ADVERTISEMENT

‘ರಿವೀಲ್‌’ ಹುಡುಗಿ ಆದ್ಯಾಳ ರಿಯಲ್‌ ‘ಸ್ಟೋರಿ’

ರಮೇಶ ಕೆ
Published 4 ಫೆಬ್ರುವರಿ 2020, 5:26 IST
Last Updated 4 ಫೆಬ್ರುವರಿ 2020, 5:26 IST
ಆದ್ಯಾ ಆರಾಧನ್
ಆದ್ಯಾ ಆರಾಧನ್   
""

ಇತ್ತೀಚೆಗೆ ತೆರೆಕಂಡ ‘ರಿವೀಲ್‌’ ಸಿನಿಮಾದಲ್ಲಿ ಸಂಶೋಧಕಿ ಪಾತ್ರ ನಿಭಾಯಿಸಿ ಮೆಚ್ಚುಗೆ ಪಡೆದ ಚೆಲುವೆ ಆದ್ಯಾ ಆರಾಧನ್‌.

ಇವರು, ಮೂಲತಃ ಮೈಸೂರಿನ ಸಿದ್ಧಾರ್ಥನಗರದವರು. ತಂದೆ ದಿವಾಕರ್‌ ಎಎಸ್‌ಐ, ತಾಯಿ ದಿವ್ಯಾ ಗೃಹಿಣಿ. ಟಿವಿ ಜಾಹೀರಾತು, ಡಿಸೈನರ್‌ ದಿರಿಸುಗಳನ್ನು ಹಾಕಿಕೊಂಡು ಆತ್ಮವಿಶ್ವಾಸದಿಂದ ರ‍್ಯಾಂಪ್‌ ಮೇಲೆ ನಡೆದ ಆದ್ಯಾ, ಸಿನಿಮಾ ಜಗತ್ತಿನಲ್ಲೂ ಹೆಸರು ಮಾಡುವ ತವಕದಲ್ಲಿದ್ದಾರೆ.

‘ಜೀವನ ಯಜ್ಞ’ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಆದ್ಯಾ ಆರಾಧನ್‌, ‘ಒನ್ ಲವ್‌ 2 ಸ್ಟೋರಿ’ ಮತ್ತು ‘ರಿವೀಲ್‌’ ಸಿನಿಮಾಗಳಿಗೆ ಬಣ್ಣ ಹಚ್ಚಿ ತಮ್ಮ ಸಿನಿಮಾ ಯಾನ ಮುಂದುವರೆಸಿದ್ದಾರೆ. ಇದೀಗ ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಅವಕಾಶ ಬಂದಿದ್ದು, ಮಾತುಕತೆ ಹಂತದಲ್ಲಿದೆ ಎಂಬುದಾಗಿ ಅವರು ಹೇಳುತ್ತಾರೆ.

ADVERTISEMENT
ಆದ್ಯಾ

‘10ನೇ ತರಗತಿಯಲ್ಲಿ ಇರುವಾಗಲೇ ಧಾರಾವಾಹಿ ಒಂದಕ್ಕೆ ಅವಕಾಶ ಬಂದಿತ್ತು. ಆಗ ಆತ್ಮವಿಶ್ವಾಸ ಇರಲಿಲ್ಲ. ಮಹಾಜನ ಕಾಲೇಜಿನಲ್ಲಿ ಬಿ.ಕಾಂ ಮಾಡುವಾಗ ಜಾಹೀರಾತುಗಳಿಗೆ ರೂಪದರ್ಶಿಯಾಗಲು ಅವಕಾಶ ಸಿಕ್ಕಿತು. ನಂತರ ಫ್ಯಾಷನ್‌ ಷೋಗಳಲ್ಲಿ ಮಿಂಚಿದೆ. ಆಭರಣ ಹಾಗೂ ಉಡುಪು ಕಂಪನಿಗಳಿಗೆ ರೂಪದರ್ಶಿಯಾದೆ. ಮೈಸೂರಿನಲ್ಲಿ 2016ರಲ್ಲಿ ನಡೆದ ಫ್ಯಾಷನ್ ಷೋನಲ್ಲಿ ಭಾಗವಹಿಸಿ ‘ಮಿಸ್‌ ಮೈಸೂರು’ ಕಿರೀಟ ಮುಡಿಗೇರಿಸಿಕೊಂಡೆ. ರ‍್ಯಾಂಪ್‌ ವಾಕ್‌ ಮಾಡಿದ ಮೇಲೆ ಆತ್ಮವಿಶ್ವಾಸ ಹೆಚ್ಚಾಯಿತು’ ಎಂದರು ಆದ್ಯಾ.

