ADVERTISEMENT

‘ರಾಜು ಕನ್ನಡ ಮೀಡಿಯಂ’ಗೆ ಯಶಸ್ಸಿನ ಖುಷಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 10:12 IST
Last Updated 23 ಜನವರಿ 2018, 10:12 IST
ಸಿನಿಮಾದ ದೃಶ್ಯ
ಸಿನಿಮಾದ ದೃಶ್ಯ   

‘ರಾಜು ಕನ್ನಡ ಮೀಡಿಯಂ’ ಸಿನಿಮಾ ತಂಡ ಸುದ್ದಿಗೋಷ್ಠಿ ಕರೆದಿತ್ತು. ಕಳೆದ ಶುಕ್ರವಾರವಷ್ಟೇ ತೆರೆಗೆ ಬಂದ ಸಿನಿಮಾ ಇದು. ಮಾರನೆಯ ವಾರದಲ್ಲೇ ಸುದ್ದಿಗೋಷ್ಠಿ ಕರದಿದ್ದಾರೆ ಅಂದರೆ ಏನೋ ಸುದ್ದಿ ಇರುತ್ತದೆ ಎಂಬುದು ಖಚಿತ.

ನಿರ್ಮಾಪಕ ಕೆ.ಎ. ಸುರೇಶ್, ನಿರ್ದೇಶಕ ನರೇಶ್ ಕುಮಾರ್, ನಾಯಕ ನಟ ಗುರುನಂದನ್ ಸೇರಿದಂತೆ ಇಡೀ ತಂಡ ಸುದ್ದಿಗೋಷ್ಠಿಯಲ್ಲಿ ಇತ್ತು. ಎಲ್ಲರ ಮುಖದಲ್ಲೂ ಗೆಲುವಿನ ನಗು ಕಾಣುತ್ತಿತ್ತು. ಅಂದರೆ ಸಿನಿಮಾದ ‘ಯಶಸ್ಸು’ ತಂದುಕೊಟ್ಟಿದೆ ಎಂದು ತಿಳಿಸಲು ಸುದ್ದಿಗೋಷ್ಠಿ ಕರದಿದ್ದಾರೆ ಎಂಬುದು ಖಚಿತವಾಗುವಂತೆ ಇತ್ತು.

‘ಸಿನಿಮಾ ಎಲ್ಲ ಕಡೆಯೂ ಹೌಸ್ ಫುಲ್ ಆಗಿ ಓಡುತ್ತಿದೆ. ಜನ ಮಾತಿನ ಮೂಲಕ ನಮಗೆ ಸಾಕಷ್ಟು ಪ್ರಚಾರ ಕೊಡುತ್ತಿದ್ದಾರೆ. ಒಳ್ಳೆಯ ಸಿನಿಮಾವನ್ನು ಜನ ಕೈಬಿಡಲ್ಲ ಎಂಬ ಮಾತು ಸತ್ಯವಾಗುತ್ತಿದೆ’ ಎಂದು ಖುಷಿಯಿಂದ ಹೇಳಿದರು ನರೇಶ್ ಕುಮಾರ್.

ADVERTISEMENT

ಬಿಜೆಪಿ ಮುಖಂಡ ಆರ್. ಅಶೋಕ್ ಈ ಸಿನಿಮಾ ವೀಕ್ಷಿಸಿ, ‘ನಾನು ಓದಿದ್ದೂ ಕನ್ನಡ ಮೀಡಿಯಂ ಶಾಲೆಯಲ್ಲಿ’ ಎಂದು ಹೇಳಿದ್ದಾರಂತೆ. ಹಾಗೆಯೇ ಈ ಸಿನಿಮಾ ವೀಕ್ಷಿಸುವ ಇಚ್ಛೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ವ್ಯಕ್ತಪಡಿಸಿದ್ದಾರಂತೆ.

ರಾಜು ರಿಮೇಕ್: ‘ಜನ ನಮ್ಮ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನು ಬೇರೆ ಭಾಷೆಗಳಲ್ಲಿ ರಿಮೇಕ್ ಮಾಡುವ ಯೋಜನೆ ಚಾಲನೆ ಪಡೆದಿದೆ’ ಎಂದರು ಸುರೇಶ್. ‘ಈ ಸಿನಿಮಾದ ತೆಲುಗು ರಿಮೇಕ್‌ನಲ್ಲಿ ಪವನ್ ಕಲ್ಯಾಣ್ ಅವರು ನಟಿಸಬೇಕು, ಕನ್ನಡದಲ್ಲಿ ಸುದೀಪ್ ಮಾಡಿರುವ ಪಾತ್ರವನ್ನು ಅವರಿಗೆ ಕೊಡಬೇಕು ಎಂಬ ಆಲೋಚನೆ ಇದೆ’ ಎಂದರು. ಹಾಗೆಯೇ ಮಾತು ಮುಂದುವರಿಸಿ ‘ತೆಲುಗು ರಿಮೇಕ್‌ಗೆ ನಾನೇ ಹಣ ಹೂಡಿಕೆ ಮಾಡಿದರೆ ಅದರಲ್ಲೂ ಅಭಿನಯಿಸುವಂತೆ ಸುದೀಪ್ ಅವರನ್ನು ಕೋರಲಾಗುವುದು’ ಎಂದರು.

ಅಮೀರ್ ಖಾನ್ ಪ್ರೊಡಕ್ಷನ್ ಮತ್ತು ಶಾರುಖ್‌ ಖಾನ್ ಒಡೆತನದ ರೆಡ್ ಚಿಲ್ಲೀಸ್ ಸಿನಿಮಾ ನಿರ್ಮಾಣ ಸಂಸ್ಥೆ ಜೊತೆ ಒಡನಾಟ ಇರುವವರೊಬ್ಬರು ಈ ಸಿನಿಮಾವನ್ನು ಹಿಂದಿಯಲ್ಲೂ ಮಾಡುವ ಮಾತುಕತೆ ನಡೆಸಿದ್ದಾರೆ. ಅದು ಸಾಕಾರಗೊಂಡರೆ ಅಮೀರ್ ಖಾನ್ ಮತ್ತು ಶಾರುಖ್ ಖಾನ್‌ ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು ಸುರೇಶ್.

ಅಂದಹಾಗೆ, ಟಿ.ವಿ ಹಕ್ಕುಗಳ ಮಾರಾಟ ಮತ್ತು ಸಿನಿಮಾ ಮಂದಿರಗಳಿಂದ ಬರುವ ಹಣದಿಂದ ಸಿನಿಮಾ ಲಾಭದತ್ತ ಸಾಗುತ್ತದೆ ಎಂಬ ವಿಶ್ವಾಸವನ್ನೂ ಸುರೇಶ್ ವ್ಯಕ್ತಪಡಿಸಿದರು.

ಹಿರಿಯ ರಾಜಕಾರಣಿಗಳಾದ ಎಚ್.ಡಿ. ದೇವೇಗೌಡ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಎಚ್.ಡಿ. ಕುಮಾರಸ್ವಾಮಿ ಅವರಿಗೂ ಈ ಸಿನಿಮಾ ತೋರಿಸುವ ಆಲೋಚನೆ ಸಿನಿತಂಡಕ್ಕೆ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.