ADVERTISEMENT

ಮನಸೇ ಮಾಯ ಎಂದ ಅನನ್ಯಾ ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 14 ಮೇ 2020, 19:45 IST
Last Updated 14 ಮೇ 2020, 19:45 IST
ಅನನ್ಯಾ ಕಶ್ಯಪ್‌
ಅನನ್ಯಾ ಕಶ್ಯಪ್‌   

‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ‘ಮನಸೇ ಮಾಯ’ ಹಾಡನ್ನು ನೋಡಿದವರು ಅನನ್ಯಾ ಕಶ್ಯಪ್ ಅವರ ನೃತ್ಯವನ್ನೂ, ಅಭಿನಯವನ್ನೂ ಮರೆಯುವುದು ಕಷ್ಟ. ‘ಅದು ಸಹಜ ಅಭಿನಯವಾಗಿತ್ತು’ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಿದೆ.

ಈ ಚಿತ್ರದ ನಂತರ ಅನನ್ಯಾ ಅವರಿಗೆ ಎರಡು ವೆಬ್ ಸರಣಿಗಳಲ್ಲಿ ನಟಿಸುವ ಅವಕಾಶ ಬಂದಿದೆ. ಹಾಗೆಯೇ, ತಮಿಳಿನ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದೆ.

‘ಮುಂದಿನ ನಿಲ್ದಾಣ ಆದ ನಂತರ ನಾನು ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಆದರೆ, ಕನ್ನಡದ ಒಂದು ಹಾಗೂ ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ಬಂದಿದೆ. ಒಂದು ಮ್ಯೂಸಿಕ್ ವಿಡಿಯೊದಲ್ಲಿ ಅಭಿನಯಿಸಿದ್ದೇನೆ. ಅದು ಬಿಡುಗಡೆಯ ಹಂತದಲ್ಲಿದೆ’ ಎಂದು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದ ಅನನ್ಯಾ ಹೇಳಿದರು. ಈ ವೆಬ್ ಸರಣಿಗಳ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.

ADVERTISEMENT

‘ಮುಂದಿನನಿಲ್ದಾಣ ಸಿನಿಮಾದಲ್ಲಿನ ನನ್ನ ಅಭಿನಯಕ್ಕೆ ವೀಕ್ಷಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂತು. ನಟನೆ ಬಹಳ ಸಹಜವಾಗಿತ್ತು ಎಂದು ಹಲವರು ಹೇಳಿದರು. ಮನಸೇ ಮಾಯ ಹಾಡಿನ ನೃತ್ಯ ಮಾಡಿದ್ದು ಹಲವರಿಗೆ ಇಷ್ಟವಾಯಿತು. ಆ ಹಾಡು ವೈರಲ್ ಆಗಿತ್ತು ಕೂಡ. ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ಯಾವಾಗ ಬಿಡುಗಡೆ ಆಗುತ್ತದೆ ಎಂದು ಹಲವರು ವಿಚಾರಿಸುತ್ತಿದ್ದಾರೆ’ ಎಂದು ಅನನ್ಯಾ ಹೇಳಿದರು.

‘ನನ್ನ ಅಭಿನಯ ನನಗೆ ತೃಪ್ತಿ ನೀಡಿತು. ಆದರೆ, ನನ್ನ ಅಭಿನಯದ ಬಗ್ಗೆ ಜಡ್ಜ್‌ ಮಾಡಲು ನನ್ನಿಂದ ಆಗುತ್ತಿಲ್ಲ’ ಎನ್ನುವ ಅನನ್ಯಾ, ‘ಅದರಲ್ಲಿ ನಾನು ಪಕ್ಕಾ ಮಿಲೆನಿಯಲ್ ಪಾತ್ರ ನಿಭಾಯಿಸಿದ್ದೆ. ಆ ಪಾತ್ರವನ್ನು ನಿಭಾಯಿಸಲು ನನಗೆ ಏನೂ ಕಷ್ಟ ಆಗಿರಲಿಲ್ಲ. ಆ ಪಾತ್ರ ನನ್ನ ನಿಜ ಜೀವನಕ್ಕೆ ಹತ್ತಿರವಿದೆ ಎನ್ನುವ ಮಾತನ್ನು ನಾನು ನಿರ್ದೇಶಕ ವಿನಯ್ ಭಾರದ್ವಾಜ್ ಬಳಿ ಹೇಳಿದ್ದೆ ಕೂಡ. ಹಾಗಾಗಿ, ಕಷ್ಟಪಡುವಂಥದ್ದು ಏನೂ ಇರಲಿಲ್ಲ. ಪರಕಾಯ ಪ್ರವೇಶದ ಅಗತ್ಯವೂ ಇರಲಿಲ್ಲ’ ಎಂದು ನೆನಪಿಸಿಕೊಂಡರು.

