ADVERTISEMENT

ಮಲೆನಾಡಿನಲ್ಲಿನ ನಿಗೂಢ ಕಥನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಮಲೆನಾಡಿನಲ್ಲಿನ ನಿಗೂಢ ಕಥನ
ಮಲೆನಾಡಿನಲ್ಲಿನ ನಿಗೂಢ ಕಥನ   

ರಾಘು ಶಿವಮೊಗ್ಗ ಅವರ ಮುಖದಲ್ಲಿ ದೊಡ್ಡ ಕೆಲಸವೊಂದನ್ನು ಶ್ರದ್ಧೆಯಿಂದ ಮಾಡಿ ಮುಗಿಸಿದ ನಿರಾಳಭಾವ ಎದ್ದು ಕಾಣುತ್ತಿತ್ತು. ತನ್ನ ಕನಸಿನ ಕೂಸನ್ನು ಪ್ರೇಕ್ಷಕನ ಮಡಿಲಲ್ಲಿ ಇಡುತ್ತಿದ್ದೇನೆ ‘ತೇಲಿಸುವನೋ ಮುಳುಗಿಸುವನೋ’ ಎಂಬ ಹೊಯ್ದಾಟದ ತುಮುಲವೂ ಆಗೀಗ ಮಿಂಚಿ ಮರೆಯಾಗುತ್ತಿರುವಂತೆ ಕಾಣುತ್ತಿತ್ತು.

‘ಚೂರಿಕಟ್ಟೆ’ ಸಿನಿಮಾ ಇದೇ ವಾರ (ಜ. 26)ರಂದು ಬಿಡುಗಡೆಯಾಗುತ್ತಿದೆ ಎಂಬ ವಿಷಯವನ್ನು ತಿಳಿಸಲಿಕ್ಕಾಗಿಯೇ ಅವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಆದರೆ ‘ತನಗೆ ಹೇಳಬೇಕಿರುವುದೆಲ್ಲವೂ ಮುಗಿದಿದೆ’ ಎಂಬಂತೆ ರಾಘು ಮೈಕನ್ನು ಅಕ್ಕಪಕ್ಕದವರಿಗೆ ವರ್ಗಾಯಿಸುತ್ತಿದ್ದರು. ಮೊದಲ ಮೈಕ್‌ ಹಸ್ತಾಂತರ ನಡೆದಿದ್ದು ನಿರ್ಮಾಪಕ ಎಸ್‌ನ. ನಯಾಜುದ್ದೀನ್‌ ಅವರಿಗೆ. ಅವರು ‘ಈ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ಶ್ರಮಪಟ್ಟು ಮಾಡಿದ ಸಿನಿಮಾ. ಜನರು ಹಾರೈಸಬೇಕು’ ಎಂದಷ್ಟೇ ಹೇಳಿ ಮುಗಿಸಿದರು.

ನಾಯಕನಟ ಪ್ರವೀಣ್‌ ಅವರಿಗೆ ಮಾತನಾಡಲು ಸಾಕಷ್ಟು ವಿಷಯ ಇದ್ದಂತಿತ್ತು. ‘ನಟನಿಗೆ ಒಂದು ಒಳ್ಳೆಯ ತಂಡ ಸಿಕ್ಕುವುದು ಬಹಳ ಅಪರೂಪ. ಆದರೆ ಈ ಚಿತ್ರದಲ್ಲಿ ನನಗೆ ಅಂಥದ್ದೊಂದು ಒಳ್ಳೆಯ ತಂಡ ಸಿಕ್ಕಿದೆ. ‘ಚೂರಿಕಟ್ಟೆ’ಯಲ್ಲಿ ರಂಗಭೂಮಿ ಕಲಾವಿದರ ದೊಡ್ಡ ದಂಡೇ ಇದೆ. ಇಂಥವರ ಜತೆ ನಟಿಸುತ್ತಿರುವುದು ನನ್ನ ಅದೃಷ್ಟ’ ಎಂದರು.

ADVERTISEMENT

‘ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಈ ಪಾತ್ರ ನೀಡಿದ್ದಾರೆ. ನಾನೂ ಅವರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂಬ ವಿಶ್ವಾಸ ಇದೆ. ಸಿನಿಮಾ ಬಿಡುಗಡೆಗೆ ಬಂದಿರುವ ಖುಷಿಯೂ ಇದೆ. ಇಷ್ಟು ಒಳ್ಳೆಯ ತಂಡದೊಡನೆಯ ನಿರಂತರ ಒಡನಾಟ ಮುಗಿಯುತ್ತಿದೆಯಲ್ಲ ಎಂಬ ನೋವೂ ಕಾಡುತ್ತಿದೆ’ ಎಂದರು ನಾಯಕಿ ಪ್ರೇರಣಾ.


