ADVERTISEMENT

ಯುಗಾದಿ ವೇಳೆಗೆ ತೆರೆಗಳಲ್ಲಿ ‘ಕೆಡಿ’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 23:55 IST
Last Updated 26 ಡಿಸೆಂಬರ್ 2024, 23:55 IST
ಧ್ರುವ ಸರ್ಜಾ, ರೀಷ್ಮಾ ನಾಣಯ್ಯ 
ಧ್ರುವ ಸರ್ಜಾ, ರೀಷ್ಮಾ ನಾಣಯ್ಯ    

2025ರ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಯುಗಾದಿ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದ ಮೊದಲ ಲಿರಿಕಲ್‌ ಹಾಡು ಜನಪದ ಶೈಲಿಯ ‘ಶಿವ ಶಿವ’ ಬಿಡುಗಡೆಯಾಗಿದ್ದು, ಕೈಲಾಶ್‌ ಖೇರ್‌ ಹಾಗೂ ಪ್ರೇಮ್‌ ಧ್ವನಿಯಾಗಿದ್ದಾರೆ. 

ಇತ್ತೀಚೆಗೆ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಪ್ರೇಮ್‌, ‘ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಪ್ರತಿ ಹಾಡನ್ನು ಅಳೆದು ತೂಗಿ ಹಾಕಿದ್ದೇವೆ. ಈ ಸಿನಿಮಾ ಆಲ್ಬಂಗೇ ಒಂದು ಸಿನಿಮಾ ಮಾಡುವಷ್ಟು ದುಡ್ಡು ಹಾಕಿದ್ದೇವೆ. ‘ಕೆಡಿ’ ಎಂದರೆ ಕಾಳಿದಾಸ. ‘ಶಿವ ಶಿವ’ ಹಾಡನ್ನು 5 ಭಾಷೆಯಲ್ಲಿ ಬಿಡುಗಡೆ ಮಾಡಿದ್ದೇವೆ. ಪೂರ್ತಿ ಹಾಡು ಮುಂದೆ ಬಿಡುಗಡೆಯಾಗಲಿದೆ. 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಆಗಿನ ಬೆಂಗಳೂರಿನ ವಾತಾವರಣವನ್ನು ಮೋಹನ್ ಬಿ.ಕೆರೆ ಅದ್ಭುತ ಸೆಟ್ ಹಾಕುವ ಮೂಲಕ ಸೃಷ್ಟಿಸಿದ್ದಾರೆ. ಕಾಳಿದಾಸ ಎಷ್ಟು ಮುಗ್ಧನೋ ಅಷ್ಟೇ ರಾ ಆಗಿರುತ್ತಾನೆ. ಆ ಪಾತ್ರವನ್ನು ಧ್ರುವ ಅದ್ಭುತವಾಗಿ ನಿಭಾಯಿಸಿದ್ದಾರೆ. ಇವರನ್ನು ಶಿವಣ್ಣ, ಅಪ್ಪು ಅವರಿಗೆ ಹೋಲಿಸುತ್ತೇನೆ. ಏಕೆಂದರೆ ಅಷ್ಟು ಎನರ್ಜಿ ಈತನಲ್ಲಿದೆ. ಚಲಿಸುವ ಕಾರ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾರೆ. ಮುಂಬೈನಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು. 

ಇದೇ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿದ ಪ್ರೇಮ್‌, ‘ದರ್ಶನ್‌ ನನ್ನ ಕುಟುಂಬದ ಸದಸ್ಯ. ನಾವಿಬ್ಬರೂ ಅಣ್ಣತಮ್ಮಂದಿರು. ಅವರ ಜೊತೆ ಈಗಾಗಲೇ ಘೋಷಿಸಿದ ಸಿನಿಮಾವನ್ನು ಖಂಡಿತವಾಗಿಯೂ ಮಾಡುತ್ತೇನೆ. ಸದ್ಯಕ್ಕೆ ‘ಕೆಡಿ’ ಚಿತ್ರೀಕರಣ ನಡೆಯುತ್ತಿದೆ. ಅದಾದ ಬಳಿಕ ಆ ಸಿನಿಮಾ ಕೈಗೆತ್ತಿಕೊಳ್ಳುತ್ತೇನೆ. ದರ್ಶನ್‌ ಅವರು ಆರೋಗ್ಯವಾಗಿದ್ದರೆ ಈ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಕರೆಯುತ್ತಿದ್ದೆ’ ಎಂದರು. 

ADVERTISEMENT

‘ಏಕ್‌ ಲವ್‌ ಯಾ’ ಸಿನಿಮಾ ನಂತರ ಪ್ರೇಮ್ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ‘ಕೆಡಿ’ ಮಾತಿನ ಭಾಗದ ಚಿತ್ರೀಕರಣ ಮುಗಿದು, ಎರಡು ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. 20 ಎಕರೆ ಪ್ರದೇಶದಲ್ಲಿ ಪುರಭವನ, ಕೆ.ಆರ್‌.ಮಾರ್ಕೆಟ್‌, ಮೈಸೂರು ಬ್ಯಾಂಕ್‌, ಧರ್ಮರಾಯ ದೇವಸ್ಥಾನ, ಶಿವಾಜಿ ಟಾಕೀಸ್‌ ಸೆಟ್‌ ಹಾಕಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣಗೊಂಡಿತ್ತು. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ನ ಸಂಜಯ್‌ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್‌, ರಮೇಶ್‌ ಅರವಿಂದ್‌ ತಾರಾಬಳಗದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.