ADVERTISEMENT

ಹೊಸ ಪ್ರತಿಭೆಗಳ `ತೆಲಿಸಿ...'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಬಣ್ಣಬಣ್ಣದ ಕನಸುಗಳನ್ನು ಹೊತ್ತು ಬಣ್ಣದ ಲೋಕಕ್ಕೆ ಕಾಲಿರಿಸುವ ಹೊಸ ಪ್ರತಿಭೆಗಳಿಗೆ ಎಲ್ಲರ ಪ್ರೋತ್ಸಾಹ ಬೇಕು ಎನ್ನುತ್ತಿದ್ದಾರೆ ತೆಲುಗು ನಿರ್ಮಾಪಕ ಕುಮಾರ್ ಬಾಬು. 

ಕುಮಾರ್‌ಬಾಬು ನಿರ್ಮಿಸುತ್ತಿರುವ ರೊಮ್ಯಾಂಟಿಕ್ ಸಿನಿಮಾ `ತೆಲಿಸಿ ತೆಲಿಯಾಕ' ಚಿತ್ರದಲ್ಲಿ ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಈ ಮೂಲಕ ತಮ್ಮ ಮಾತಿಗೆ ಬದ್ಧರಾಗಿದ್ದಾರೆ. 

“ಹೊಸ ಪ್ರತಿಭೆಗಳಿಗೆ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರೆಲ್ಲರೂ ಪ್ರೋತ್ಸಾಹ ನೀಡಬೇಕು. `ತೆಲಿಸಿ ತೆಲಿಯಾಕ' ಚಿತ್ರದಲ್ಲಿ ಸಂಪೂರ್ಣ ಹೊಸ ಪ್ರತಿಭೆಗಳೇ ಇದ್ದಾರೆ. ಸಣ್ಣ ಬಜೆಟ್ ಸಿನಿಮಾಗಳಲ್ಲಿ ನಟಿಸುವ ಹೊಸ ಹುಡುಗರು ಹಿಟ್ ಸಿನಿಮಾ ನೀಡದಿದ್ದರೂ ಅವರಲ್ಲಿ ನಟನಾ ಪ್ರತಿಭೆಯೇನೂ ಕಮ್ಮಿ ಇಲ್ಲ” ಎನ್ನುತ್ತಾರೆ ಕುಮಾರ್.

ನೀವು ಇನ್ನು ಮುಂದೆ ಸದಾ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆಗೆ ಕುಮಾರ್‌ಬಾಬು, `ಯಾವಾಗಲೂ ಅಲ್ಲ' ಎಂಬ ಉತ್ತರ ನೀಡುತ್ತಾರೆ. `ನನ್ನ ಎಲ್ಲ ಚಿತ್ರಗಳಲ್ಲೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತೇನೆ ಎಂದು ನಾನು ಹೇಳುವುದಿಲ್ಲ. ಆದರೆ, ಪ್ರತಿಭಾವಂತ ಹುಡುಗರನ್ನು ಚಿತ್ರರಂಗಕ್ಕೆ ಪರಿಚಯಿಸಲು ನಾನು ಸದಾ ಉತ್ಸುಕನಾಗಿದ್ದೇನೆ. ಎಲ್ಲ ನಿರ್ಮಾಪಕರಿಗೂ ದೊಡ್ಡ ನಟರನ್ನು ಹಾಕಿಕೊಂಡ ಬಿಗ್ ಬಜೆಟ್ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸಣ್ಣ ಬಜೆಟ್‌ನಲ್ಲಿ ಉತ್ತಮ ಸಿನಿಮಾ ತೆಗೆಯಬೇಕೆಂದು ಬಯಸುವವರಿಗೆ ಹೊಸ ಪ್ರತಿಭೆಗಳು ಉತ್ತಮ ಆಯ್ಕೆ ಎನ್ನುತ್ತಾರೆ' ಅವರು.

ಡಿಸೆಂಬರ್ 21ರಂದು ತೆರೆಕಾಣಲಿರುವ `ತೆಲಿಸಿ ತೆಲಿಯಾಕ' ಚಿತ್ರವನ್ನು ಜಯಪ್ರಕಾಶ್ ಕೆ ನಿರ್ದೇಶಿಸಿದ್ದಾರೆ. ಗೀತಾನಂದ್, ಮೈಥಿಲಿ, ಕೃಷ್ಣ, ಆಸಿನಿ ಮತ್ತು ಸುಧೀರ್ ಎಂಬ ಹೊಸ ಮುಖಗಳು ಪ್ರಮುಖ ಪಾತ್ರದಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.