ಮಡೆನೂರು ಮನು
ಬೆಂಗಳೂರು: ಸಹ ಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿ ಬಂಧನಕ್ಕೆ ಒಳಗಾಗಿರುವ ನಟ ಮಡೆನೂರು ಮನು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
33 ವರ್ಷದ ಸಹ ನಟಿ ನೀಡಿದ ದೂರಿನ ಮೇರೆಗೆ ನಟನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2), 352, 69, 89, 64(2)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು, ಮಂಗಳವಾರ ಸಂಜೆ (ಮೇ 20) ಬಂಧಿಸಿದ್ದರು. ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ್ದ ನ್ಯಾಯಾಲಯವು ಸೋಮವಾರದವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು.
ಆರೋಪಿ ಮತ್ತು ಸಂತ್ರಸ್ತೆಯ ಮನೆಯಲ್ಲಿ ಸ್ಥಳ ಮಹಜರು, ಹೇಳಿಕೆ ದಾಖಲು ಸೇರಿದಂತೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಪೊಲೀಸರು, ಮನು ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಮುಂದಿನ ತನಿಖೆಗೆ ಆರೋಪಿಯ ಕಸ್ಟಡಿ ತಮಗೆ ಅಗತ್ಯವಿಲ್ಲ ಎಂದು ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.
ಮೂರು ವರ್ಷದ ಹಿಂದೆ ಕಿರುತೆರೆಯ ಶೋ ಒಂದರಲ್ಲಿ ನಟ ಹಾಗೂ ದೂರುದಾರೆ ಪರಿಚಯವಾಗಿದ್ದರು.
ನಟ ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೊ ರೆಕಾರ್ಡಿಂಗ್ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆಡಿಯೊದಲ್ಲಿ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಕೀಳು ಮಾತುಗಳಿವೆ. ಈ ಬಗ್ಗೆ ನಟ ಜಗ್ಗೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರು ಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲ. ಇಂದು ಇದ್ದದ್ದು ನಾಳೆ ಇರದು. ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೆ. ಆಯುಷ್ಯ ಬರೆಯೋದು ಬ್ರಹ್ಮ, ಚಿಲ್ಲರೆ ಮನುಷ್ಯರಲ್ಲಾ. ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು. ಶಿವರಾಜ್‌ಕುಮಾರ್ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನು ಪ್ರೀತಿಸುವ ಜೀವ. ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ, ನೀವು ಹಿಮಾಲಯ, ನಿಮಗೆ ದೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮ ಹೆತ್ತವರು, ಕನ್ನಡಿಗರ ಆಶೀರ್ವಾದ ಇದೆ’ ಎಂದು ‘ಎಕ್ಸ್’ನಲ್ಲಿ ಜಗ್ಗೇಶ್ ಬರೆದಿದ್ದಾರೆ.
ಮಡೆನೂರು ಮನು ವಿರುದ್ಧ ಶಿವರಾಜ್‌ಕುಮಾರ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ಬಗ್ಗೆ ಮಂಗಳವಾರ ಮಂಡಳಿ ಸುದ್ದಿಗೋಷ್ಠಿ ಕರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.