ADVERTISEMENT

ನಟ ಶಿವರಾಜ್ ಕೆ.ಆರ್.ಪೇಟೆ: ಕಾಮಿಡಿ ಕಿಲಾಡಿಯ ತಂಬಾಕು ಕೃಷಿ

ಕೆ.ಎಂ.ಸಂತೋಷ್‌ ಕುಮಾರ್‌
Published 1 ಏಪ್ರಿಲ್ 2020, 19:45 IST
Last Updated 1 ಏಪ್ರಿಲ್ 2020, 19:45 IST
ಶಿವರಾಜ್ ಕೆ.ಆರ್.ಪೇಟೆ
ಶಿವರಾಜ್ ಕೆ.ಆರ್.ಪೇಟೆ   

ಕನ್ನಡ ಚಿತ್ರರಂಗದಲ್ಲಿ ತುಂಬಾ ಬ್ಯುಸಿ ಇರುವಕಾಮಿಡಿನಟರಲ್ಲಿಶಿವರಾಜ್‌ ಕೆ.ಆರ್‌. ಪೇಟೆ ಕೂಡ ಒಬ್ಬರು. ಈವರೆಗೆ ಸುಮಾರು 29 ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಗಾಂಧಿನಗರದಲ್ಲಿ ಅವರ ಕಾಲ್‌ಶೀಟ್‌ಗೆ ತುಂಬಾಬೇಡಿಕೆ ಇದೆ. ಸಹಜ ನಟನೆ, ಕಚಗುಳಿ ಇಡುವ ಡೈಲಾಗ್‌ಗಳಿಂದ ಎಲ್ಲರನ್ನೂ ನಕ್ಕು ನಗಿಸುವ ಈ ಹಾಸ್ಯ ನಟಈಗ ಅಪ್ಪಟ ಕೃಷಿಕ. ಅದರಲ್ಲೂ ಹೊಗೆಸೊಪ್ಪು ಬೆಳೆಯುತ್ತಿರುವ ರೈತ!

ಇದೇನಪ್ಪ ಶಿವರಾಜ್‌ ಚಿತ್ರರಂಗಕ್ಕೆ ಗುಡ್‌ಬೈ ಹೇಳಿಬಿಟ್ಟರಾ ಎಂದು ಗಾಬರಿಯಾಗಬೇಡಿ. ಲಾಕ್‌ಡೌನ್‌ನಿಂದಾಗಿ ಅಕ್ಕನ ಮನೆಯಲ್ಲಿ ಹೆಂಡತಿ ಮಗುವಿನೊಂದಿಗೆ ವಾಸ್ತವ್ಯ ಹೂಡಿರುವ ಅವರು, ಅಕ್ಕನ ಮನೆಯ ಜಮೀನಿನಲ್ಲಿ ಹೊಗೆಸೊಪ್ಪು ಬೆಳೆಗೆ ನೀರು ಹಾಯಿಸಿಕೊಂಡು, ಸಾವಯವ ತರಕಾರಿ ಹೊಲದಲ್ಲಿಕೃಷಿಚಟುವಟಿಕೆಯಲ್ಲಿ ತೊಡಗಿದ್ದಾರೆ.

ಅಕ್ಕನ ಮನೆಯಲ್ಲಿ ಬಂಧಿಯಾದ ಹಿನ್ನೆಲೆ ವಿವರಿಸುತ್ತಾ ‘ಪ್ರಜಾಪ್ಲಸ್‌’ ಜತೆಗೆ ಮಾತಿಗಿಳಿದ ಅವರು, ‘ಒಂದೂವರೆ ತಿಂಗಳಿನಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ. ಹಿಮ್ಮಡಿ, ಮಂಡಿ ನೋವಿಗೆ ಹೊಳೆನರಸೀಪುರದಲ್ಲಿ ಕುಟುಂಬ ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದೆ. ಸಾಲಿಗ್ರಾಮ ಸಮೀಪದ ಮೇಲೂರಿನ ಅಕ್ಕನ ಮನೆಗೆ ಹೋದಾಗ ಅದೇ ದಿನ ಪ್ರಧಾನಿ ಮೋದಿಯವರು ಲಾಕ್‌ಡೌನ್‌ ಘೋಷಿಸಿದರು’ ಎಂದು ಮಾತು ವಿಸ್ತರಿಸಿದರು.

