ADVERTISEMENT

`ಹಂತಕಿ'ಯಾಗಿ ಪೂಜಾ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
`ಹಂತಕಿ'ಯಾಗಿ ಪೂಜಾ
`ಹಂತಕಿ'ಯಾಗಿ ಪೂಜಾ   

ಹಸಿರು-ಕಂದು ಬಣ್ಣದ ರೇಷಿಮೆ ಸೀರೆಯುಟ್ಟಿದ್ದರು ಪೂಜಾಗಾಂಧಿ. ಅಂದು `ಹಂತಕಿ(ಕ)' ಚಿತ್ರದ ಮುಹೂರ್ತ. `ಇದು ನಾಯಕಿ ಪ್ರಧಾನ ಸಿನಿಮಾ. ನನಗೆ ಚಿತ್ರದಲ್ಲಿ ದ್ವಿಪಾತ್ರ. ಹೇಮಾಮಾಲಿನಿ ಮತ್ತು ವಿಜಯಶಾಂತಿ ಅವರು ತಮ್ಮ ವೃತ್ತಿ ಬದುಕಿನಲ್ಲಿ ನಿರ್ವಹಿಸಿದ್ದಂಥ ಪಾತ್ರ ಇದು. ಕತೆಯ ನಿರೂಪಣೆ ಚೆನ್ನಾಗಿದೆ. ಕೊಲೆಯೊಂದರ ಸುತ್ತ ನಡೆಯುವ ಕತೆ ಇದರಲ್ಲಿದೆ. ಕುತೂಹಲ ಹುಟ್ಟಿಸಲಿದೆ' ಎಂದು ವಿವರ ನೀಡಿದರು ಪೂಜಾ.

1987ರಲ್ಲಿ `ಸಂಚು', `ಗಂಡಿನ ಬಲ ಹೆಣ್ಣಿನ ಛಲ' ಚಿತ್ರಗಳನ್ನು ನಿರ್ದೇಶಿಸಿದ್ದ ಸಯ್ಯದ್ ದಾವೂದ್ ಈ ಚಿತ್ರದ ನಿರ್ದೇಶಕರು. ಅವರು ನಿಗೂಢವನ್ನು ಕಾಯ್ದುಕೊಳ್ಳುವಂಥ `ಹಂತಕಿ(ಕ)' ಚಿತ್ರದ ಕತೆಯೊಂದಿಗೆ ಮತ್ತೆ ಬಂದಿದ್ದಾರೆ. `ಈ ಚಿತ್ರದ ಶೀರ್ಷಿಕೆಯೇ ಪ್ರೇಕ್ಷಕರಲ್ಲಿ ಕಲ್ಪನೆ ಗರಿಗೆದರುವಂತೆ ಮಾಡುತ್ತದೆ. ಒಂದು ಕೊಲೆ ಸುತ್ತ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬುದು ಚಿತ್ರದ ತಿರುಳು. ಹಾಗೆಂದು ಕೇವಲ ಕ್ರೈಮ್ ಸಿನಿಮಾ ಎಂಬ ಭಾವನೆ ತಾಳಬೇಕಾಗಿಲ್ಲ. ಇದರಲ್ಲಿ ಪಾಸಿಟಿವ್ ಅಂಶಗಳು ಇವೆ' ಎಂದ ಅವರಿಗೆ ಚಿತ್ರವನ್ನು ಸಮುದ್ರ ತೀರದಲ್ಲಿ ಚಿತ್ರೀಕರಿಸುವಾಸೆ.

`ಜಬ್ ವಿ ಮೆಟ್' ಹಿಂದಿ ಚಿತ್ರದಲ್ಲಿ ನಟಿಸಿದ್ದ ಜತಿನ್ ಅರೋರಾ ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದು ಸಿಕ್ಕಿದೆ. `ನಾನು ಬೆಂಗಳೂರಿನಲ್ಲಿ ಓದಿದವನು. ನನಗೆ ಈ ಚಿತ್ರದಲ್ಲಿ ಶಾರ್ಟ್ ಅಂಡ್ ಸ್ವೀಟ್ ಪಾತ್ರ ಸಿಕ್ಕಿದೆ. ಅದು ಒಳ್ಳೆಯವನ ಪಾತ್ರ' ಎಂದು ನಕ್ಕರು ಅವರು.ಮುಂಬೈ ಮೂಲದ ನಟಿ ನಮ್ರತಾ ಅವರಿಗೆ ಚಿತ್ರದಲ್ಲೊಂದು ಸಣ್ಣ ಪಾತ್ರ ಸಿಕ್ಕಿದೆಯಂತೆ.

ಜಿತಿನ್ ಶಾಮ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸಿ. ನಾರಾಯಣ್ ಛಾಯಾಗ್ರಾಹಕ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಾಯಿಕುಮಾರ್ ಹಾಜರಿ ಇರಲಿಲ್ಲ.  ಸಿನಿಮಾ ವಿತರಕ ಬಾಷಾ ಮತ್ತು ನಟಿ ಐಂದ್ರಿತಾ ರೇ ಚಿತ್ರಕ್ಕೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.