ಪ್ರವೀಣ್

ನಂತರ ಮಾತಿಗಿಳಿದ ಶರತ್‌ ಲೋಹಿತಾಶ್ವ ಅವರು ರಾಘು ಶಿವಮೊಗ್ಗ ಅವರನ್ನು ಮೆಚ್ಚಿಕೊಳ್ಳುತ್ತಲೇ ಹೊಸಬರ ದೋಷಗಳ ಕುರಿತೂ ಗಮನಸೆಳೆದರು. ‘ಎಷ್ಟೊ ಸಲ ತುಂಬಜನ ಹೊಸಬರು ಯಾವುದೇ ತಯಾರಿ ಇಲ್ಲದೆ ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಸಾಕಷ್ಟು ವರ್ಷ ತಾಲೀಮು ನಡೆಸಿ, ಸಿನಿಮಾ ಮಾಧ್ಯಮದ ಎಲ್ಲ ಆಯಾಮಗಳ ಬಗ್ಗೆ ಆಳವಾಗಿ ತಿಳಿದುಕೊಂಡು, ಬಂದಿರುವ ವ್ಯಕ್ತಿ ರಾಘು ಶಿವಮೊಗ್ಗ. ಇವರು ಕನ್ನಡ ಚಿತ್ರರಂಗದ ನಾಳಿನ ಭರವಸೆಯ ನಿರ್ದೇಶಕ ಎಂದು ನಾನು ಬಲವಾಗಿ ಹೇಳಬಲ್ಲೆ. ‘ಚೂರಿಕಟ್ಟೆ’ ವ್ಯಾಪಾರಿ ದೃಷ್ಟಿಯಿಂದ ಗೆಲುವು ಕಾಣುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ನಿರ್ದೇಶಕರು ಒಂದು ಒಳ್ಳೆಯ ಸಿನಿಮಾ ಕೊಟ್ಟಿದ್ದಾರೆ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ’ ಎಂದರು. ಶರತ್‌ ಈ ಚಿತ್ರದಲ್ಲಿ ಪ್ರಕಾಶ್‌ ಶೆಟ್ಟಿ ಎಂಬ ಖಳನ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನೋರ್ವ ಹಿರಿಯ ನಟ ಮಂಜುನಾಥ್‌ ಭಟ್‌ ಮಾತುಗಳಲ್ಲಿ ಕೂಡ ಇದೇ ಭರವಸೆ ಇತ್ತು. ‘ಈ ಚಿತ್ರದಲ್ಲಿ ಹಾಡಿದೆ. ಫೈಟಿದೆ, ಜತೆಗೆ ಒಳ್ಳೆಯ ಕಥೆ ಇದೆ. ಹಾಗೆಯೇ ಕೊನೆಗೊಂದು ಸತ್ಯದರ್ಶನವೂ ಇದೆ. ಎಲ್ಲ ಆಯಾಮಗಳಿಂದಲೂ ಇದು ಒಂದು ಒಳ್ಳೆಯ ಸಿನಿಮಾ. ಸಿನಿಪ್ರಿಯರಿಗೆ ಒಳ್ಳೆಯ ಔತಣ ಸಿದ್ಧಗೊಂಡಿದೆ’ ಎಂದು ಆಸ್ವಾದನೆಗೆ ಆಹ್ವಾನಿಸಿದರು.

ಚಿತ್ರದಲ್ಲಿನ ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ವಾಸುಕೀ ವೈಭವ್‌ ಕೂಡ ‘ನಾವೆಲ್ಲರೂ ತುಂಬ ಶ್ರಮವಹಿಸಿ ಮಾಡಿದ ಸಿನಿಮಾ ಇದು. ಚಿತ್ರಮಂದಿರಕ್ಕೆ ಬಂದು ನೋಡಿ’ ಎಂದು ಪ್ರೇಕ್ಷಕರಿಗೆ ಆಹ್ವಾನ ನೀಡಿದರು.

ಕೈಲಾಶ್‌ ಅವರ ಕಥೆ ಈ ಚಿತ್ರಕ್ಕಿದೆ. ಅರವಿಂದ ಕುಪ್ಳೀಕರ್‌ ಚಿತ್ರಕಥೆಯಲ್ಲಿ ಕೈಜೋಡಿಸಿದ್ದಾರೆ. ಬಾಲಾಜಿ ಮನೋಹರ್‌, ಅಚ್ಯುತ್‌ ಕುಮಾರ್‌, ಕಿರಣ ನಾಯ್ಕ ವಿವೇಕ್‌, ಮುಂತಾದವರು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಧ್ವೈತ್‌ ಗುರುಮೂರ್ತಿ ಮಲೆನಾಡಿನ ಕಾಡನ್ನು ಅದರ ನಿಗೂಢತೆಯೊಟ್ಟಿಗೇ ಸೆರೆಹಿಡಿಯುವ ಜವಾಬ್ದಾರಿ ನಿರ್ವಹಿಸಿದ್ದಾರೆ.


ವೈಭವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.