ADVERTISEMENT

ಕನಸನ್ನು ನನಸಾಗಿಸಿರುವ ನಟನೆ: ನಟಿ ರೋಶಿನಿ ಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 19:50 IST
Last Updated 17 ಅಕ್ಟೋಬರ್ 2024, 19:50 IST
   

ಕನ್ನಡವಲ್ಲದೇ ಬೇರೆ ಭಾಷೆಗಳಲ್ಲಿಯೂ ಸಕ್ರಿಯವಾಗಿರುವ ರೋಶಿನಿ ಪ್ರಕಾಶ್‌ ಅಭಿನಯದ ‘ಮರ್ಫಿ’ ಚಿತ್ರ ಇಂದು(ಅ.18) ತೆರೆ ಕಾಣುತ್ತಿದೆ. ಚಿತ್ರದ ಕುರಿತು ಅವರು ಹೇಳಿದ್ದಿಷ್ಟು...

––

‘ಇದೊಂದು ರೊಮ್ಯಾಂಟಿಕ್‌ ಲವ್‌ ಸ್ಟೋರಿ. 1990 ಮತ್ತು ಈಗಿನ ಕಾಲಘಟ್ಟದ ಟೈಂ ಟ್ರಾವೆಲಿಂಗ್‌ ಪ್ರೇಮಕಥೆ. ಇದರಲ್ಲಿ ರೇಡಿಯೊ ಕೂಡ ಒಂದು ಪ್ರಮುಖ ಪಾತ್ರವಾಗಿರುತ್ತದೆ. ಜನನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಓಲ್ಡ್‌ ಸಿಲೆಬಸ್‌ ಆಫ್‌ ಲವ್‌ ಎನ್ನುತ್ತಾರಲ್ಲ, ಆ ರೀತಿಯ ಪಾತ್ರ’ ಎಂದು ಸಿನಿಮಾದ ಕುರಿತು ಅವರು ವಿವರಿಸಿದರು.

ADVERTISEMENT

ಕನ್ನಡವಲ್ಲದೇ ತೆಲುಗು, ತಮಿಳಿನಲ್ಲಿಯೂ ಇವರು ಅಭಿನಯಿಸುತ್ತಿದ್ದಾರೆ. ‘ಕವಲುದಾರಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿ ಗಮನ ಸೆಳೆದಿದ್ದರು. ‘ಬೇರೆ ಭಾಷೆಯ ಸಿನಿಮಾಗಳು ಇಲ್ಲಿಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ಎಲ್ಲ ಕಡೆ ಮಾಡುವ ಕೆಲಸವೂ ಒಂದೇ. ಆದರೆ ಬೇರೆ ತಂಡಗಳ ಜೊತೆಗಿನ ಒಡನಾಟ, ಕೆಲಸದ ರೀತಿ ವಿಭಿನ್ನ ಅನುಭವ ನೀಡುತ್ತದೆ. ಸಿನಿಮಾದಲ್ಲಿ ಅವಕಾಶಗಳನ್ನು ಪಡೆಯುವುದೇ ಖುಷಿಯ ವಿಷಯ. ಸದ್ಯ ತಮಿಳಿನಲ್ಲಿ ಬಾಲ ಸರ್‌ ಜೊತೆ ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಅರುಣ್‌ ವಿಜಯ್‌ ಚಿತ್ರದ ನಾಯಕ. ಕನ್ನಡದಲ್ಲಿ ‘ನಾಕುತಂತಿ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಿದೆ’ ಎಂದು ಮುಂದಿನ ಯೋಜನೆಗಳ ಮಾಹಿತಿ ನೀಡಿದರು.

‘ಜೀವನದಲ್ಲಿ ನಟಿಯಾಗಬೇಕೆಂಬ ಆಸೆ ಇರಲಿಲ್ಲ. ನಟಿಯಾದೆ. ಇದೇ ಒಂದು ರೀತಿ ದೊಡ್ಡ ಕನಸು. ಇನ್ನಷ್ಟು ಒಳ್ಳೆಯ ನಟರ ಜೊತೆ ನಟಿಸುವ ಆಸೆಯಿದೆ. ಒಂದು ತಿಂಗಳಿನಿಂದ ‘ಮರ್ಫಿ’ ಚಿತ್ರದ ಪ್ರಚಾರಕ್ಕಾಗಿ ಓಡಾಡುತ್ತಿದ್ದೇವೆ. ಒಂದು ಸಿನಿಮಾ ಮಾಡುವುದರ ಜೊತೆಗೆ ಅದನ್ನು ಸರಿಯಾಗಿ ತಲುಪಿಸಬೇಕು. ಸರಿಯಾದ ಶ್ರಮ ಹಾಕಿ ಮಾಡಿದಾಗ ಸಿನಿಮಾ ಉತ್ತಮವಾಗುತ್ತದೆ’ ಎಂದರು.

ಉತ್ತಮವಾದ ಪೋಷಕ ಪಾತ್ರಗಳನ್ನು ಮಾಡುತ್ತಿರುವ ಇವರು ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ನೋಡುವ ಅಭ್ಯಾಸ ಹೊಂದಿದ್ದು, ಅಲ್ಲಿನ ನಟ,ನಟಿಯರಿಂದ ಏನು ಕಲಿಯಬಹುದು, ತಮ್ಮ ನಟನೆಯಲ್ಲಿ ಅವರ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬಹುದೆಂದು ಆಲೋಚಿಸುತ್ತಾರಂತೆ. ವಿಭಿನ್ನವಾದ ಪಾತ್ರಗಳನ್ನು ಮಾಡಬೇಕು, ಹೆಚ್ಚೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿರಬೇಕು ಎಂಬ ಹಂಬಲ ಇವರದ್ದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.