‘ನನಗೆ ನಿರ್ದಿಷ್ಟವಾಗಿ ಇಂಥದ್ದೇ ಪಾತ್ರ ಮಾಡಬೇಕು ಎಂದು ಅನಿಸಿದ್ದಿಲ್ಲ. ಆದರೆ, ನನಗೆ ಸಿಗುವ ಪಾತ್ರವನ್ನು ಎಷ್ಟು ಚೆನ್ನಾಗಿ ಮಾಡಬಲ್ಲೆ ಎಂಬ ಬಗ್ಗೆ ನಾನು ಆಲೋಚನೆ ಮಾಡುತ್ತೇನೆ. ಇದೇ ರೀತಿ ಪಾತ್ರ ಬೇಕು, ಅದು ಹೀಗೇ ಇರಬೇಕು ಎಂಬ ಹಟ ನನ್ನಲ್ಲಿ ಇಲ್ಲ’ ಎಂದು ಪಾತ್ರಗಳ ಬಯಕೆ ಕುರಿತು ತಮ್ಮ ನಿಲುವು ತಿಳಿಸಿದರು.

ಆದರೆ, ಅನನ್ಯಾ ಅವರಿಗೆ ತಾವೊಂದು ನೆಗೆಟಿವ್ ಪಾತ್ರ ನಿಭಾಯಿಸಬೇಕು ಎಂದು ಅನಿಸುತ್ತ ಇದೆಯಂತೆ! ‘ಹೆಣ್ಣುಮಕ್ಕಳಿಗೆ ಸಿನಿಮಾ ಉದ್ಯಮ ಈಗ ಭಿನ್ನ ಪಾತ್ರಗಳನ್ನು ನೀಡುತ್ತಿದೆ ಎಂದು ಅನಿಸುತ್ತಿದೆ. ಹೆಣ್ಣನ್ನು ಕೇಂದ್ರವಾಗಿಸಿಕೊಂಡ ಸಿನಿಮಾಗಳು ಕೂಡ ಬರುತ್ತಿವೆ. ಅವು ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ ಕೂಡ. ಹೊಸಬರಿಗೆ ಈಗ ಇಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಕೆಜಿಎಫ್‌ ಬಿಡುಗಡೆ ಆದ ನಂತರ ಕನ್ನಡ ಸಿನಿಮಾ ಉದ್ಯಮಕ್ಕೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಇವುಗಳನ್ನು ಉಳಿಸಿಕೊಳ್ಳಲು ನಿರ್ದೇಶಕರು, ನಿರ್ಮಾಪಕರು ಶ್ರಮ ಹಾಕುತ್ತಿದ್ದಾರೆ’ ಎಂದರು.

ಹೆಣ್ಣುಮಕ್ಕಳಿಗೆ ಅವಕಾಶ ಸಿಗುವ ವಿಚಾರದಲ್ಲಿ ಒಂದು ಸೂಕ್ಷ್ಮವನ್ನು ಅನನ್ಯಾ ಗುರುತಿಸಿದ್ದಾರೆ. ‘ಭಿನ್ನ ಬಗೆಯ ಪಾತ್ರಗಳು ಹೆಣ್ಣುಮಕ್ಕಳಿಗೆ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡಲ್ಲಿ ಅಷ್ಟೊಂದು ಇಲ್ಲ. ಆದರೆ ಒಂದಿಷ್ಟು ಅಂತಹ ಪಾತ್ರಗಳು ಸಿಗುವುದು ಶುರುವಾಗಿರುವುದಂತೂ ನಿಜ’ ಎನ್ನುತ್ತಾರೆ ಅನನ್ಯಾ.

ಹೊರಜಗತ್ತಿಗೆ ಬೋಲ್ಡ್‌ ಆಗಿ ಕಾಣಿಸಿಕೊಂಡು, ವೈಯಕ್ತಿಕ ಬದುಕಿನಲ್ಲಿ ಹತ್ತೆಂಟು ಮಿತಿಗಳನ್ನು ಹೊಂದಿರುವ ಹೆಣ್ಣಿನ ‍ಪಾತ್ರವನ್ನು ನಿಭಾಯಿಸಬೇಕು ಎಂಬ ಆಸೆ ಇವರಲ್ಲಿ ಇದೆ. ಒಂದೇ ಶೇಡ್‌ನ ಪಾತ್ರ ನಿಭಾಯಿಸುವುದಕ್ಕಿಂತ, ಭಿನ್ನ ಶೇಡ್‌ಗಳನ್ನು ಹೊಂದಿರುವ ಪಾತ್ರಗಳನ್ನು ನಿಭಾಯಿಸಬೇಕು ಎಂಬ ಬಯಕೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.