ADVERTISEMENT

ತಾಯಿಯಾಗುವ ಖುಷಿಯಲ್ಲಿದ್ದಾರೆ ನಟಿ ಕಲ್ಕಿ ಕೊಹ್ಲಿನ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 19:45 IST
Last Updated 11 ಅಕ್ಟೋಬರ್ 2019, 19:45 IST
ಕಲ್ಕಿ ಕೊಹ್ಲಿನ್
ಕಲ್ಕಿ ಕೊಹ್ಲಿನ್   

ಬಾಲಿವುಡ್‌ ನಟಿ, ರಂಗಭೂಮಿ ನಟಿ, ಬರಹಗಾರ್ತಿ, ಲೈವ್‌ ಷೋ, ವೆಬ್‌ ಸಿರೀಸ್‌, ಯೂಟ್ಯೂಬ್‌ ಚಾನೆಲ್‌ಗಳಲ್ಲಿ ನಟಿಸಿರುವ ಬಹುರೂಪ ನಟಿ ಕಲ್ಕಿ ಕೊಹ್ಲಿನ್‌ ಈಗ ಅಮ್ಮನಾಗುತ್ತಿರುವ ಸಂತಸದಲ್ಲಿದ್ದಾರೆ.

ವಾರಗಳ ಹಿಂದೆ ಈ ನಟಿ, ತಾವು ಗರ್ಭಿಣಿ ಎಂದು ಹಂಚಿಕೊಂಡಿದ್ದರು. ಈ ಹೊಸ ಜವಾಬ್ದಾರಿಯನ್ನು ಅವರು ಉತ್ಸಾಹದಿಂದ ಸ್ವಾಗತಿಸಿದ್ದು, ರೋಮಾಂಚಿತರಾಗಿದ್ದರಂತೆ.‘ಈಗ ನನಗೆ ಈರುಳ್ಳಿ ಕತ್ತರಿಸುವ ವಾಸನೆಯನ್ನೂ ಸಹಿಸಲಾಗುವುದಿಲ್ಲ. ನನಗೆ ಭೇಲ್‌ಪುರಿ ಅಂದ್ರೆ ಇಷ್ಟ. ಆದರೆ ಈಗ ನಾನು ತಿನ್ನುವ ಹಾಗಿಲ್ಲ’ ಎನ್ನುತ್ತಲೇ ಮಾತಿಗೆ ಶುರು ಮಾಡಿಕೊಂಡರು.

ತಾವು ಗರ್ಭಿಣಿ ಎಂದು ತಿಳಿಸಿದ ಬಳಿಕ ಎಲ್ಲರೂ ತೋರಿಸುತ್ತಿರುವ ಕಾಳಜಿಗೆ ಅವರು ಮನಸೋತಿದ್ದರಂತೆ. ‘ಎಲ್ಲರೂ ಮನೆಯಲ್ಲಿಯೇ ಮಾಡಿದ ಆಹಾರವನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ಒಂದು ಮಗುವನ್ನು ಬರಮಾಡಿಕೊಳ್ಳಲು ಒಂದು ಹಳ್ಳಿ ಸಜ್ಜಾಗುತ್ತದೆ ಎಂಬ ಮಾತು ನಾನು ಕೇಳಿದ್ದೇನೆ. ಆದರೆ ಇಲ್ಲಿ ಒಂದು ಸಮುದಾಯವೇ ನನ್ನ ಬಗ್ಗೆ ಕಾಳಜಿ ವಹಿಸುತ್ತದೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ADVERTISEMENT

