ADVERTISEMENT

ಕತ್ತಲರಾತ್ರಿಯ ನಿಗೂಢ ಕಥನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:34 IST
Last Updated 18 ಡಿಸೆಂಬರ್ 2018, 19:34 IST
ಅರ್ಪಿತಾ ಗೌಡ
ಅರ್ಪಿತಾ ಗೌಡ   

‘ತೆರೆಯ ಮೇಲೆ ಮೂಡುವ ದೃಶ್ಯ ಮುಂದೆ ಏನಾಗುತ್ತದೆ ಎಂದು ಥಿಯೇಟರ್‌ನಲ್ಲಿ ಕುಳಿತ ಪ್ರೇಕ್ಷಕ ಊಹಿಸುವುದು ಕಷ್ಟ. ಅವನ ಆಲೋಚನೆಗಳನ್ನು ಒಡೆಯುವಂತಹ ಚಿತ್ರಕಥೆ ಹೆಣೆದಿದ್ದೇನೆ’ ಎಂದು ಮಾತು ಆರಂಭಿಸಿದರು ನಿರ್ದೇಶಕ ಭರತ್‌ ಎಸ್‌. ನಾವುಂದ.

ತಮ್ಮ ಮೊದಲ ಚಿತ್ರ ‘ಅಡಚಣೆಗಾಗಿ ಕ್ಷಮಿಸಿ’ ಕುರಿತು ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರತಂಡದ ಸಮೇತ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಇದು ಅವರ ಮೊದಲ ಚಿತ್ರವಲ್ಲವಂತೆ. ‘ಮುಗಿಲ್‌ ಪೇಟೆ’ ಎಂಬ ಸಿನಿಮಾ ನಿರ್ದೇಶನಕ್ಕೆ ಅವರು ಮುಂದಾಗಿದ್ದರಂತೆ. ‘ಆದರೆ, ಚಿತ್ರದ ಬಜೆಟ್‌ ಹೆಚ್ಚಿದ್ದರಿಂದ ನಿರ್ಮಾಪಕರು ಸಿಗಲಿಲ್ಲ. ಹಾಗಾಗಿ, ಈ ಸಿನಿಮಾವನ್ನು ನಿರ್ದೇಶಿಸುವಂತಾಯಿತು’ ಎಂದು ಹೇಳಿದರು.

‘ಸೈಕಲಾಜಿಕಲ್ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಇದು. ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ’ ಎಂದರು.

ADVERTISEMENT

ನಾಲ್ಕು ಕಾಲೇಜಿನ ಐವತ್ತೆರಡು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಕ್ರೌಡ್‌ ಫಂಡಿಂಗ್‌ ಮಾಡಿದ್ದಾರೆ. ಹದಿನಾಲ್ಕು ಪಾತ್ರಗಳಿದ್ದು, ಎಲ್ಲ ಪಾತ್ರಗಳಿಗೂ ಮಾನ್ಯತೆ ನೀಡಲಾಗಿದೆಯಂತೆ. ಫ್ಲಾಷ್‌ಬ್ಲಾಕ್‌ ಮೂಲಕ ಚಿತ್ರಕಥೆ ಸಾಗಲಿದೆ. ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ಕಥೆ ಹೊಸೆಯಲಾಗಿದೆಯಂತೆ.

ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಎಸ್‌. ಪ್ರದೀಪ್ ವರ್ಮ ಈ ಚಿತ್ರದ ನಾಯಕ. ಮೂರು ಗೆಟಪ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ನಾನು ಅಪ್ಪನೊಟ್ಟಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದೆ. ಹಲವು ಸಂಗೀತ ಸಂಯೋಜಕರ ಬಳಿ ಹಣ ಪಡೆಯದೆ ಕೆಲಸ ಮಾಡಿದ್ದೇನೆ. ನಾನು ನಾಯಕನಾಗಿ ನಟಿಸಿದರೂ ಸಂಗೀತ ಕ್ಷೇತ್ರವನ್ನು ಬಿಡುವುದಿಲ್ಲ’ ಎಂದು ಅವರೇ ಷರತ್ತು ವಿಧಿಸಿಕೊಂಡರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಪ್ರದೀಪ್‌ ವರ್ಮ ಅವರೇ ಸಂಗೀತ ಸಂಯೋಜಿಸಿದ್ದಾರೆ. ಸದ್ಗುಣಮೂರ್ತಿ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ರವಿವರ್ಮ ಗಾಗು ಅವರದ್ದು. ಜನವರಿಗೆ ಜನರ ಮುಂದೆ ಬರಲು ಚಿತ್ರತಂಡ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.