖಿನ್ನತೆಯ ವಿಷಯ ಉಳ್ಳ ಸಿನಿಮಾಗಳಿಗಿಂತ ತಮಾಷೆಯಾಗಿರುವ ಸಿನಿಮಾ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ರಿಯಾ.
‘ಈ ಚಿತ್ರ ತಯಾರಾದ ನಂತರ ರೇಖಾ ಅವರಿಗೆ ಮೊದಲ ಪ್ರದರ್ಶನ ಏರ್ಪಡಿಸಲಿದ್ದೇವೆ. ಅವರ ಪ್ರತಿಕ್ರಿಯೆ ನಮಗೆ ತುಂಬಾ ಮಹತ್ವದ್ದು’ ಎಂದು ಹೇಳಿದ್ದಾರೆ ರಿಯಾ.
ಇನ್ನು ರಿಯಾ ಸಹೋದರಿ ಸೋನಂಗೆ ಖೂಬ್‌ಸೂರತ್ ಸಿನಿಮಾದಲ್ಲಿನ ಅವರ ಪಾತ್ರ ತುಂಬಾ ಖುಷಿ ನೀಡಿದೆಯಂತೆ. ‘ನನ್ನ ಪಾತ್ರ ಹುಡುಗಿಯರಿಗೆ ತುಂಬಾ ಇಷ್ಟವಾಗಲಿದೆ. ನಟಿ ರೇಖಾ ಅವರ ನಟನೆಗೆ ನನ್ನ ನಟನೆಯನ್ನು ಹೋಲಿಸಲು ಸಾಧ್ಯವಿಲ್ಲ. ಅವರಷ್ಟು ಚೆನ್ನಾಗಿ ನಟಿಸದೇ ಇದ್ದರೂ ನನಗೆ ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ. ಅದೇ ನನಗೆ ಖುಷಿ ನೀಡಿದ ಸಂಗತಿ’ ಎಂದು ಹೇಳಿದ್ದಾರೆ.
‘ಉತ್ತಮ ಮೌಲ್ಯದ ಜತೆಗೆ ತಮಾಷೆ ಇರುವ ಸಿನಿಮಾಗಳು ಕಡಿಮೆಯಾಗಿವೆ. ಹೃಷಿಕೇಶ್ ಮುಖರ್ಜಿ ಇಂಥ ಸಿನಿಮಾಗಳನ್ನು ಆಗ ಮಾಡಿದ್ದರು. ಅವರ ಗುಡ್ಡಿ, ಮಿಲಿ, ಖೂಬ್‌ಸೂರತ್ ಎಲ್ಲರೂ ಮೆಚ್ಚುವಂಥ ಸಿನಿಮಾಗಳು. ಅವರ ಸಿನಿಮಾಗಳಲ್ಲಿ ಸಂದೇಶದ ಜತೆಗೆ ತಮಾಷೆಯೂ ಇರುತ್ತಿತ್ತು. ಈಚೆಗೆ ರಾಜ್‌ಕುಮಾರ್ ಹಿರಾನಿ ಇಂತಹ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ. ನಾನು ಅಭಿನಯಿಸುತ್ತಿರುವ ‘ಖೂಬ್‌ಸೂರತ್’ ಸಿನಿಮಾ ಕೂಡ ಅವುಗಳಲ್ಲಿ ಒಂದು’ ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.