ಜನವರಿಯಲ್ಲಿ ಮಗುವನ್ನು ಬರಮಾಡಿಕೊಳ್ಳಲು ಎದುರು ನೋಡುತ್ತಿರುವ ಅವರು, ‘ತೂಕದ ವಿಚಾರದಲ್ಲಿ ವೈದ್ಯರು ಮಗು ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ನನಗೆ ತಿಳಿಸಿದ್ದಾರೆ. 4ನೇ ತಿಂಗಳಿನಿಂದ ತಾಯ್ತನದ ಖುಷಿ ಅನುಭವಿಸಲು ಉತ್ತಮ ಸಮಯ. ಆ ಬಳಿಕ ವಾಕರಿಕೆ ಈಗಿನಂತೆ ಇರುವುದಿಲ್ಲ. ಆದರೆ ಕೆಲ ತಿಂಗಳಲ್ಲಿ ನಾನು ಬೆನ್ನು ನೋವನ್ನು ಅನುಭವಿಸಬೇಕು ಎಂಬುದು ನನಗೆ ಗೊತ್ತು’ ಎಂದು ಹೇಳಿ ನಕ್ಕರು.

ಕಲ್ಕಿ ಒಂದಲ್ಲ ಒಂದು ಕೆಲಸದಲ್ಲಿ ಸದಾ ತೊಡಗಿಸಿಕೊಳ್ಳುವವರು. ‘ಭರಂ’ ವೆಬ್‌ಸೀರೀಸ್, ‘ಮೈ ಇಂಡಿಯನ್‌ ಲೈಫ್‌’ ಷೋದ ಎರಡನೇ ಆವೃತ್ತಿ ಹಾಗೂ ಗೋವಾ ಆರ್ಟ್ಸ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗುವ ನಾಟಕದ ನಿರ್ದೇಶನ ಬಾಕಿಯಿದೆ ಎಂದು ಕೆಲಸಗಳನ್ನೂ ನೆನಪಿಸಿಕೊಂಡರು.

‘ಎಲ್ಲಾ ಕೆಲಸಗಳು ಮುಗಿದ ಬಳಿಕ ನಾನು ವಿರಾಮ ತೆಗೆದುಕೊಂಡು ಎಲ್ಲಾ ತಾಯಂದಿರ ಹಾಗೇ ನಿದ್ದೆ ಇಲ್ಲದ ರಾತ್ರಿಗಳು, ಹಾಲು ಕುಡಿಸುವುದು ಹಾಗೂ ಮಗುವಿನ ಜೊತೆ ಹೆಚ್ಚು ಸಮಯ ಕಳೆಯುತ್ತೇನೆ’ ಎಂದರು.

ಕೆಲಸದಲ್ಲಿ ಶಿಸ್ತು

‘ಮಾರ್ಗರಿಟಾ ವಿಥ್‌ ಎ ಸ್ಟ್ರಾ’ ಸಿನಿಮಾದಲ್ಲಿಕಲ್ಕಿ ಕೊಹ್ಲಿನ್ ಅವರ ಮನೋಜ್ಞ ಅಭಿನಯಕ್ಕೆ ಪ್ರಶಂಸೆಯ ಸುರಿಮಳೆಯೇ ಸುರಿದಿತ್ತು. ಚಿತ್ರದಲ್ಲಿ ಅವರದು ಸೆರೆಬ್ರಲ್‌ ಪಾರ್ಸಿಯಿಂದ ಬಳಲುತ್ತಿರುವ ಭಾರತೀಯ ಹೆಣ್ಣುಮಗಳೊಬ್ಬಳು ಉನ್ನತ ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಪಾತ್ರ. ‘ ಈ ಸಿನಿಮಾದಲ್ಲಿ ಪೂರ್ತಿ ನಾನು ವ್ಹೀಲ್‌ಚೇರ್‌ನಲ್ಲಿಯೇ ನಟಿಸಬೇಕಾಗಿತ್ತು. ಊಟ ಹಾಗೂ ಬಾತ್‌ರೂಮ್‌ ಬ್ರೇಕ್‌ ಇದ್ದಾಗಲೂ ನಾನು ವ್ಹೀಲ್‌ ಚೇರ್‌ ಬಳಸುತ್ತಿದ್ದೆ. ನನ್ನ ಬಗ್ಗೆ ಗೊತ್ತಿಲ್ಲದ ಜನರು, ನಾನು ಅಂಗವಿಕಲೆ ಎಂದೇ ಭಾವಿಸುತ್ತಿದ್ದರು’ ಎಂದು ಹೇಳಿದ್ದಾರೆ.

