ADVERTISEMENT

ನಾಗಕನ್ನಿಕೆಯ ಭೂಲೋಕದ ಮಾತು

ರೇಷ್ಮಾ ಶೆಟ್ಟಿ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ನಾಗಕನ್ನಿಕೆಯ ಭೂಲೋಕದ ಮಾತು
ನಾಗಕನ್ನಿಕೆಯ ಭೂಲೋಕದ ಮಾತು   

ನೀಳ ಕಾಯ. ತೆಳ್ಳಗೆ ಬಳುಕುವ ಬಳ್ಳಿಯಂತಹ ದೇಹಸಿರಿ. ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಕಣ್ಣೋಟ. ಮತ್ತೆ ಮತ್ತೆ ಕೇಳಬೇಕೆನಿಸುವ ಇಂಪಾದ ದನಿ. ಸ್ಫುಟವಾಗಿ ಉಸುರುವ ಕನ್ನಡ ಪದಗಳು. ಇವೆಲ್ಲ ಇವರ ಪ್ಲಸ್‌ ಪಾಯಿಂಟ್‌.

ಬೆಣ್ಣೆದೋಸೆಗೆ ಪ್ರಸಿದ್ಧಿ ಹೊಂದಿರುವ ದಾವಣಗೆರೆಯವರಾದ ಈ ಚೆಲುವೆ ಚಪಾತಿ ಪ್ರಿಯೆ. ಎಂಜಿನಿಯರಿಂಗ್ ಮಾಡಿ ಎಂ.ಬಿ.ಎ. ಮುಗಿಸಿದ್ದ ಇವರಿಗೆ ನಟನೆ ಒಲಿದಿದ್ದು ಆಕಸ್ಮಿಕವಾಗಿ. ಓದು ಮುಗಿದ ಮೇಲೆ ಅರೆಕಾಲಿಕ ಕಾರ್ಯಕ್ರಮ ನಿರೂಪಕಿಯಾಗಿದ್ದರು. ಅದಕ್ಕಾಗಿ ಆಗಾಗ ಬೆಂಗಳೂರಿಗೆ ಬರುವ ಅವಕಾಶ ಎದುರಾಗುತ್ತಿತ್ತು. ಹೀಗೆಯೇ ಬಂದಿದ್ದಾಗ ಒಮ್ಮೆ ಸುವರ್ಣ ವಾಹಿನಿಯಲ್ಲಿ ‘ಗುಂಡ್ಯನಾ ಹೆಂಡ್ತಿ’ ಎಂಬ ಧಾರಾವಾಹಿಯ ಆಡಿಷನ್‌ನಲ್ಲಿ ಭಾಗವಹಿಸಿ ಆಯ್ಕೆಯಾದರು. ಹೀಗೆ ಅವರ ಧಾರಾವಾಹಿ ಪಯಣ ಆರಂಭವಾಗಿತ್ತು.

ಮೊದಲ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಚಂದನವನಕ್ಕೆ ಕಾಲಿರಿಸುವ ಅದೃಷ್ಟವೂ ಒಲಿಯಿತು. ನಟ ಅಜಯ್‌ರಾವ್ ನಾಯಕನಾಗಿ ನಟಿಸಿದ ‘ಧೈರ್ಯಂ’ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾದರು. ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವಾಗಲೇ ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶವೂ ಒದಗಿ ಬಂತು.

ADVERTISEMENT

ಕಿರುತೆರೆಗೆ ಹಿಂದಿರುಗುವ ಯೋಚನೆ ಇಲ್ಲದ ಅವರನ್ನು ಮತ್ತೆ ಅತ್ತ ಸೆಳೆದಿದ್ದು ‘ಶಿವಾನಿ’ ಪಾತ್ರ. ಧಾರಾವಾಹಿಯಲ್ಲಿ ಶಿವಾನಿ ಪಾತ್ರಕ್ಕಿರುವ ಪ್ರಾಮುಖ್ಯವನ್ನು ಪರಿಗಣಿಸಿ ಮತ್ತೆ ಕಿರುತೆರೆಯತ್ತ ತಮ್ಮ ಹೆಜ್ಜೆಯನ್ನಿರಿಸಿದ್ದರು ಅದಿತಿ.