‘ಜಾಹೀರಾತು ಹಾಗೂ ಫ್ಯಾಷನ್‌ ಷೋಗಳಲ್ಲಿ ನನ್ನನ್ನು ನೋಡಿದ ನಿರ್ದೇಶಕ ವಸಿಷ್ಠ ಬಂಟನೂರು ಅವರು ಕರೆ ಮಾಡಿ ಸಿನಿಮಾದಲ್ಲಿ ಪಾತ್ರ ಮಾಡಲು ಅವಕಾಶ ಕೊಟ್ಟರು. ನನ್ನ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿತು. ‘ಒನ್ ಲವ್‌ ಟೂ ಸ್ಟೋರಿ’ ಚಿತ್ರದಲ್ಲಿ ಪಾಶ್ಚಾತ್ಯ ಶೈಲಿಯ, ಡೇರಿಂಗ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ‘ರಿವೀಲ್‌’ನಲ್ಲಿ ಗಂಭೀರ ಪಾತ್ರ. ಮಡಿಕೇರಿಯ ಗುಡ್ಡೆಮನೆಗೆ ಹೋಗಿ, ಅಲ್ಲಿನ ನಿಧಿ ಹಾಗೂ ನಿಧಿ ಹುಡುಕಲು ಹೋದವರ ಸಾವಿನ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚುವ ಪಾತ್ರ. ನಾಯಕರಾಗಿ ಆದ್ವೈತ್‌ ಉತ್ತಮವಾಗಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎಂಬ ಬಯಕೆಯಿದೆ’ ಎಂದು ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡುತ್ತಾರೆ ಆದ್ಯಾ.

ನಟನೆಗಾಗಿ ಯಾವುದೇ ತರಬೇತಿ ಪಡೆಯದ ಆದ್ಯಾ, ಮಾಡೆಲಿಂಗ್‌ ಅನ್ನೇ ಚಿಮ್ಮುಹಲಗೆಯನ್ನಾಗಿ ಮಾಡಿಕೊಂಡು ಬೆಳ್ಳಿತೆರೆಗೆ ಜಿಗಿದವರು. ಮಾಡೆಲಿಂಗ್‌ ಮಾಡುತ್ತಲೇ ಸಿನಿಮಾದಲ್ಲಿ ಹೆಸರು ಮಾಡುವ ಕನಸು ಹೊಂದಿದ್ದಾರೆ.

‘ಕನ್ನಡದಲ್ಲಿ ಕೆಜಿಎಸ್‌ನ ಪ್ರಶಾಂತ್‌ ನೀಲ್‌, ಪವನ್‌ ಒಡೆಯರ್‌ ಸೇರಿದಂತೆ ಹೆಸರಾಂತ ನಿರ್ದೇಶಕರ ಸಿನಿಮಾಗಳಲ್ಲಿ ಅವಕಾಶ ಸಿಗಲಿ ಎಂದು ಕಾಯುತ್ತಿದ್ದೇನೆ. ನಟರಲ್ಲಿ ಪುನೀತ್‌ ರಾಜಕುಮಾರ್‌, ಯಶ್‌ ಹಾಗೂ ವಿಜಯ ರಾಘವೇಂದ್ರ ಅವರೊಂದಿಗೆ ತೆರೆ ಮೇಲೆ ಮಿಂಚಬೇಕು’ ಎಂಬ ಆಸೆಯನ್ನು ಹೇಳಿಕೊಳ್ಳುತ್ತಾರೆ ಆದ್ಯಾ.

‘ನನ್ನ ಸಿನಿಮಾ ತೆರೆ ಕಂಡ ಮೇಲೆ ಅಭಿನಯದಲ್ಲಿ ಏನೆಲ್ಲಾ ತಪ್ಪುಗಳಾಗಿವೆ ಎಂಬುದನ್ನು ಗಮನಿಸುತ್ತೇನೆ. ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನಿಸಿದ್ದೂ ಇದೆ. ಕಲಿಯುವುದು ಬಹಳ ಇದೆ. ಪಾತ್ರಗಳಿಗೆ ನ್ಯಾಯ ಒದಗಿಸಲು ಇನ್ನಷ್ಟು ಶ್ರಮ ಹಾಕುತ್ತೇನೆ’ ಎಂದರು ಆದ್ಯಾ.

ಅಮ್ಮನ ಅಡುಗೆ ಇಷ್ಟ: ಸಿನಿಮಾ ಕ್ಷೇತ್ರದಲ್ಲಿರುವವರು ಡಯೆಟ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ನಟಿ ಆದ್ಯಾ ಮಾತ್ರ ಕಟ್ಟುನಿಟ್ಟಿನ ಡಯೆಟ್‌ ಪಾಲಿಸುವುದಿಲ್ಲವಂತೆ. ಹೋಟೆಲ್‌‌‌ಗಳಿಗಿಂತ ಮನೆಯಲ್ಲಿ ಅಮ್ಮ ಮಾಡುವ ಊಟವನ್ನು ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಇಡ್ಲಿ, ಸಂಬಾರ್‌ಅನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಸಮಯ ಸಿಕ್ಕಾಗ ವರ್ಕೌಟ್‌: ದೇಹದ ಫಿಟ್‌ನೆಸ್‌ಗಾಗಿ ಆದ್ಯಾ ಅವರು, ಪ್ರತಿದಿನ ಜಿಮ್‌ನಲ್ಲಿ ಮಾರ್ಗದರ್ಶಕರ ನೆರವಿನಿಂದ ಒಂದು ಗಂಟೆ ವರ್ಕೌಟ್‌ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.