ದೀಕ್ಷಿತ್ ಶೆಟ್ಟಿ
ದೀಕ್ಷಿತ್ ಶೆಟ್ಟಿ ಅಭಿನಯದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರ ತೆರೆಗೆ ಬರಲು ಸಿದ್ಧವಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳ ಭಾಷೆಗಳಲ್ಲಿಯೂ ಸಕ್ರಿಯರಾಗಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾಹಿತಿ ಹಂಚಿಕೊಂಡರು...
‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
‘ಟೈಗರ್’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈತ ಒಂದು ಬಗೆಯ ವಿಲಕ್ಷಣ ವ್ಯಕ್ತಿ. ಇದೊಂದು ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದ ಕಥೆ. ಕುತೂಹಲದ ಜತೆಗೆ ಹಾಸ್ಯಮಯ ನಿರೂಪಣೆ ಇದೆ. ಇಲ್ಲಿ ಕಳ್ಳನಾಗಿರುತ್ತೇನೆ. ಕಥೆಯಲ್ಲಿ ಸಾಕಷ್ಟು ತೊಳಲಾಟಗಳಿವೆ. ಏಕೆ ಕಳ್ಳನಾಗುತ್ತೇನೆ ಎಂಬ ಸಣ್ಣ ಹಿನ್ನೆಲೆಯ ಕಥೆಯೂ ಬರುತ್ತದೆ. ಒಟ್ಟಾರೆಯಾಗಿ ಪ್ರೇಕ್ಷಕರನ್ನು ಹಿಡಿದು ಕೂರಿಸಬಲ್ಲ ಮನರಂಜನಾತ್ಮಕ ಚಿತ್ರವಿದು.
‘ಬ್ಲಿಂಕ್’ ನಿರ್ದೇಶಕರ ಜತೆ ಇನ್ನೊಂದು ಸಿನಿಮಾ ಮಾಡುತ್ತಿರುವಿರಾ?
ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಈ ಸಿನಿಮಾದಲ್ಲಿ ನಾಯಕನಲ್ಲದೇ ಬೇರೆ ಜವಾಬ್ದಾರಿಗಳನ್ನು ತೆಗೆದುಕೊಂಡಿರುವೆ. ಹೀಗಾಗಿ ಈ ಬಗ್ಗೆ ಸದ್ಯದಲ್ಲಿಯೇ ಅಧಿಕೃತವಾಗಿ ಮಾಹಿತಿ ಕೊಡುವೆ. ಅಲ್ಲಿತನಕ ಹೆಚ್ಚು ಹೇಳಲಾರೆ.
ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ.
‘ದಿಯಾ’ ನಿರ್ದೇಶಕರ ಜತೆ ಇನ್ನೊಂದು ಸಿನಿಮಾ ಮಾಡುತ್ತಿರುವೆ. ಚಿತ್ರೀಕರಣ ಪ್ರಗತಿಯಲ್ಲಿದೆ. ತೆಲುಗಿನಲ್ಲಿ ‘ಕೆಜೆಕ್ಯೂ’ ಚಿತ್ರ ನಡೆಯುತ್ತಿದೆ. ‘ದಿ ಗರ್ಲ್ ಫ್ರೆಂಡ್’ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಿದೆ. ಮಲಯಾಳದಲ್ಲಿ ‘ಏಜಲ್ ನಂ.16’ ಚಿತ್ರದಲ್ಲಿ ನಟಿಸುತ್ತಿರುವೆ. ತೆಲುಗಿನಲ್ಲಿ ‘ಶವರಾ’ ಎಂಬ ಚಿತ್ರ ಸೆಟ್ಟೇರಿದೆ. ತಮಿಳಿನಲ್ಲಿ ‘ಪ್ರೊಡಕ್ಷನ್ ನಂ.7’ ಚಿತ್ರ ಚಿತ್ರೀಕರಣ ಹಂತದಲ್ಲಿದೆ.
ಬೇರೆ, ಬೇರೆ ಭಾಷೆಗಳಲ್ಲಿ ಒಟ್ಟಿಗೆ ನಟಿಸುತ್ತಿರುವಿರಿ. ಇಲ್ಲಿ ನಿಮಗೆ ಸವಾಲು ಎನ್ನಿಸಿದ್ದೇನು?
ಕಥೆ ಮತ್ತು ಪಾತ್ರಗಳ ಆಯ್ಕೆಯೇ ದೊಡ್ಡ ಸವಾಲು. ಇಲ್ಲಿ ನಟಿಸುತ್ತಿರುವ ಎಲ್ಲ ಚಿತ್ರಗಳು ಬೇರೆ ಬೇರೆ ಜಾನರ್‌ನವು. ಜೊತೆಗೆ ವಿಭಿನ್ನ ಪಾತ್ರಗಳು. ಹೀಗಾಗಿ ನಟನೆ ಸುಲಭವಲ್ಲ. ಒಂದು ಪಾತ್ರದಿಂದ ಇನ್ನೊಂದಕ್ಕೆ ಬದಲಾಗುವುದು ಕಷ್ಟದ ಕೆಲಸ. ಪ್ರತಿ ಪಾತ್ರಕ್ಕೂ ಆ ಭಾಷೆ ಕಲಿಯಬೇಕು. ಪಾತ್ರಕ್ಕೆ ಹೊಂದಿಕೊಳ್ಳಬೇಕು. ಕೆಲವೊಮ್ಮೆ ಆರೋಗ್ಯದ ಸಮಸ್ಯೆಯ ನಡುವೆಯೂ ಚಿತ್ರೀಕರಣ ಮಾಡಬೇಕಾಗುತ್ತದೆ. ಆಗ ತ್ರಾಸದಾಯಕ ಎನಿಸುತ್ತದೆ.