‘ಸಿನಿಮಾದ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುವುದು ನನಗೆ ಇಷ್ಟ’ ಎಂದು ಹೇಳುವ ಅವರು, ಸಿನಿಮಾ ಚಿತ್ರೀಕರಣ ಮೊದಲು ಚಿತ್ರಕತೆ ರೀಡಿಂಗ್‌ ಸೆಷನ್‌ ಹಾಗೂ ನಟನಾ ಕಾರ್ಯಾಗಾರಗಳನ್ನು ಮಾಡುವ ನಿರ್ದೇಶಕರು ನನಗಿಷ್ಟವಾಗುತ್ತಾರೆ. ಸ್ವಾಭಾವಿಕ ನಟನೆ ಎಂದಾಗ ನನಗೆ ಭಯವಾಗುತ್ತದೆ. ಒಂದು ಪಾತ್ರಕ್ಕೆ ಎಷ್ಟು ತಯಾರಾಗಿದ್ದೀರಿ ಎಂಬುದು ದೊಡ್ಡ ವಿಷಯವಲ್ಲ, ಆದರೆ ಚಿತ್ರೀಕರಣ ದಿನ ತುಂಬ ತಯಾರಿ ನಡೆಸಿದ್ದರೂ ಕೆಲವೊಮ್ಮೆ ಪಾತ್ರಕ್ಕೆ ನ್ಯಾಯ ಒದಗಿಸಲಾಗುವುದಿಲ್ಲ’ ಎಂದಿದ್ದಾರೆ.

‘ರಂಗಭೂಮಿ ಅಭಿನಯವು ಸಹಜ ನಟನೆಯ ಬಗ್ಗೆ ತಿಳಿಸಿಕೊಟ್ಟಿಲ್ಲವೇ’ ಎಂಬ ಪ್ರಶ್ನೆಗೆ ‘ವೇದಿಕೆಯಲ್ಲಿ ತಪ್ಪುಗಳಾದಾಗ ನಿಮಗೆ ಅದನ್ನು ಇಂಪ್ರೂವೈಸ್‌ ಮಾಡಿಕೊಳ್ಳಲು ಅವಕಾಶವಿರುತ್ತದೆ. ಲೈವ್‌ ಷೋಗಳನ್ನು ನಡೆಸುವಾಗ ರಿಟೇಕ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಮಯ ಇದ್ದರೆ ನಾನು ಮುಂಚಿತವಾಗಿಯೇ ಆ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತೇನೆ. ಬಣ್ಣದ ಬದುಕಿಗೆ ಕಾಲಿಟ್ಟ ಆರಂಭದ ದಿನಗಳನ್ನು ನಾನು ದ್ವೇಷಿಸುತ್ತೇನೆ. ಮೊದಲು ನಿಮಗೆ ಕ್ಯಾಮೆರಾ ಎದುರು ನಟಿಸುವಾಗ ಪಾತ್ರ ಹೇಗಿರುತ್ತದೆ ಎಂಬುದೇ ತಿಳಿದಿರುವುದಿಲ್ಲ. ಪಾತ್ರದ ಬಗ್ಗೆ ತಿಳಿದಾಗ ಕೊಂಚ ದಿನ ಕಳೆದಿರುತ್ತದೆ. ಆಗ ಸಿನಿಮಾದಿಂದ ಹಿಂದಕ್ಕೆ ಬರಲಾಗುವುದಿಲ್ಲ’ ಎಂದು ರಂಗಭೂಮಿ,ಸಿನಿಮಾ ನಟನೆ ಬಗ್ಗೆ ಮಾತನಾಡಿದರು.

