ADVERTISEMENT

‘ಗಜಪಡೆ’ಯ ಸಂಗೀತ ಪ್ರಸವ

​ಪ್ರಜಾವಾಣಿ ವಾರ್ತೆ
Published 11 ಜೂನ್ 2015, 19:30 IST
Last Updated 11 ಜೂನ್ 2015, 19:30 IST
‘ಗಜಪಡೆ’ಯ ಸಂಗೀತ ಪ್ರಸವ
‘ಗಜಪಡೆ’ಯ ಸಂಗೀತ ಪ್ರಸವ   

ಸಿನಿಮಾ ಪತ್ರಿಕಾಗೋಷ್ಠಿಗಳಿಗೆಂದೇ ಮೀಸಲಾದ ಸ್ಥಳ ಬೆಂಗಳೂರಿನ ಗಾಂಧಿನಗರದ ಗ್ರೀನ್ ಹೌಸ್. ಅದು ಸದಾ ಸಿನಿ ತಾರೆಯರು ಭೇಟಿ ನೀಡುವ ಜಾಗವೇ ಆಗಿದ್ದರೂ ಸೋಮವಾರ ಸಂಜೆ ಮಾತ್ರ ಗ್ರೀನ್ ಹೌಸ್‌ಗೆ ಭಾರಿ ಕಳೆ ಬಂದಿತ್ತು. ಅಲ್ಲೆಲ್ಲ ಜನವೋ ಜನ. ಒಂದರ್ಥದಲ್ಲಿ ‘ಔಟ್ ಸ್ಟ್ಯಾಂಡಿಂಗ್’ ಅನ್ನುವಷ್ಟು. ಅದಕ್ಕೆಲ್ಲ ಕಾರಣ ನಟ ಸುದೀಪ್ ಆಗಮನದ ನಿರೀಕ್ಷೆ.

ಅದು ಬಹುತೇಕ ಹೊಸಬರೇ ಇರುವ ಚಿತ್ರ ‘ಗಜಪಡೆ’ಯ ಹಾಡುಗಳ ಬಿಡುಗಡೆ ಸಮಾರಂಭ. ಕಾರ್ಯಕ್ರಮಕ್ಕೆ ಕೊಂಚ ತಡವಾಗಿಯೇ ಬಂದರು ಸುದೀಪ್. ಹಾಡುಗಳ ಸೀಡಿ ಬಿಡುಗಡೆ ಮಾಡಿ, ‘ಈಗಾಗಲೇ ಗಜ ಎಂಬ ಶೀರ್ಷಿಕೆಯಲ್ಲಿ ತೆರೆಕಂಡ ಚಿತ್ರ ಹಿಟ್ ಆಗಿದೆ. ಈ ಚಿತ್ರವೂ ಹಾಗೇ ಆಗಲಿ’ ಎಂದು ತಂಡಕ್ಕೆ ಶುಭಕೋರಿದರು.

ಸುದೀಪ್ ಬರುವ ಮುನ್ನವೇ ಚಿತ್ರತಂಡದವರು ಬಹುತೇಕ ಮಾತನಾಡಿ ಮುಗಿಸಿದ್ದರು. ನಿರ್ದೇಶಕ ಸೀನು ಅವರ ಪ್ರಕಾರ, ‘ಸಿನಿಮಾ ನಿರ್ದೇಶನ ಮಾಡುವುದು ಅಂಥ ಕಷ್ಟದ ಕೆಲಸವೇನಲ್ಲ. ಆದರೆ ಆ ನಿರ್ದೇಶಕನ ಸ್ಥಾನಕ್ಕೆ ಬರುವುದು ಕಷ್ಟ’ವಂತೆ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದ ಅವರು ಮೊದಲ ಬಾರಿ ಚಿತ್ರ ನಿರ್ದೇಶಿಸಿದ್ದಾರೆ. ತೀರಾ ವಿಭಿನ್ನ ಕಥೆ ಅಲ್ಲದಿದ್ದರೂ ನಿರೂಪಣೆ ಮಾತ್ರ ಭಿನ್ನವಾಗಿರುವುದಾಗಿ ಹೇಳುತ್ತಾರೆ ಅವರು.

ಸಂಗೀತ ನಿರ್ದೇಶಕರಾದ ಜೋಯೆಲ್ ಮತ್ತು ಅಭಿಲಾಶ್ ಕೂಡ ಹೊಸಬರು. ‘ನನ್ನಲ್ಲಿ ಏನನ್ನು ಮೆಚ್ಚಿ ಅವಕಾಶ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನಮ್ಮ ಸಂಗೀತ ಬೇರೆ ಶೈಲಿಯದು ಮತ್ತು ಅದರ ದನಿಯೂ ಬೇರೆಯೇ’ ಎನ್ನುತ್ತಾರೆ ಜೋಯೆಲ್. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಹಾಡುಗಳಿಗೆ ದನಿಯದವರೂ ಹೊಸಬರೇ.

‘ರಾಜಾಹುಲಿ’, ‘ಪವರ್’ ಚಿತ್ರಗಳಲ್ಲಿ ಸಹಕಲಾವಿದನಾಗಿ ನಟಿಸಿದ್ದ ಹರ್ಷ ಚಿತ್ರದ ಮುಖ್ಯ ಪಾತ್ರಧಾರಿ. ಸೂಪರ್ ಸ್ಟಾರ್ ಆಗುವ ಆಸೆ ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರಂತೆ ಅವರು. ಧಾರಾವಾಹಿಗಳಲ್ಲಿ ನಟಿಸಿದ ಅರುಣ್ ಪಾತ್ರಕ್ಕೆ ಹೆಚ್ಚು ಹಾಸ್ಯದ ಲೇಪವಿದೆಯಂತೆ. ನಾಯಕಿಯರಾದ ತನ್ಮಯಿ, ನವ್ಯಾಗೆ ಇದು ಮೊದಲ ಸಿನಿಮಾ. ಮತ್ತೊಬ್ಬ ನಾಯಕಿ ಮನಿಷಾ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಘು ಕುಂಚಿ, ಮುತ್ತು ಪಾವಗಡ, ಅಣ್ಣಯ್ಯ ಉಪವೀರ್ ಸೇರಿ ಏಳು ನಿರ್ಮಾಪಕರಿದ್ದು ಎಲ್ಲರಿಗೂ ಇದು ಮೊದಲ ಪ್ರಯತ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.