ಈತನಕ ಸಿನಿಪಯಣ ಖುಷಿ ನೀಡಿದೆಯಾ?
ಖಂಡಿತ ಖುಷಿಯಿದೆ. ಕಿರುತೆರೆಯಿಂದ ಬಂದು ಹಿರಿತೆರೆಯಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಹಾಗಂತ ಪೂರ್ಣ ತೃಪ್ತಿಯಿಲ್ಲ. ಕೆಲವು ಕಡೆ ಸಿಗಬೇಕಾಗಿದ್ದು ಸಿಕ್ಕಿಲ್ಲ ಎನ್ನಿಸುತ್ತದೆ. ಒಳ್ಳೆ ಸಿನಿಮಾಗಳನ್ನು ಮಾಡಿಯೂ ನಿರೀಕ್ಷಿತ ಯಶಸ್ಸು ಸಿಗದಿದ್ದಾಗ ಸ್ವಲ್ಪ ಬೇಸರವಾಗುತ್ತದೆ.
‘ಬ್ಲಿಂಕ್’ ಚಿತ್ರ ಬಿಡುಗಡೆ ವೇಳೆ ಚಿತ್ರಕ್ಕೆ ಜನ ಬಾರದಿರುವುದಕ್ಕೆ ಬೇಸರ ಹೊರಹಾಕಿದ್ರಿ. ಒಟ್ಟಾರೆಯಾಗಿ ಕೆಲ ಉತ್ತಮ ಕನ್ನಡ ಸಿನಿಮಾಗಳಿಗೂ ಜನ ಬಾರದಿರಲು ಕಾರಣವೇನಿರಬಹುದು?
ಜನ ನಂಬಿಕೆ ಕಳೆದುಕೊಂಡಿದ್ದಾರೆ. ಒಂದು ಭಾಷೆಯಲ್ಲಿ ವರ್ಷಕ್ಕೆ ಎರಡು ಉತ್ತಮ ಸಿನಿಮಾಗಳು ಬಂದರೆ ಸಾಲದು. ಸಾಕಷ್ಟು ಉತ್ತಮ ಸಿನಿಮಾಗಳು ಬರಬೇಕು. ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡುವಾಗ ನನಗೆ ಅನ್ನಿಸಿದ್ದು ಬೇರೆ ಭಾಷೆಗಳಲ್ಲಿ ಆ ಭಾಷೆಯ ಸಿನಿಮಾಗಳ ಮೇಲಿನ ನಂಬಿಕೆಯಿಂದಲೇ ಉತ್ತಮ ಸಿನಿಮಾಗಳು ಗೆಲ್ಲುತ್ತವೆ. ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ವಾರಕ್ಕೆ ಬಿಡುಗಡೆಯಾಗುವ 10–11 ಸಿನಿಮಾಗಳಲ್ಲಿ ಒಂದು ಚೆನ್ನಾಗಿರುತ್ತದೆ. ಅದು ಕೂಡ ಕಳೆದುಹೋಗುತ್ತದೆ. ನಿರಂತರವಾಗಿ ಉತ್ತಮ ಸಿನಿಮಾಗಳು ಬಂದಾಗ ಮಾತ್ರ ಜನ ಚಿತ್ರಮಂದಿರಗಳತ್ತ ಬರುತ್ತಾರೆ. ಜತೆಗೆ ಉತ್ತಮ ಚಿತ್ರಗಳು ಬಂದಾಗ ಚಿತ್ರರಂಗ ಒಟ್ಟಾಗಿ ನಿಲ್ಲಬೇಕು. ಒಂದು ಸಿನಿಮಾ ಗೆದ್ದರೆ ಅದರ ಹಿಂದೆ ಬರುವ ಮತ್ತೊಂದು ಒಳ್ಳೆಯ ಸಿನಿಮಾಕ್ಕೂ ಜನ ಬರುತ್ತಾರೆ. ಹೀಗೆ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚುತ್ತದೆ. ‘ಬ್ಲಿಂಕ್’ ಸಿನಿಮಾ ಮಲಯಾಳದಲ್ಲಿ ಬಂದಿದ್ದರೆ ಬೆಂಗಳೂರಿನಲ್ಲಿಯೇ ಕನ್ನಡದಲ್ಲಿ ಒಟ್ಟಾರೆ ರಾಜ್ಯದಲ್ಲಿ ನೋಡಿದ್ದಕ್ಕಿಂತ ಹೆಚ್ಚು ಜನ ನೋಡಿರುತ್ತಿದ್ದರೇನೋ ಅನ್ನಿಸುತ್ತದೆ. ಯಾಕೆಂದರೆ ಜನರಿಗೆ ಆ ಭಾಷೆಯ ಚಿತ್ರಗಳ ಮೇಲೆ ನಂಬಿಕೆ ಹೆಚ್ಚಿದೆ. ಆ ನಂಬಿಕೆಯನ್ನು ನಾವೂ ಗಳಿಸಿಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.