ADVERTISEMENT

ಸಿನಿಮಾ ವಿಮರ್ಶೆ: ಅಮೆರಿಕದಲ್ಲೂ ‘ಅಧ್ಯಕ್ಷ‘ ಶರಣನ ಹಾಸ್ಯದ ಹೊನಲು

ಹಾಸ್ಯಕ್ಕೆ ‘ಶರಣ’ನೇ ಅಧ್ಯಕ್ಷ

ಕೆ.ಎಂ.ಸಂತೋಷ್‌ ಕುಮಾರ್‌
Published 4 ಅಕ್ಟೋಬರ್ 2019, 10:46 IST
Last Updated 4 ಅಕ್ಟೋಬರ್ 2019, 10:46 IST
‘ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದಲ್ಲಿ ಶರಣ್‌ ಮತ್ತು ರಾಗಿಣಿ ದ್ವಿವೇದಿ
‘ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದಲ್ಲಿ ಶರಣ್‌ ಮತ್ತು ರಾಗಿಣಿ ದ್ವಿವೇದಿ   

ಚಿತ್ರ: ಅಧ್ಯಕ್ಷ ಇನ್‌ ಅಮೆರಿಕಾ

ನಿರ್ದೇಶಕ: ಯೋಗಾನಂದ ಮುದ್ದಾನ್‌

ನಿರ್ಮಾಪಕ: ವಿಶ್ವಪ್ರಸಾದ್‌ ಟಿ.ಜಿ.

ADVERTISEMENT

ತಾರಾಗಣ: ಶರಣ್‌, ರಾಗಿಣಿ ದ್ವಿವೇದಿ, ಸಾಧುಕೋಕಿಲ,ರಂಗಾಯಣ ರಘು,ಶಿವರಾಜ್ ಕೆ.ಆರ್‌. ಪೇಟೆ

‘ಓಲ್ಡ್‌ ವೈನ್‌ ಇನ್‌ ನ್ಯೂ ಬಾಟಲ್‌’ ಎನ್ನುವ ಮಾತಿದೆ. ಮದ್ಯ ಎಷ್ಟೇಹಳತಾದರೂ ಅದು ಕೊಡುವ ಕಿಕ್‌ ಬೇರೆಯೇ ಇರುತ್ತದೆ ಎನ್ನುತ್ತಾರೆ ಬಲ್ಲವರು. ಹೊಸ ಬಾಟಲ್‌ಗೆ ಆಕರ್ಷಕ ಚಿತ್ರ ಅಂಟಿಸಿ ಮದ್ಯಪ್ರಿಯರನ್ನು ಸೆಳೆಯುವುದು ವ್ಯಾಪಾರದ ಗಿಮಿಕ್. ನಾಲ್ಕು ವರ್ಷಗಳ ಹಿಂದೆ ತೆರೆಕಂಡಿದ್ದ ಮಲಯಾಳದ ‘ಟು ಕಂಟ್ರೀಸ್‌’ ಅನ್ನು ಕನ್ನಡದ ರಿಮೇಕ್‌ ‘ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾ ಮಾಡುವಾಗನಿರ್ದೇಶಕ ಯೋಗಾನಂದ ಮುದ್ದಾನ್‌ ಅದೇ ರೀತಿಯ ಟ್ರಿಕ್ಸ್‌ಅನುಸರಿಸಿದ್ದಾರೆ ಎನ್ನಬಹುದು.

