ADVERTISEMENT

ಜ್ಞಾನೇಶ್ವರನ ಗಾನ ಮೋಡಿ

ಸುಬ್ರಹ್ಮಣ್ಯ ಎಚ್.ಎಂ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಜ್ಞಾನೇಶ್ವರನ ಗಾನ ಮೋಡಿ
ಜ್ಞಾನೇಶ್ವರನ ಗಾನ ಮೋಡಿ   

ಗುಡಿಸಲಲ್ಲಿ ಅರಳಿದ ಈ ಬಾಲಪ್ರತಿಭೆಯ ಗಾಯನ ಮಾಧುರ್ಯ ಸಂಗೀತ ಆಸ್ವಾದಿಸುವ ಮನ, ಮನೆಗಳಲ್ಲೂ ಪಸರಿಸಿದೆ. ಸ್ವರವೆತ್ತಿ ಹಾಡಿದರೆ ಕೇಳುಗರಲ್ಲಿ ಮೈಪುಳಕ. ಸ್ಪರ್ಧೆಯ ತೀರ್ಪುಗಾರರಂತೂ ಮೂಕವಿಸ್ಮಿತ.

ಹೌದು. ಅದ್ಭುತ ಕಂಠಸಿರಿಯ ಈ ಪೋರ ಜ್ಞಾನೇಶ್ವರ. ಸಂಗೀತ ಕ್ಷೇತ್ರದ ಶಿಶು ತಾನ್‌ಸೇನ್‌ ಎಂದೇ ತೀರ್ಪುಗಾರರ ಪ್ರೀತಿ ಪಾತ್ರ. ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ ಸೀಸನ್ 14ರ ಮೆಗಾ ಅಡಿಷನಲ್‌ನಲ್ಲಿ 15 ಸ್ಪರ್ಧಿಗಳ ಎದುರು ‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರದ ‌'ನೀಡು... ಶಿವ ನೀಡದಿರು ಶಿವ... ಬಾಗುವುದು ಎನ್ನ ಕಾಯ...’ ಹಾಡು ಹಾಡುವ ಮೂಲಕ ಎಂಟ್ರಿ ಪಡೆದು, ಸ್ಪರ್ಧೆಯ ತೀರ್ಪುಗಾರರಾದ ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್‌ ಜನ್ಯ ಮತ್ತು ಗಾಯಕ ವಿಜಯ ಪ್ರಕಾಶ್‌ ಅವರು ತಲೆದೂಗುವಂತೆ ಮಾಡಿದ ಮೋಡಿಗಾರ.

‘ದೇವತಾ ಮನುಷ್ಯ’ ಚಿತ್ರದ ಹಾಲಲ್ಲಾದರೂ ಹಾಕು...‌ನೀರಲ್ಲಾದರೂ ಹಾಕು ರಾಘವೇಂದ್ರ... ಗೀತೆ ಹಾಡಿದಾಗ ಸ್ವರ ಸಾಧನೆ, ತನ್ಮಯತೆಗೆ ಬೆರಗಾದ ಅರ್ಜುನ್ ಜನ್ಯ ಅವರು ತಮ್ಮ ಕೊರಳಿನಲ್ಲಿದ್ದ ಚಿನ್ನದ ಪದಕದ ಸರವನ್ನು ಉಡುಗೊರೆ ನೀಡಿ ಧನ್ಯತಾಭಾವ ತಳೆದರು. ‘ಕವಿರತ್ನ ಕಾಳಿದಾಸ’ ಚಿತ್ರದ ‘ಬೆಳ್ಳಿ ಮೂಡಿತೊ... ಕೋಳಿ ಕೂಗಿತೊ...’ ಹಾಡಿಗಂತೂ ಇಡೀ ಸೆಟ್‌ನಲ್ಲಿದ್ದ ಜನರು ಹುಚ್ಚೆದ್ದು ಕುಣಿದು, ರಂಜನೆಯಲ್ಲಿ ತೇಲಿ ಹೋದರು.

ADVERTISEMENT

ಹೀಗೆ ಪ್ರತಿವಾರದ ಸಂಚಿಕೆಯಲ್ಲೂ ಅದ್ಭುತ ಹಾಡುಗಾರಿಕೆ ಮೂಲಕ ಟಿ.ವಿ. ವೀಕ್ಷಕರನ್ನು ಮನರಂಜಿಸುತ್ತಿರುವ ಹತ್ತು ವರ್ಷದ ಬಾಲಪ್ರತಿಭೆ ಜ್ಞಾನೇಶ್ವರನ ಹಾದಿ ಕಲ್ಲು– ಮಣ್ಣಿನದ್ದು. ಬಳ್ಳಾರಿಯ ಎಮ್ಮಿಗನೂರು ಗ್ರಾಮದ ಜಡಪ್ಪ ಮತ್ತು ನೀಲಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವ. ಬಯಲಾಟದ ಕಲಾವಿದ, ಹಾಡುಗಾರ ಜಡಪ್ಪ ತನ್ನೂರಿನ ಬಸವೇಶ್ವರ ದೇಗುಲದ ಅಂಗಳದಲ್ಲಿ ನಡೆಯುತ್ತಿದ್ದ ಭಜನೆಯಿಂದ ಪ್ರೇರಿತರಾಗಿ ಹಾಡುಗಾರಿಕೆ ಕಲಿತು, ಅದನ್ನೇ ಪ್ರವೃತ್ತಿಯಾಗಿಸಿಕೊಂಡವರು.