ದೇವರು ಅನ್ನುವುದು ಒಂದು ಶಕ್ತಿ. ಮನುಷ್ಯನ ನಂಬಿಕೆಯೇ ದೇವರು ಎನ್ನುವ ಇವರು ನಿಜ ಜೀವನದಲ್ಲಿ ನಾಗಿಣಿ, ದೇವರು ಮೈಮೇಲೆ ಬರುವುದು ಇಂತಹದ್ದನ್ನೆಲ್ಲಾ ನಂಬುವುದಿಲ್ಲವಂತೆ. ‘ದೇವರು ಎನ್ನುವುದು ಶಕ್ತಿ. ನಾನು ದೇವರನ್ನು ನಂಬುತ್ತೇನೆ. ಅದರಲ್ಲೂ ನಾಗದೇವರನ್ನು ನಾನು ತುಂಬಾ ಭಕ್ತಿಯಿಂದ ಪೂಜಿಸುತ್ತೇನೆ. ಹಾವುಗಳನ್ನು ಕೈಯಿಂದ ಮುಟ್ಟಿದ್ದೇನೆ. ನಿಜ ಜೀವನದಲ್ಲಿ ನನಗೆ ಹಾವುಗಳೆಂದರೆ ಭಯವಿಲ್ಲ’ ಎಂದು ದೇವರು ಹಾಗೂ ನಾಗಿಣಿ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ಧಾರಾವಾಹಿಯಲ್ಲಿ ನಿಮ್ಮ ಗಂಡನ ಮೇಲೆ ಶೇಷಾಳಿಗೆ ವ್ಯಾಮೋಹವಿದೆ. ಈ ನಾಗಿಣಿಗಳಲ್ಲೂ ಪ್ರೀತಿ, ವ್ಯಾಮೋಹ ಅನ್ನೋದೆಲ್ಲ ಇರುತ್ತಾ ಎಂದು ಕೇಳಿದರೆ, ‘ಪ್ರೀತಿ ಎನ್ನುವುದು ಒಂದು ಮಧುರ ಅನುಭೂತಿ. ಆ ಅನುಭೂತಿ ಜಗತ್ತಿನ ಪ್ರತಿ ಪ್ರಾಣಿಗಳಲ್ಲೂ ಇದೆ. ಜಗತ್ತು ನಿಂತಿರುವುದೇ ಪ್ರೀತಿಯ ಮೇಲೆ.

ಆದರೆ, ಈ ವ್ಯಾಮೋಹ ಇದೆಯೆಲ್ಲಾ ಅದು ಎಂದಿಗೂ ಕೆಟ್ಟದ್ದು. ನನ್ನ ನಿಜ ಜೀವನದಲ್ಲಿ ಎಲ್ಲಾದರೂ ನನ್ನ ಗಂಡನ ಮೇಲೆ ಬೇರೆಯವರು ಕಣ್ಣು ಹಾಕಿದರೆ ಖಂಡಿತಾ ಅವರನ್ನು ಸಾಯಿಸಿ ಬಿಡ್ತೀನಿ’ ಎಂದು ನಗುತ್ತಾರೆ ಈ ನಾಗಕನ್ನಿಕೆ.

‘ನಾಗಕನ್ನಿಕೆ’ಯಲ್ಲಿ ನಟಿಸುತ್ತಿರುವಾಗಲೇ ಅವರಿಗೆ ಅನೇಕ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬಂದಿದ್ದವು. ಆದರೆ, ಈ ಧಾರಾವಾಹಿಗೆ ತಿಂಗಳಲ್ಲಿ 24 ದಿನ ಶೂಟಿಂಗ್ ಇರುತ್ತಿತ್ತು. ಆ ಕಾರಣಕ್ಕೆ ಸಮಯ ಸಿಗುತ್ತಿರಲಿಲ್ಲ. ಹೊಸ ವರ್ಷದಲ್ಲಿ ಖಂಡಿತಾ ಸಿನಿಮಾಗಳಲ್ಲಿ ನಟಿಸುತ್ತೇನೆ. ಈಗಾಗಲೇ ಕಥೆಗಳನ್ನು ಕೇಳುತ್ತಿದ್ದೇನೆ’ ಎಂದು ಭವಿಷ್ಯದ ಹಾದಿಯನ್ನು ತೆರೆದಿಡುತ್ತಾರೆ.

