ADVERTISEMENT

‘ಹುತ್ತದ ಸುತ್ತ’ ಥ್ರಿಲ್ಲರ್ ಕಥೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಗಿರಿಧರ್ ಮತ್ತು ಸೌಮ್ಯಾ
ಗಿರಿಧರ್ ಮತ್ತು ಸೌಮ್ಯಾ   

ರೋಹನ್ ಪ್ರದೀಪ್ ಮೆಂಡೋನ್ಸ ನಿರ್ಮಾಣದ ಚಿತ್ರ ‘ಹುತ್ತದ ಸುತ್ತ’ದ ಹಾಡುಗಳ ಬಿಡುಗಡೆ ಬೆಂಗಳೂರಿನಲ್ಲಿ ನಡೆಯಿತು. ‘ಒಳಗೋದ್ರೆ ಗೊತ್ತಾಗುತ್ತೆ ಸತ್ಯ...’ ಎಂದು ಈ ಚಿತ್ರಕ್ಕೆ ಅಡಿಶೀರ್ಷಿಕೆ ಇಟ್ಟಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಒಂದು ಕೌತುಕವನ್ನು ಮೂಡಿಸುವ ಯತ್ನವನ್ನು ಚಿತ್ರತಂಡ ಮಾಡಿದೆ.

ಚಿತ್ರದ ನಿರ್ದೇಶಕ ಮೆಲ್ವಿನ್ ಎಲ್ಪೆಲ್ ಅವರು ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಶಿಷ್ಯ. ‘ಇದು ಕೊಲೆಯ ಸುತ್ತ ನಡೆಯುವ ಮಿಸ್ಟರಿ ಸಿನಿಮಾ. ಇದರಲ್ಲಿ ಥ್ರಿಲ್ಲರ್ ಅಂಶಗಳೂ ಇವೆ. ಸಿನಿಮಾದ ಕಥೆ ಒಂದು ಲಾಡ್ಜ್‌ನಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡಿದೆ’ ಎಂದರು ಮೆಲ್ವಿನ್. ಶೀರ್ಷಿಕೆ ಹಾಡು, ಮಾಧುರ್ಯ ಪ್ರಧಾನವಾಗಿರುವ ಒಂದು ಹಾಡು ಹಾಗೂ ಒಂದು ಐಟಂ ಸಾಂಗ್‌ ಇದರಲ್ಲಿ ಇದೆ ಎಂದರು ಮೆಲ್ವಿನ್.

ಚಿತ್ರದ ಕಥೆಯನ್ನು ಮೆಲ್ವಿನ್ ಅವರಿಂದ ಕೇಳಿಸಿಕೊಂಡ ತಕ್ಷಣ ರೋಹನ್ ಅವರು ಸಿನಿಮಾ ನಿರ್ಮಾಣಕ್ಕೆ ಮನಸ್ಸು ಮಾಡಿದರಂತೆ. ರೋಹನ್ ಅವರು ರಿಯಲ್ ಎಸ್ಟೇಟ್‌ ಉದ್ಯಮಿ. ‘ಧರ್ಮಸ್ಥಳ, ಮಂಗಳೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ’ ಎಂದು ತಂಡ ಹೇಳಿದೆ.

ADVERTISEMENT

(ಮೆಲ್ವಿನ್ ಎಲ್ಪೆಲ್, ಅಮರನಾಥ ಆರಾಧ್ಯ)

ಕಿರುತೆರೆ ಕಲಾವಿ ವಿಲ್ಲೇಶ್ ಗಿರಿಧರ್ ಅವರು ಈ ಸಿನಿಮಾ ಮೂಲಕ ಹಿರಿತೆರೆಗೆ ನಾಯಕನಾಗಿ ಬರುತ್ತಿದ್ದಾರೆ. ‘ಸಿನಿಮಾದಲ್ಲಿ ನಾನು ಕಾಲೇಜು ಹುಡುಗನಾಗಿ, ನಂತರ ರೌಡಿಯಾಗಿ ಅಭಿನಯಿಸಿದ್ದೇನೆ. ಸಿನಿಮಾ ನನಗೆ ಹೊಸ ಅನುಭವ ನೀಡಿದೆ’ ಎಂದರು ಗಿರಿಧರ್. ದಿಶಾ ಚಿತ್ರದ ಕಥಾ ನಾಯಕಿ. ಹುಬ್ಬಳ್ಳಿಯ ಸೌಮ್ಯಾ ಪೊಲೀಸ್ ಆಗುವ ಕನಸು ಹೊತ್ತ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮರನಾಥ ಆರಾಧ್ಯ ಮುಖ್ಯ ಪಾತ್ರದಲ್ಲಿದ್ದಾರೆ.

ರಾಜೇಶ್ವರಿ, ರೇವಣಸಿದ್ದಯ್ಯ, ದೀಪಕ್ ರೈ, ಉಮಾಶಂಕರ್ ತಾರಾಗಣದಲ್ಲಿ ಇದ್ದಾರೆ. ಸಂದೀಪ್ ಮಲಾನಿ ಭೂಗತ ಜಗತ್ತಿನ ಡಾನ್ ಆಗಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ಸಾಂಗ್‌ಗೆ ಜನನಿ ಹೆಜ್ಜೆ ಹಾಕಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ನಂದು ಜಾಬಿಸ್ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.