ADVERTISEMENT

ತೆರೆಗೆ ಬರಲು ಸಜ್ಜಾಗುತ್ತಿದೆ ‘ರಾಮಧಾನ್ಯ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಯಶಸ್ ಸೂರ್ಯ ಮತ್ತು ನಿಮಿಕಾ ರತ್ನಾಕರ್
ಯಶಸ್ ಸೂರ್ಯ ಮತ್ತು ನಿಮಿಕಾ ರತ್ನಾಕರ್   

ಟಿ.ಎನ್. ನಾಗೇಶ್ ನಿರ್ದೇಶನದ ಸಿನಿಮಾ ‘ರಾಮಧಾನ್ಯ’ ತೆರೆಗೆ ಬರಲು ಸಜ್ಜಾಗುತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರದ ಹಾಡುಗಳನ್ನು ಸಿನಿಮಾ ತಂಡ ಬಿಡುಗಡೆ ಮಾಡಿದೆ. ಅಂದಹಾಗೆ, ಇದು ಕನಕದಾಸರ ‘ರಾಮಧಾನ್ಯ ಚರಿತೆ’ ನಾಟಕ ಕಂಡು ಮಾಡಿರುವ ಸಿನಿಮಾ. ಇದನ್ನು ಸಿನಿಮಾ ರೂಪಕ್ಕೆ ತಂದಿರುವವರು ಟಿ.ಎನ್. ನಾಗೇಶ್.

ರಾಜ್‌ಕುಮಾರ್‌ ಅಭಿನಯದ ‘ಭಕ್ತ ಕನಕದಾಸ’ ಸಿನಿಮಾ ನಂತರ, ಕನಕದಾಸರ ಬಗ್ಗೆ ಕನ್ನಡದಲ್ಲಿ ಬರುತ್ತಿರುವ ಸಿನಿಮಾ ಇದು ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವ ನೆವದಲ್ಲಿ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಪತ್ರಕರ್ತರನ್ನು ಆಹ್ವಾನಿಸಿತ್ತು.

ನಾಯಕ ನಟ ಯಶಸ್ ಸೂರ್ಯ, ನಾಯಕಿ ನಿಮಿಕಾ ರತ್ನಾಕರ್ ಸೇರಿದಂತೆ ಇಡೀ ಚಿತ್ರತಂಡ ಅಲ್ಲಿತ್ತು. ಯಶಸ್ ಅವರು ಈ ಸಿನಿಮಾದಲ್ಲಿ ಮೂರು ಕಾಲಘಟ್ಟಗಳ ಪಾತ್ರಗಳನ್ನು ನಿಭಾಯಿಸಿದ್ದಾರೆ‌. ಬಸವರಾಜ ಸೂಳೇರಿಪಾಳ್ಯ ಅವರು ಚಿತ್ರಕಥೆ ಬರೆದಿದ್ದಾರೆ.

ADVERTISEMENT

‘ರಾಮಧಾನ್ಯ ಚರಿತೆಯಂತಹ ಕೃತಿ ಭಾರತೀಯ ಸಾಹಿತ್ಯದಲ್ಲಿ ಯಾವುದೂ ಇಲ್ಲ ಎನ್ನುತ್ತಾರೆ. ಕನಕದಾಸರು ಇದರಲ್ಲಿ ಮೂರು ಯುಗಗಳನ್ನು ಚಿತ್ರಿಸಿದ್ದಾರೆ’ ಎಂದರು ಕಾರ್ಯಕ್ರಮಕ್ಕೆ ಬಂದಿದ್ದ ಸಾಹಿತಿ ಕಾ.ತ. ಚಿಕ್ಕಣ್ಣ.

‘ರಾಮಧಾನ್ಯ ಚರಿತೆ ನಾಟಕವನ್ನು ನಾನು ಎರಡು ಬಾರಿ ನೋಡಿದ್ದೆ. ಇದನ್ನು ಸಿನಿಮಾ ರೂಪಕ್ಕೆ ಏಕೆ ತರಬಾರದು ಎಂದು ನನ್ನ ಮಗ ಕೇಳಿದ್ದ. ಮಗನ ಮಾತು ಸಿನಿಮಾ ಮಾಡಲು ಕಾರಣವಾಯಿತು’ ಎಂದರು ನಾಗೇಶ್.