ಹೆಚ್ಚು ಅಕ್ಷರ ಕಲಿಯದ ಅವರು, ವೃತ್ತಿಯಲ್ಲಿ ಮಡಿವಾಳರಾಗಿ ಕುಲಕಸುಬು ಮಾಡುತ್ತಾ ಪತ್ನಿ– ಮಕ್ಕಳ ಹೊಟ್ಟೆ ಹೊರೆಯುತ್ತಿದ್ದ ಬಡಪಾಯಿ. ‍ಜ್ಞಾನೇಶ್ವರ ನಾಲ್ಕು ವರ್ಷದವನಿದ್ದಾಗ ಒಮ್ಮೆ ಊರಿನ ಭಜನಾ ಕಾರ್ಯಕ್ರಮದಲ್ಲಿ ಗಾಯಕರೊಬ್ಬರು ಹಾಡಿದ ‘ಇನ್ನು ದಯ ಬಾರದೆ... ದಾಸನ ಮೇಲೆ...’ ಎನ್ನುವ ಹಾಡನ್ನು ಅನುಕರಿಸಿ ಕಲಿತ. ರಾತ್ರಿ ನಿದ್ದೆಯಲ್ಲೂ ಅದೇ ಹಾಡನ್ನು ಗುನುಗುತ್ತಾ ಸಂಗೀತದ ವ್ಯಾಮೋಹಿಯಾದ. ಮಗನ ಸಂಗೀತ ಪ್ರೇಮ ಕಂಡ ದಂಪ‍ತಿ, ಗದಗದತ್ತ ಗುರು ಅನ್ವೇಷಣೆಗೆ ಹೊರಟರು.

ಆದರೆ, ಎಳೆ ಬಾಲಕನಿಗೆ ಸಂಗೀತ ಕಲಿಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೊಮ್ಮೆ ಬಳ್ಳಾರಿಯಲ್ಲಿ ಪುಟ್ಟರಾಜ ಗವಾಯಿ ಅವರ ಸ್ಮರಣೋತ್ಸವ ಕಾರ್ಯಕ್ರಮ ನಡೆದಾಗ ಅಲ್ಲಿ ಸಂಗೀತ ವಿದ್ವಾಂಸ ದೊಡ್ಡಯ್ಯ ಗವಾಯಿ ಕಲ್ಲೂರ ಅವರ ಪಾದಕ್ಕೆ ಶರಣಾಗಿ ಮಗನಿಗೆ ಸಂಗೀತ ಕಲಿಸಲು ದಂಪತಿ ದುಂಬಾಲು ಬಿದ್ದರು. ಅವರು ನಡೆಸುತ್ತಿದ್ದ ‘ಕುಮಾರೇಶ್ವರ’ ಸಂಗೀತ ಪಾಠಶಾಲೆಯಲ್ಲಿ ಕಲಿಕೆಗೆ ಪ್ರವೇಶ ಸಿಕ್ಕಿತು. ದಿನಾಲೂ ಶಾಲೆ ಮುಗಿಸಿ ತನ್ನೂರಿನಿಂದ 50 ಕಿಲೋಮೀಟರ್ ದೂರದ ಬಳ್ಳಾರಿಗೆ ಅಪ್ಪನ ಹಳೆ ಸ್ಕೂಟರ್‌ನಲ್ಲಿ ಬಂದು ಜ್ಞಾನೇಶ್ವರ ಸಂಗೀತ ಕಲಿಯುತ್ತಾನೆ.

ಎರಡು ವರ್ಷದ ಹಿಂದೆ ಜಡಪ್ಪ ಅವರ ಕುಟುಂಬ ಬಳ್ಳಾರಿಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದೆ. ಹೊಟ್ಟೆಪಾಡಿಗೆ ಅವರು ಆಟೊ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪತ್ನಿ ನೀಲಮ್ಮ ಅವರಿವರ ಮನೆಯ ಬಟ್ಟೆ ತೊಳೆಯುತ್ತಾ ಸಂಸಾರ ಸರಿದೂಗಿಸುತ್ತಿದ್ದಾರೆ. ಇಲ್ಲಿನ ಗಾಂಧಿನಗರದಲ್ಲಿರುವ ಬಾಲಭಾರತಿ ಶಾಲೆಯ ನಾಲ್ಕನೇ ತರಗತಿಯಲ್ಲಿ ಜ್ಞಾನೇಶ್ವರನ ಓದು ಮುಂದುವರಿದಿದೆ. ಇದರ ನಡುವೆ ಅಣ್ಣ ತುಕಾರಾಂ, ಅಕ್ಕ ಗೀತಾಳ ವಿದ್ಯಾಭ್ಯಾಸದ ಹೊಣೆಯೂ ಅವರ ಪೋಷಕರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.