ಬೆಂಗಳೂರು: ‘ಪೈಲ್ವಾನ್’ ಚಿತ್ರಕ್ಕಾಗಿ ತಮಗೆ ಘೋಷಣೆಯಾಗಿದ್ದ 2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಅವರು ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅರ್ಹ ಬೇರೊಬ್ಬ ನಟನಿಗೆ ಪ್ರಶಸ್ತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರ ಸಮಿತಿಗೆ,
ಅತ್ಯುತ್ತಮ ನಟ ವಿಭಾಗದಡಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಹೆಮ್ಮೆಯ ವಿಷಯ. ಈ ಗೌರವ ನೀಡಿದ ತೀರ್ಪುಗಾರರಿಗೆ ನಾನು ಹೃದಯಸ್ಪರ್ಶಿ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಹಲವು ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ ಎಂಬ ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಲೇಬೇಕಿದೆ. ಆ ನಿರ್ಧಾರವನ್ನು ಮುಂದುವರಿಸಲು ಬದ್ಧನಾಗಿದ್ದೇನೆ. ಈ ಪ್ರಶಸ್ತಿಗೆ ಬಹಳಷ್ಟು ಅರ್ಹ ವ್ಯಕ್ತಿಗಳು ಇದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ಅವರಲ್ಲಿ ಒಬ್ಬರು ಸ್ವೀಕರಿಸುವುದನ್ನು ನೋಡುವುದು ನನಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.
ಯಾವುದೇ ಪ್ರಶಸ್ತಿ ನಿರೀಕ್ಷೆಗಳಿಲ್ಲದೆ ಜನರನ್ನು ರಂಜಿಸುವ ನನ್ನ ಸಮರ್ಪಣೆಯಾಗಿದೆ. ತೀರ್ಪುಗಾರರು ನನ್ನನ್ನು ಈ ಪ್ರಶಸ್ತಿಗೆ ಗುರುತಿಸಿರುವುದು ನನ್ನ ಕೆಲಸವನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಿಸಲು ನನಗೆ ಪ್ರೇರಣೆಯಾಗಿದೆ.
ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲ ತೀರ್ಪುಗಾರರಿಗೆ ನಾನು ಆಭಾರಿಯಾಗಿದ್ದೇನೆ. ಈ ಗುರುತಿಸುವಿಕೆಯೇ ನನಗೆ ಸಿಕ್ಕ ಪ್ರತಿಫಲವಾಗಿದೆ. ನನ್ನ ನಿರ್ಧಾರದಿಂದ ಬೇಸರವಾಗಿರುವುದಕ್ಕೆ ತೀರ್ಪುಗಾರರು ಮತ್ತು ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ನಿರ್ಧಾರವನ್ನು ಗೌರವಿಸಿ, ನನ್ನ ಮಾರ್ಗವನ್ನು ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.
‘ಮುಂದಿನ ನಿರ್ಧಾರ ಸರ್ಕಾರದ್ದು’
ಈ ಕುರಿತು ಪ್ರತಿಕ್ರಿಯೆ ನೀಡಿರುವ 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಅಧ್ಯಕ್ಷ ನಿರ್ದೇಶಕ–ನಿರ್ಮಾಪಕ ನಂಜುಂಡೇಗೌಡ ಅವರು ‘ಈ ರೀತಿಯ ಸೂಚನೆ ಇಲ್ಲದೇ ಇದ್ದ ಕಾರಣ ನಾವು ಪ್ರಾಮಾಣಿಕವಾಗಿ ಆಯ್ಕೆ ಮಾಡಿದ್ದೇವೆ. ಅತ್ಯುತ್ತಮ ನಟ ವಿಭಾಗದಲ್ಲಿ ಇರುವ ನಾಲ್ಕೈದು ನಟರಲ್ಲಿ ದಿ ಬೆಸ್ಟ್ ಎಂದು ಬಂದಾಗ ಅವರ ಸೇವೆ ಪಾತ್ರ ನಿರ್ವಹಿಸಲು ಹಾಕಿದ ಶ್ರಮ ವಿಶೇಷವಾದ ತಾಲೀಮು ಗಮನದಲ್ಲಿ ಇಟ್ಟುಕೊಂಡು ಸಮಿತಿ ತೀರ್ಮಾನ ತೆಗೆದುಕೊಂಡಿದೆ. ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ವಿವೇಚನೆಗಳನ್ನು ಅಳೆದು ತೂಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿಯೇ ಆಯ್ಕೆ ಮಾಡಲಾಗಿದೆ. ಮುಂದಿನ ನಿರ್ಧಾರ ಸರ್ಕಾರದ್ದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.