ADVERTISEMENT

ಅಂಬರೀಷ್‌ ಯಾವ ಪ್ರಶಸ್ತಿಯನ್ನೂ ಬಯಸಿದವರಲ್ಲ: ಸುಮಲತಾ ಅಂಬರೀಷ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 12:14 IST
Last Updated 23 ನವೆಂಬರ್ 2021, 12:14 IST
ಅಂಬರೀಷ್‌
ಅಂಬರೀಷ್‌   

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರಿಗೆ ರಾಜ್ಯ ಸರ್ಕಾರವು ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿದ ಬೆನ್ನಲ್ಲೇ, ನಟ ದಿವಂಗತ ಅಂಬರೀಷ್‌ ಅವರಿಗೂ ಈ ರೀತಿ ಗೌರವ ಸಿಗಬೇಕು ಎನ್ನುವ ಅಭಿಮಾನಿಗಳ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಈ ಕುರಿತು ನಟಿ, ಸಂಸದೆ ಸುಮಲತಾ ಅಂಬರೀಷ್‌ ಪ್ರತಿಕ್ರಿಯೆ ನೀಡಿದ್ದು, ‘ಅಂಬರೀಷ್‌ ಯಾವ ಪ್ರಶಸ್ತಿಯನ್ನೂ ಬಯಸಿದವರಲ್ಲ’ ಎಂದಿದ್ದಾರೆ.

ಅಂಬರೀಷ್‌ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಸಮಯದಲ್ಲೇ ಅಭಿಮಾನಿಗಳು ಇಟ್ಟಿರುವ ಈ ಬೇಡಿಕೆ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘವಾದ ಪತ್ರ ಬರೆದಿರುವ ಸುಮಲತಾ ಅಂಬರೀಷ್‌, ‘ನಮ್ಮ ಪ್ರೀತಿಯ ಡಾ. ಅಂಬರೀಷ್‌ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಷ್‌ ಅವರ ಸ್ಮಾರಕ ಅಭಿವೃದ್ಧಿಗೊಳಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ.’

‘ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇದರೊಂದಿಗೆ ಚಿತ್ರರಂಗ, ಅಭಿಮಾನಿಗಳು ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ’ ಎಂದಿದ್ದಾರೆ.

ADVERTISEMENT

‘ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು. ಎಲ್ಲಾ ಪ್ರಶಸ್ತಿಗಳನ್ನು ಮೀರಿದಂತ ಪ್ರೀತಿ ಮತ್ತು ಅಭಿಮಾನವನ್ನು ನೀವು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನು ಬಯಸಿದವರಲ್ಲ. ಹೀಗಾಗಿ ಅಂಬರೀಷ್ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದ್ದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ’ ಎಂದು ಸುಮಲತಾ ಹೇಳಿದ್ದಾರೆ.

‘ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ ವಾತ್ಸಲ್ಯಗಳನ್ನು ಗೌರವಿಸುತ್ತ ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನ.24ರಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ’ ಎಂದು ಸುಮಲತಾ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.