ADVERTISEMENT

ಇದು ಒಳ್ಳೆಯ ರೌಡಿಯ ‘ಸರ್ಕಾರ್‌’

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಚಂದ್ರಲೇಖಾ ಮತ್ತು ಜಾಗ್ವಾರ್‌ ಜಗ್ಗಿ
ಚಂದ್ರಲೇಖಾ ಮತ್ತು ಜಾಗ್ವಾರ್‌ ಜಗ್ಗಿ   

‘ನಮ್ಮ ಚಿತ್ರದ ಶೀರ್ಷಿಕೆಗೂ ಹಿಂದಿಯ ‘ಸರ್ಕಾರ್‌’ ಸಿನಿಮಾಗೂ ಯಾವುದೇ ರೀತಿ ಸಂಬಂಧ ಇಲ್ಲ’ – ಮುಂದೆ ಎದುರಾಗಬಹುದಾದ ಪ್ರಶ್ನೆಯನ್ನು ಮೊದಲೇ ಊಹಿಸಿದಂತೆ ಹೀಗೆ ಹೇಳಿಕೊಂಡೇ ಮಾತಿಗೆ ಆರಂಭಿಸಿದರು ಎಸ್‌. ಮಂಜು ಪ್ರೀತಮ್‌. ಅವರು ಹೀಗೆ ಹೇಳಲು ಕಾರಣವಿದೆ. ಅವರು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರದ ಹೆಸರು ಕೂಡ ‘ಸರ್ಕಾರ್‌’.

ಚಿತ್ರದ ‍ಪೋಸ್ಟರ್‌ ಅನಾವರಣ ಮಾಡುವ ಉದ್ದೇಶದಿಂದ ಚಿತ್ರತಂಡ ಇತ್ತೀಚೆಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯಲಹಂಕದ ಮಂಜು ಪ್ರೀತಮ್‌ ಅವರು ಅಣೇಶ್‌ ಅಭಿಮಾನಿ. ಅವರನ್ನೇ ಅನುಸರಿಸಲು ಪ್ರಯತ್ನಿಸುತ್ತಾ ಬಣ್ಣದ ಲೋಕದ ಕಡೆಗೆ ಮುಖಮಾಡಿದವರು. ಅದೇ ದಾರಿಯಲ್ಲಿ ನಡೆದು ಕೊನೆಗೆ ಸ್ವಂತ ಸಿನಿಮಾ ನಿರ್ದೇಶಿಸುವ ಮಟ್ಟಿಗೆ ಬೆಳೆದಿದ್ದಾರೆ. ಅದಕ್ಕಿಂತ ಖುಷಿ ವಿಷಯ ಏನೆಂದರೆ ಗಣೇಶ್‌ ತಮ್ಮ ಪತ್ನಿಸಮೇತರಾಗಿ ಸಿನಿಮಾದ ಮುಹೂರ್ತಕ್ಕೆ ಬಂದು ಶುಭ ಹಾರೈಸಿದ್ದು. ಈ ಎಲ್ಲವನ್ನೂ ತುಂಬ ಸಂತೋಷ ಮತ್ತು ಹೆಮ್ಮೆಯಿಂದಲೇ ಅವರು ಹೇಳಿಕೊಂಡರು.

ಸರ್ಕಾರ್‌ ಚಿತ್ರಕ್ಕೆ ‘ದಿ ಬುಲೆಟ್‌’ ಎಂಬ ಅಡಿಟಿಪ್ಪಣಿಯೂ ಇದೆ. ಅಂದಮೇಲೆ ಗುಂಡಿನ ಮೊರೆತ ಮತ್ತು ರಕ್ತದ ಕೋಡಿ ಸಾಕಷ್ಟು ಇದ್ದೇ ಇರುತ್ತದೆ ಎಂಬುದು ಸರ್ವವಿದಿತ. ‘ಇದು ಒಳ್ಳೆಯ ಕೆಲಸಗಳಿಗೆ ರೌಡಿಯಾಗುವವನ ಕಥೆ. ಅಂಥ ರೌಡಿ ಮತ್ತು ನಾಯಕಿಯ ಮಧ್ಯೆ ಪ್ರೀತಿ ಆಗುತ್ತದೆ. ನಂತರ ಏನಾಗುತ್ತದೆ ಎನ್ನುವುದೇ ಸಿನಿಮಾ’ ಎಂದು ಎಳೆಯನ್ನು ಬಿಟ್ಟುಕೊಟ್ಟರು ನಿರ್ದೇಶಕರು. ಹುಬ್ಬಳ್ಳಿಯ ಹುಡುಗನೊಬ್ಬ ಬೆಂಗಳೂರಿಗೆ ಬಂದು ರೌಡಿಸಂ ಲೋಕದಲ್ಲಿ ಮೆರೆಯುವ ಕಥೆ ಇದು. ಹುಬ್ಬಳ್ಳಿಯವರೇ ಆದ ಜಾಗ್ವಾರ್‌ ಜಗ್ಗಿ ಈ ಚಿತ್ರದ ಮೂಲಕ ನಾಯಕನಟನಾಗಿ ಪರಿಚಿತರಾಗುತ್ತಿದ್ದಾರೆ. ಅವರ ಜತೆ ಡಾಕ್ಟರ್‌ ಪಾತ್ರದಲ್ಲಿ ಲೇಖಾಚಂದ್ರ ತೆರೆ ಹಂಚಿಕೊಳ್ಳುತ್ತಿದ್ದಾರೆ.

ADVERTISEMENT

ಹುಬ್ಬಳ್ಳಿ, ಸಾತೊಡ್ಡಿ ಜಲಪಾತ, ಉಡುಪಿ, ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ನಾಯಕನ ತಾಯಿಯ ಪಾತ್ರದಲ್ಲಿ ಯಮುನಾ ನಟಿಸಿದ್ದಾರೆ. ರಾಚ್‌ಪುಟ್ಟಿ ಅರುಣ್‌ಕುಮಾರ್‌ ಛಾಯಾಗ್ರಹಣ, ಮಾಸ್‌ ಮಾದ ಸಾಹಸ, ಸತೀಶ್‌ ಆರ್ಯನ್‌ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಕಾರ್ಯಕ್ರಮಕ್ಕೆ ಬಂದಿದ್ದ ಹುಬ್ಬಳ್ಳಿಯವರೊಬ್ಬರು ಈ ಚಿತ್ರ ಬಿಡುಗಡೆಯಾದಾಗ ನಾನು ಸಾವಿರ ರೂಪಾಯಿ ಮೌಲ್ಯದ ಟಿಕೆಟ್‌ ಖರೀದಿಸುವುದಾಗಿ ಕಾರ್ಯಕ್ರಮದಲ್ಲಿಯೇ ಘೋಷಿಸಿದರು. ಜಾಗ್ವಾರ್‌ ಜಗ್ಗಿ ತಾಯಿ ಪಾರ್ವತಿ ಎಸ್‌. ಮಗನ ಮೇಲಿನ ಪ್ರೀತಿಗಾಗಿ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.