ಅಣ್ಣಾವ್ರ ಹುಚ್ಚು ಅಭಿಮಾನಿ ಆಗಿರುವ ಅವರು ಚಿಕ್ಕವಯಸ್ಸಿನಿಂದಲೇ ಅವರ ಹಾಡುಗಳನ್ನು ಕೇಳುತ್ತಾ ಬೆಳೆದವರಂತೆ. ‘ಸಿನಿಮಾ ಮಾತ್ರವಲ್ಲದೇ ಹಲವಾರು ವಿಷಯಗಳ ಕಾರಣಕ್ಕೆ ಅವರು ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ್ದಾರೆ’ ಎಂದು ಅಭಿಮಾನ ವ್ಯಕ್ತಪಡಿಸುತ್ತಾರೆ.

ನಟಿ ಜಯಂತಿ ಹಾಗೂ ಕಲ್ಪನಾ ಅವರ ನೆಚ್ಚಿನ ನಟಿಯರು. ಈಗ ರಾಧಿಕಾ ಪಂಡಿತ್ ಈ ಸಾಲಿಗೆ ಸೇರುವ ಇನ್ನೊಬ್ಬ ನಟಿ.

ಯಾವುದೇ ಪಾತ್ರವಾದರೂ ಶೇ 100ರಷ್ಟು ಪ್ರಯತ್ನ ಹಾಕಿ ನಟಿಸುತ್ತೇನೆ ಎನ್ನುವ ಅವರಿಗೆ ಪೌರಾಣಿಕ ಪಾತ್ರಗಳಲ್ಲಿ ನಟಿಸುವ ಆಸೆ. ಹಲವರು ನನಗೆ ನಿಮ್ಮ ಎತ್ತರ, ದೇಹಸಿರಿ ಹಾಗೂ ನೋಟ ಪೌರಾಣಿಕ ಪಾತ್ರಗಳಿಗೆ ಹೆಚ್ಚು ಒಪ್ಪುತ್ತದೆ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ನನಗೂ ಅದು ಇಷ್ಟ ಎನ್ನುತ್ತಾರೆ.

‌‌ಅದಿತಿ ನಟನೆಗೆ ಮನೆಯವರ ಸಂಪೂರ್ಣ ಸಹಕಾರವಿದೆ. ಅದರಲ್ಲೂ ತಾಯಿಯೇ ನನ್ನ ನಟನೆಗೆ ಬೆನ್ನೆಲುಬು ಎಂದು ಖುಷಿಯಿಂದ ಹೇಳುತ್ತಾರೆ.

ಕನಸಿನ ಹುಡುಗನ ಬಗ್ಗೆ ಹೇಳುತ್ತಾ ‘ನಾಗಕನ್ನಿಕೆಯ ಹೀರೊನಂತೆಯೇ ನನ್ನ ಗಂಡ ನನ್ನನ್ನು ತುಂಬಾ ಪ್ರೀತಿ ಮಾಡಬೇಕು. ಅವನ ಪ್ರೀತಿ ಬೇರೆಯವರಿಗೆ ಹಂಚಿ ಹೋಗಬಾರದು. ನನಗೆ ಇನ್ನೂ ಕನಸಿನ ಹುಡುಗ ಸಿಕ್ಕಿಲ್ಲ. ಹೊಸ ವರ್ಷದಲ್ಲಿ ಸಿಗಬಹುದು ನೋಡೋಣ. ಮದುವೆಯಾದ ಮೇಲೆ ನಾನು ಕಾಶ್ಮೀರ ಅಥವಾ ಸ್ವಿಡ್ಜರ್‌ಲೆಂಡ್‌ಗೆ ಹನಿಮೂನ್‌ ಹೋಗಬಹುದು’ ಎಂದು ಮತ್ತೆ ನಗು ಚೆಲ್ಲುತ್ತಾರೆ ಅದಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.