ADVERTISEMENT

ಕಪ್ಪು ಗುಲಾಬಿಯ ಕಥೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಕಪ್ಪು ಗುಲಾಬಿಯ ಕಥೆ
ಕಪ್ಪು ಗುಲಾಬಿಯ ಕಥೆ   

ನಟ, ನಿರ್ದೇಶಕ ಸುನೀಲ್ ಪುರಾಣಿಕ್ ಅವರು ಸಿನಿಮಾವೊಂದರ ನಿರ್ದೇಶನ ಆರಂಭಿಸಿದ್ದಾರೆ. ಆರ್.ವಿ. ರಮೇಶ್ ಯಾದವ್ ನಿರ್ಮಾಣದ ಈ ಸಿನಿಮಾದಲ್ಲಿ 'ಮುಗುಳು ನಗೆ' ಸಿನಿಮಾದಲ್ಲಿ ಪುದುಚೇರಿಯ ಬೆಡಗಿಯಾಗಿ ಕಾಣಿಸಿಕೊಂಡ ನಿಖಿತಾ ನಾರಾಯಣ್ ಕೂಡ ಅಭಿನಯಿಸುತ್ತಿದ್ದಾರೆ.

ಅಂದಹಾಗೆ, ಈ ಸಿನಿಮಾದ ಹೆಸರು 'ಕಪ್ಪು ಗುಲಾಬಿ'. ಅಂದರೆ ಪ್ರೀತಿಯ ಕರಾಳ ಮುಖ! ಸಿನಿಮಾ ಬಗ್ಗೆ ಮಾಹಿತಿ ನೀಡಲು ಸುನೀಲ್ ಅವರು ಮಾಧ್ಯಮಗೋಷ್ಠಿ ಕರೆದಿದ್ದರು. 'ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಪವನ್ ಒಡೆಯರ್ ಅವರದ್ದು. ನಿಖಿತಾ ನಾರಾಯಣ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸಾಗರ್ ಪುರಾಣಿಕ್ ನಾಯಕ' ಎಂದರು ಸುನೀಲ್.

'ಇದು ನನ್ನ ಹೊಸ ಯೋಜನೆ. ಇಂಥದ್ದೊಂದು ಸಿನಿಮಾ ಮಾಡುವ ತುಡಿತ ಬಹಳ ದಿನಗಳಿಂದ ಇತ್ತು. ಅದಕ್ಕೆ ಯಾದವ್ ಅವರು ನೆರವಾಗಿದ್ದಾರೆ. ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ವರ್ಗಗಳ ಕಥೆಯನ್ನು ಜನರಿಗೆ ಹೇಳಬೇಕು ಎಂಬುದು ಯಾದವ್ ಬಯಕೆ' ಎಂದು ತಮ್ಮ ನಿರ್ಮಾಪಕರ ಪರಿಚಯ ಮಾಡಿಕೊಟ್ಟರು ಸುನೀಲ್.

ADVERTISEMENT

'ಇದು ನಾಯಕಿ ಪ್ರಧಾನ ಚಿತ್ರವಾದರೂ, ಕಥೆಯೇ ಈ ಚಿತ್ರದ ಹೀರೊ. ಪಾತ್ರದ ಬಗ್ಗೆ ನಿಖಿತಾ ಪ್ಯಾಷನ್ ತೋರಿಸಿದರು. ನಿಖಿತಾ ಅವರು ನಿಭಾಯಿಸುತ್ತಿರುವ ಪಾತ್ರಕ್ಕೆ ಗ್ಲಾಮರ್ ಮತ್ತು ಅಭಿನಯ ಎರಡೂ ಬೇಕಾಗುತ್ತದೆ' ಎಂದರು.

ಗಂಭೀರವಾದ ಹಾಗೂ ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿಯ ಪಾತ್ರವನ್ನು ಸುಚೇಂದ್ರ ಪ್ರಸಾದ್ ಮಾಡುತ್ತಿದ್ದಾರೆ. ಸುಧಾ ಬೆಳವಾಡಿ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ‌. ಬೆಂಗಳೂರು, ಮಂಗಳೂರು, ಶಿರಸಿ, ಸಿದ್ದಾಪುರ, ಯಾಣದಲ್ಲಿ ಚಿತ್ರೀಕರಣ ನಡೆಯುತ್ತದೆ ಎಂದು ತಂಡ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸುಚೇಂದ್ರ ಪ್ರಸಾದ್ 'ಇದು ಕೇವಲ ವಾಣಿಜ್ಯಿಕ ದೃಷ್ಟಿಯಿಂದ ಮಾಡಿದಂತಹ ಸಿನಿಮಾ ಅಲ್ಲ' ಎಂದರು.

'ಕಥೆ ಬಹಳ ಇಷ್ಟವಾಯಿತು. ಮುಗುಳುನಗೆ ಸಿನಿಮಾದಲ್ಲಿ ನಾನು ಪಾಷ್ ಆಗಿರುವ ಹುಡುಗಿಯ ಪಾತ್ರ ಮಾಡಿದ್ದೆ. ಈ ಸಿನಿಮಾದಲ್ಲಿ ನನ್ನದು ಹೋಮ್ಲಿ ಹುಡುಗಿಯ ಪಾತ್ರ. ಇದರಲ್ಲಿ ನನಗೆ ಅಭಿನಯಕ್ಕೆ ಅವಕಾಶವಿದೆ‌' ಎಂದರು ನಿಖಿತಾ.

ಸಾಗರ್ ಪುರಾಣಿಕ್ ಅವರು ಮಾತನಾಡಿ 'ಇದು‌ ನನಗಾಗಿ ಬರೆದ ಕಥೆ ಅಲ್ಲ. ಆದರೆ ಕಥೆ ಬೆಳೆಯುತ್ತ ಬಂದಂತೆ ಈ ಪಾತ್ರ ನೀವೇ ಮಾಡಿ ಅಂತ ನಿರ್ಮಾಪಕರು ಹೇಳಿದರು. ನನಗೆ ಸ್ಟಾರ್ ಆಗುವುದಕ್ಕಿಂತಲೂ ನಟನಾಗುವುದು ಹೆಚ್ಚು ಮುಖ್ಯ. ಹಾಗಾಗಿ ಪಾತ್ರವನ್ನು ಖುಷಿಯಿಂದ ಒಪ್ಪಿಕೊಂಡೆ' ಎಂದರು.


ಸುನಿಲ್ ಪುರಾಣಿಕ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.