₹ 25 ಲಕ್ಷ ವೆಚ್ಚದಲ್ಲಿ ಈ ಸಿನಿಮಾ ಮಾಡಲು ನಾಗೇಶ್ ಅವರು ಆರಂಭದಲ್ಲಿ ಆಲೋಚಿಸಿದ್ದರಂತೆ. ಅವರು ಹೇಳಿದ ಮೊತ್ತ ಕೇಳಿ ನಿರ್ಮಾಪಕರೊಬ್ಬರು ನಕ್ಕಿದ್ದರಂತೆ. ಈ ವಿಚಾರವನ್ನು ನಾಗೇಶ್ ಅವರೇ ಹಂಚಿಕೊಂಡರು. ‘ನಂತರದ ದಿನಗಳಲ್ಲಿ ಈ ಸಿನಿಮಾ ಮಾಡಲು ಹತ್ತು ಜನ ನಿರ್ಮಾಪಕರು ಸಿಕ್ಕರು. ಇದರಲ್ಲಿ ನಾನು ಒಬ್ಬ ನಿರ್ಮಾಪಕನೂ ಹೌದು. ಸಿನಿಮಾ ಮಾಡುವಾಗ ನಿರ್ಮಾಪಕರು ಗುರ್ ಅನ್ನುತ್ತಿದ್ದರೂ, ಸಿನಿಮಾಕ್ಕಾಗಿ ಖರ್ಚು ಮಾಡಲು ಇಲ್ಲ ಅನ್ನುತ್ತಿರಲಿಲ್ಲ. ಸಿನಿಮಾ ಮೂಡಿಬಂದಿರುವ ರೀತಿಯನ್ನು ಕಂಡು ಅವರು ಈಗ ಖುಷಿಯಾಗಿದ್ದಾರೆ’ ಎಂದರು ನಾಗೇಶ್.

ಸಿನಿಮಾವನ್ನು ಮಾರ್ಚ್‌ನಲ್ಲಿ ತೆರೆಗೆ ತರುವ ಆಲೋಚನೆ ನಾಗೇಶ್ ಅವರದ್ದು. ಇದರಲ್ಲಿ ನಾಲ್ಕು ಹಾಡುಗಳು ಇವೆ. ‘ಕಮರ್ಷಿಯಲ್ ಸಿನಿಮಾಗಳು ಬರುತ್ತಲೇ ಇರುತ್ತವೆ. ಆದರೆ ಇಂತಹ ಸಿನಿಮಾಗಳು ಗೆಲ್ಲಬೇಕು’ ಎಂದರು ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್. ಇವರು ಈ ಸಿನಿಮಾಕ್ಕೆ ಒಂದು ಹಾಡು ಬರೆದಿದ್ದಾರೆ.

‘ಇಂಥದ್ದೊಂದು ಪಾತ್ರ ಸಿಕ್ಕಿದ್ದು ಯಾವುದೋ ಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಮೂರು ಶೇಡ್‌ಗಳನ್ನು ನಾನು ನಿಭಾಯಿಸಿದ್ದೇನೆ. ಇಂಥದ್ದೊಂದು ಸಿನಿಮಾ ಮಾಡಲು ಧೈರ್ಯ ಬೇಕು. ಇದು ಓಹೋ ಅನ್ನುವಷ್ಟು ಹಿಟ್ ಆಗುತ್ತದೆಯೋ ಎಂಬುದು ಗೊತ್ತಿಲ್ಲ. ಆದರೆ, ನನಗೆ ಇಂಥದ್ದೊಂದು ಪಾತ್ರ ಸಿಕ್ಕಿದ್ದೇ ಕೋಟಿ ಸಿಕ್ಕಂತೆ’ ಎಂದು ಖುಷಿಪಟ್ಟರು ಯಶಸ್ ಸೂರ್ಯ. ದೇಸಿ ಮೋಹನ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.