ಕಲ್ಕಿ ಅಭಿನಯದ ಹಿಟ್‌ ಚಿತ್ರಗಳು

* ಮಾರ್ಗರಿಟಾ ವಿಥ್‌ ಎ ಸ್ಟ್ರಾ

* ದ್ಯಾಟ್‌ ಗರ್ಲ್‌ ಇನ್‌ ಯೆಲ್ಲೊ ಬೂಟ್ಸ್‌

* ಜಿಂದಗಿ ನಾ ಮಿಲೇಗಿ ದುಬಾರಾ

* ಯೇ ಜವಾನಿ ಯೇ ದೀವಾನಿ

* ದೇವ್‌ ಡಿ

ಬೆಂಗಳೂರಿನಲ್ಲಿ ಬಾಲ್ಯ

ಕಲ್ಕಿ ಬಾಲ್ಯದಲ್ಲಿ ಬೆಳೆದ ಜೀವನ ಹೂವಿನ ಹಾದಿಯಾಗಿರಲಿಲ್ಲ. ಫ್ರೆಂಚ್‌ ಹೆತ್ತವರು ಹಾಗೂ ಬೆಳೆದಿದ್ದು ಬೆಂಗಳೂರು ಹಾಗೂ ಪುದುಚೇರಿಯಲ್ಲಿ. ಹೀಗಾಗಿ ಪ್ರತಿಬಾರಿಯೂ ಅವರು ತಮ್ಮ ಭಾರತೀಯತೆಯನ್ನು ಸಾಬೀತುಪಡಿಸಬೇಕಾಗಿತ್ತು.

‘ನಾನು ಅನೇಕ ಬಾರಿ ಜನರಿಗೆ ಎದುರು ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಈಗ ಅದರ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ, ಬದಲಾಗಿ ನಗುತ್ತೇನೆ. ಆ ಸೂಕ್ಷ್ಮತೆ ಹಾಗೂ ವಿಭಿನ್ನವಾಗಿ ಯೋಚನೆ ಮಾಡುವ ರೀತಿಯೇ ನನ್ನನ್ನು ನಟಿಯನ್ನಾಗಿಸಿದೆ’‘ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬುದಷ್ಟೇ ನನ್ನ ಗುರಿಯಲ್ಲ, ನಾನು ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿರುವುದಕ್ಕೆ ನನಗೆ ಖುಷಿಯಿದೆ. ಜನರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಹಾಗೂ ಅವರ ಮನಸ್ಥಿತಿ ಬದಲಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

ಬೆಂಗಳೂರು ನೆನಪುಗಳನ್ನು ಹಂಚಿಕೊಂಡ ಅವರು, ‘ನಾನು 18–19ದವಳಿದ್ದಾಗ ಬೆಂಗಳೂರಿನಲ್ಲಿದ್ದೆ. ಆಗಪಿಂಕ್‌ ಫ್ಲಾಯ್ಡ್‌ ತಂಡದ ಸಂಗೀತ ಕಾರ್ಯಕ್ರಮಗಳಿಗೆ ಕದ್ದುಮುಚ್ಚಿ ಹೋಗುತ್ತಿದ್ದೆ. ಇಂಡಿಯನ್‌ ಕಾಫಿ ಹೌಸ್‌ಗೆ ಹೋಗುತ್ತಿದ್ದೆ. ಚಾಕಲೇಟ್‌ ಐಸ್‌ಕ್ರೀಂ ಸವಿಯಲು ಕಾರ್ನರ್‌ ಹೌಸ್‌ಗೆ ಹೋಗುತ್ತಿದ್ದೆ. ಈಗ ಇಲ್ಲಿಗೆ ಬಂದಾಗ ನಾನು ವೈಟ್‌ಫೀಲ್ಡ್‌ನಲ್ಲಿನ ಮನೆಯಲ್ಲಿಯೇ ಇರುತ್ತೇನೆ. ಈಗ ವಯಸ್ಸಾಯಿತೋ ಏನೋ? ಈಗಲೂ ನನಗೆ ರಂಗಶಂಕರದಲ್ಲಿ ನಾಟಕ ಪ್ರದರ್ಶನ ನೀಡಲು ಇಷ್ಟ’ ಎಂದು ನೆನಪುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.