ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.
ಮಾರ್ಚ್ 1ರಿಂದ ಮಾರ್ಚ್ 8ರವರೆಗೆ ಚಿತ್ರೋತ್ಸವ ನಡೆಯಲಿದ್ದು, ಈ ಬಾರಿ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಘೋಷವಾಕ್ಯದಡಿ ಚಲನಚಿತ್ರೋತ್ಸವ ನಡೆಯಲಿದೆ. ‘ಕನ್ನಡ ಸಿನಿಮಾ’ ಸ್ಪರ್ಧೆ, ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವ ‘ಚಿತ್ರಭಾರತಿ’ ಮತ್ತು ‘ಏಷಿಯನ್ ಸಿನಿಮಾ’ ಸ್ಪರ್ಧಾ ವಿಭಾಗಗಳಿಗೆ ಆಯ್ಕೆಗಾಗಿ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ. ‘ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ’ದಲ್ಲಿ ಆಯ್ಕೆಗಾಗಿ ಸಲ್ಲಿಸಬೇಕಾದ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯಾಗಿದ್ದು, 2024 ಜನವರಿ 1ರಿಂದ 2024 ಡಿಸೆಂಬರ್ 31ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯದ ಯಾವುದೇ ಉಪಭಾಷೆಯಲ್ಲಿ ತಯಾರಾಗಿರುವ ಕಥಾ ಚಿತ್ರಗಳು, ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ತಿಳಿಸಿದೆ.
‘ಚಿತ್ರಭಾರತಿ’- ಭಾರತೀಯ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಗಾಗಿ ಸಲ್ಲಿಸಬೇಕಾದ ಚಿತ್ರಗಳು 2024 ಜನವರಿ 1ರಿಂದ 2024 ಡಿಸೆಂಬರ್ 31ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಭಾರತದ ಯಾವುದೇ ಭಾಷೆಯ ಕಥಾ ಚಿತ್ರವಾಗಿದ್ದು, ಕನಿಷ್ಠ 70 ನಿಮಿಷಗಳ ಅವಧಿ ಹೊಂದಿರಬೇಕು. ‘ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ’ಕ್ಕೆ, ಏಷ್ಯಾದ ಯಾವುದೇ ದೇಶದಲ್ಲಿ, 2024 ಜನವರಿ 1ರಿಂದ 2024 ಡಿಸೆಂಬರ್ 31ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರುವ ಕನಿಷ್ಠ 70 ನಿಮಿಷದ ಸಿನಿಮಾವನ್ನು ಸಲ್ಲಿಸಬಹುದು. ಮೂರೂ ವಿಭಾಗಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ ನೀಡುವ ಪ್ರಮಾಣ ಪತ್ರದಲ್ಲಿ ನಮೂದಾಗುವ ದಿನಾಂಕವೇ ನಿರ್ಮಾಣದ ಮಾನದಂಡವಾಗುತ್ತದೆ ಎಂದು ಅಕಾಡೆಮಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ www.biffes.orgಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಜ.23 ಕೊನೆಯ ದಿನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.