ಚಿತ್ರ ನಿರ್ಮಾಣದ ಕೆಮಿಸ್ಟ್ರಿ ಅರಿತಿರುವ ಯೋಗಾನಂದ್‌,ಸದ್ಯ ಸಿನಿ ರಸಿಕರಿಗೆ ಏನೇನು ಬೇಕೋ ಅದನ್ನು ಕೊಡುವಲ್ಲಿ ಬಹುಪಾಲು ಯಶಸ್ವಿಯಾಗಿದ್ದಾರೆ.‘ಟು ಕಂಟ್ರೀಸ್‌’ ಮಕ್ಕಿಕಾಮಕ್ಕಿ ಮಾಡದೆ, ನಿರ್ದೇಶಕನ ಸೃಜನಶೀಲತೆಯ ಸ್ವಾತಂತ್ರ್ಯ ಕಾಯ್ದುಕೊಂಡಿದ್ದಾರೆ. ಶರಣ್‌ ಅಭಿಮಾನಿಗಳ ಬಯಕೆಯ ನಾಡಿಮಿಡಿತವನ್ನೂ ಸರಿಯಾಗಿಯೇ ಅಂದಾಜಿಸಿರುವ ನಿರ್ದೇಶಕರು, ಚಿತ್ರಕಥೆ, ಸಂಭಾಷಣೆಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ನಾಯಕ ಎ. ಉಲ್ಲಾಸ್‌ (ಶರಣ್‌)ಊರು ತುಂಬಾ ಸಾಲ ಮಾಡಿಕೊಂಡಾತ. ಗರಡಿಮನೆ ಪೈಲ್ವಾನ್‌ ಓ. ಉಲ್ಲಾಸ್‌ (ತಾರಕ್‌ ಪೊನ್ನಪ್ಪ) ಎದುರು ನಾಯಕ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಜತೆಗೆ ಪಕ್ಷದ ಅಧ್ಯಕ್ಷನಾಗುತ್ತಾನೆ. ಹಣಕ್ಕಾಗಿ ಮಾರ್ವಾಡಿ ತಂಗಿಗೆ ಕಾಳು ಹಾಕುತ್ತಿದ್ದ ನಾಯಕನಿಗೆ ಶ್ರೀಮಂತೆ ಎನ್‌ಆರ್‌ಐ ನಂದಿನಿಯನ್ನು (ರಾಗಿಣಿ ದ್ವಿವೇದಿ) ಮದುವೆಯಾಗುವ ಅವಕಾಶ ಒದಗಿಬರುತ್ತದೆ.ಇವನೋ ಒಂದು ಥರ್ಟಿಗೆ ಟೈಟಾಗುವ ಮನುಷ್ಯ. ಆಕೆಯೋಎರಡೆರಡು ಫುಲ್‌ ಬಾಟಲ್‌ ಬೇಕೆನ್ನುವ ಮದ್ಯವ್ಯಸನಿ. ಎನ್‌ಆರ್‌ಐ ಹೆಂಡತಿಯಅವಾಂತರ ಮರೆಮಾಚಲು ಆಕೆಯೊಂದಿಗೆ ‘ಅಧ್ಯಕ್ಷ’ ಅಮೆರಿಕಕ್ಕೆ ಹಾರುತ್ತಾನೆ. ಮಧ್ಯಂತರದಲ್ಲಿ ಅಮೆರಿಕದಲ್ಲಿ ತೆರೆದುಕೊಳ್ಳುವ ಇವರ ‘ಸಂಸಾರ ಕದನ’ ಕುತೂಹಲಕಾರಿ.

2014ರಲ್ಲಿ ತೆರೆಕಂಡಿದ್ದ ‘ಅಧ್ಯಕ್ಷ’ ಸಿನಿಮಾದಲ್ಲಿ ಪ್ರೇಕ್ಷಕರನ್ನು ಭರಪೂರ ನಗಿಸಿದ್ದ ಶರಣ್‌, ಐದು ವರ್ಷಗಳ ನಂತರವೂ ಅದೇ ಸೀಕ್ವೆನ್ಸ್‌ನಲ್ಲಿ ಮತ್ತೆ ಪ್ರೇಕ್ಷಕರಿಗೆ ಹಾಸ್ಯರಸ ಉಣಬಡಿಸಿದ್ದಾರೆ. ನಾಯಕಿ ರಾಗಿಣಿ ಬೋಲ್ಡ್‌ ಮತ್ತು ಗ್ಲಾಮರಸ್‌ ಆಗಿ ಕಾಣಿಸುವುದಷ್ಟೇ ಅಲ್ಲ, ಅಭಿನಯದಲ್ಲೂ ನಿರಾಸೆಗೊಳಿಸುವುದಿಲ್ಲ.ಚಿತ್ರದಲ್ಲಿ ಕಾಮಿಡಿ, ಲವ್‌, ಸೆಂಟಿಮೆಂಟು, ರೊಮ್ಯಾನ್ಸ್‌ ಎಲ್ಲವೂ ಹಿತಮಿತವಾಗಿದೆ.

ಸಾಧುಕೋಕಿಲ, ರಂಗಾಯಣ ರಘು, ಶಿವರಾಜ್ ಕೆ.ಆರ್. ಪೇಟೆ,ತಬಲ ನಾಣಿ ತಮ್ಮ ಪಾತ್ರಗಳಲ್ಲಿ ಸಿನಿ ರಸಿಕರನ್ನು ನಗಿಸಲು ಹಿಂದೆ ಬಿದ್ದಿಲ್ಲ. ದಿಶಾ ಪಾಂಡೆ, ಅಶೋಕ್, ಅವಿನಾಶ್, ಪ್ರಕಾಶ್ ಬೆಳವಾಡಿ, ಚಿತ್ರಾ ಶೆಣೈ, ಪದ್ಮಜಾ ರಾವ್, ಮಕರಂದ್ ದೇಶಪಾಂಡೆ, ಸುಂದರ್‌ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ವಿ.ಹರಿಕೃಷ್ಣಸಂಗೀತ ನಿರ್ದೇಶನ‌ದ ಹಾಡುಗಳು ಕೇಳುವಂತಿವೆ. ಸೌಂಡ್‌ ಮಿಕ್ಸಿಂಗ್‌ ಸ್ವಲ್ಪ ಕಿರಿಕಿರಿ ಅನಿಸುವಂತಿದೆ. ಇನ್ನು ಅಮೆರಿಕದ ಸುಂದರ ತಾಣಗಳು, ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಬರುವ ದೃಶ್ಯಗಳು ಸುಧಾಕರ್ ಎಸ್. ರಾಜ್, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್ ತರುಣ್ ಕುಮಾರ್ ಅವರ ಛಾಯಾಗ್ರಹಣದಲ್ಲಿಸೊಗಸಾಗಿ ಸೆರೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.