ADVERTISEMENT

‘ಆದಿಪುರುಷ್‌’ ಸಿನಿಮಾದ ವಿಎಫ್ಎಕ್ಸ್‌ಗೆ ₹ 250 ಕೋಟಿ ವೆಚ್ಚ?

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 8:20 IST
Last Updated 20 ಆಗಸ್ಟ್ 2020, 8:20 IST
‘ಆದಿಪುರುಷ್‌’ ಸಿನಿಮಾದ ಪೋಸ್ಟರ್‌
‘ಆದಿಪುರುಷ್‌’ ಸಿನಿಮಾದ ಪೋಸ್ಟರ್‌   

‘ತಾನಾಜಿ’ ಚಿತ್ರದ ಖ್ಯಾತಿಯ ಓಂ ರಾವುತ್ ನಿರ್ದೇಶನದ ‘ಆದಿಪುರುಷ್‌’ ಚಿತ್ರದಲ್ಲಿ ನಟ ಪ್ರಭಾಸ್ ರಾಮನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇದಕ್ಕೆ ಟೀ ಸಿರೀಸ್‌ನ ಭೂಷಣ್‌ ಕುಮಾರ್‌ ಬಂಡವಾಳ ಹೂಡುತ್ತಿದ್ದಾರೆ. ಸುಮಾರು ₹ 500 ಕೋಟಿ ವೆಚ್ಚದಡಿ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದೆ.

ಈ ಚಿತ್ರದ ಕಥೆಗೆ ರಾಮಾಯಣ ಮಹಾಗ್ರಂಥವೇ ಪ್ರೇರಣೆಯಂತೆ. 3ಡಿ ಚಿತ್ರ ಇದಾಗಿದ್ದು, ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿದೆ. ಇದಾದ ಬಳಿಕ ಭಾರತೀಯ ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆಯಾಗಲಿದೆ. ‘ಬಾಹುಬಲಿ’ ಸರಣಿ ಸಿನಿಮಾಗಳಂತೆಯೇ ಅದ್ದೂರಿ ಸೆಟ್‌ ಅಳವಡಿಸಿ ಇದರ ಚಿತ್ರೀಕರಣ ನಡೆಸಲಾಗುತ್ತದೆಯಂತೆ.

‘ಆದಿಪುರುಷ್’ ಚಿತ್ರದ ಶೇಕಡ ಅರ್ಧದಷ್ಟು ದೃಶ್ಯಗಳನ್ನು ವಿಎಫ್ಎಕ್ಸ್‌ ತಂತ್ರಜ್ಞಾನ ಬಳಸಿಕೊಂಡು ಚಿತ್ರೀಕರಿಸಲಾಗುತ್ತದೆ. ಹಾಗಾಗಿ, ಚಿತ್ರದ ವಿಎಫ್‌ಎಕ್ಸ್‌ ಭಾಗದ ಚಿತ್ರೀಕರಣಕ್ಕೆ ₹ 250 ಕೋಟಿ ವೆಚ್ಚ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಬಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

ADVERTISEMENT

ಇಲ್ಲಿಯವರೆಗೂ ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಸಿನಿಮಾಕ್ಕೆ ವಿಎಫ್‌ಎಕ್ಸ್‌ ತಂತ್ರಜ್ಞಾನಕ್ಕಾಗಿಯೇ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಿದ ಉದಾಹರಣೆ ಇಲ್ಲ. ಹಾಗಾಗಿಯೇ, ವಿಎಫ್‌ಎಕ್ಸ್‌ಗಾಗಿ ಅತಿಹೆಚ್ಚು ಹಣ ವೆಚ್ಚ ಮಾಡುತ್ತಿರುವ ಮೊದಲ ಚಿತ್ರ ಎಂಬುದು ‘ಆದಿಪುರುಷ್‌’ ಸಿನಿಮಾದ ಹೆಗ್ಗಳಿಕೆ.

ಪ್ರಭಾಸ್‌ಗೆ ಇದರಲ್ಲಿ ಸೀತೆಯಾಗಿ ‘ಮಹಾನಟಿ’ ಚಿತ್ರದ ಖ್ಯಾತಿಯ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಇನ್ನೂ ಪಾತ್ರವರ್ಗದ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. 2022ಕ್ಕೆ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.