ADVERTISEMENT

ಅವರು ನಾಯಕನಾಗಿಯೂ ನಟಿಸಿದ್ದ ‘ನಾನು ಮತ್ತು ಗುಂಡ’ ಇತ್ತೀಚೆಗಷ್ಟೇ ತೆರೆಕಂಡಿತ್ತು. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳನ್ನು ನೆನಪಿಸಿಕೊಳ್ಳುವ ಶಿವರಾಜ್‌, ‘ಹದಿನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವನು ನಾನು. ಪುನೀತ್‌ ರಾಜ್‌ಕುಮಾರ್‌ ಅವರ ‘ಪೃಥ್ವಿ’ ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗುವ ಅವಕಾಶವನ್ನು ಗೆಳೆಯ ನಂದೀಶ್‌ ಕೊಡಿಸಿದ. ಆಗ ನಟನೆಯನ್ನು ಹತ್ತಿರದಿಂದ ನೋಡಿ ನಾನೂ ನಟನಾಗಬೇಕೆಂಬ ಆಸೆ ಚಿಗುರಿತು. ಟಿ.ವಿ 9 ವಾಹಿನಿಯ ಹಳ್ಳಿಕಟ್ಟೆಯ ಬಸ್ಯಾನಾಗಿ ಕಾಣಿಸಿಕೊಂಡೆ. ನಂತರ ಜೀ ಟಿವಿಯ ‘ಕಾಮಿಡಿಕಿಲಾಡಿಗಳು’ ನನ್ನ ಅಭಿರುಚಿಗೆ ವೇದಿಕೆ ಒದಗಿಸಿತು. ಇನ್ನು ನನ್ನ ಅಪ್ಪ ಡ್ರಾಮಾ ಮೇಸ್ಟ್ರು ಆಗಿರುವುದು ಸಹ ನಾನೊಬ್ಬ ಕಲಾವಿದನಾಗಿ ರೂಪುಗೊಳ್ಳಲು ಕಾರಣ’ ಎನ್ನಲು ಶಿವರಾಜ್‌ ಮರೆಯಲಿಲ್ಲ.

ಶಿವರಾಜ್‌ ಅವರ ಕೈಯಲ್ಲಿ ಈಗ ನಾಲ್ಕು ಚಿತ್ರಗಳಿವೆ. ‘ಮದಗಜ’, ‘ಬಂಪರ್‌’, ನಿಖಿಲ್‌ ಕುಮಾರಸ್ವಾಮಿ ನಟನೆಯ ಇನ್ನೂ ಹೆಸರಿಡದ ಚಿತ್ರ ಹಾಗೂ ಇನ್ನೊಂದು ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳ ಚಿತ್ರೀಕರಣಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿವೆ.

ಪೊಲೀಸರಿಗೆ, ವೈದ್ಯರಿಗೆ ಹ್ಯಾಟ್ಸ್‌ ಅಪ್‌

‘ಪೊಲೀಸರಿಗೆ, ವೈದ್ಯರಿಗೆ, ದಾದಿಯರಿಗೂ ನಾವು ಹ್ಯಾಟ್ಸ್‌ ಅಪ್‌ ಹೇಳಬೇಕು. ಸುತ್ತಲೂ ಸಾವು ಸಂಚರಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ನಮ್ಮೆಲ್ಲರನ್ನು ಕಾಪಾಡಲು ಹೋರಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಂಪೂರ್ಣ ಸಹಕಾರ ನೀಡೋಣ. ಜತೆಗೆ ಪೊಲೀಸರಲ್ಲಿ ನನ್ನದೊಂದು ರಿಕ್ವೆಸ್ಟ್‌ ಇದೆ; ಕೈಯಲ್ಲಿ ಲಾಠಿ ಹಿಡಿದುಕೊಳ್ಳಿ, ಇಲ್ಲದಿದ್ದರೆ ಜನ ಮಾತು ಕೇಳುವುದಿಲ್ಲ. ಹಾಗಂಥ ಆ ಲಾಠಿ ಮಾನವೀಯತೆ ಕಳೆದುಕೊಳ್ಳದಂತೆ ನೋಡಿಕೊಳ್ಳಿ’ ಎಂಬ ವಿನಮ್ರ ಕೋರಿಕೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.