ADVERTISEMENT

ಚಂದನವನದಲ್ಲೇ ಅದಿತಿಗೆ ಕೈತುಂಬಾ ಅವಕಾಶ

ಅಭಿಲಾಷ್ ಪಿ.ಎಸ್‌.
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST
ಅದಿತಿ ಪ್ರಭುದೇವ
ಅದಿತಿ ಪ್ರಭುದೇವ   

ಚಂದನವನದಲ್ಲಿ ಪ್ರಸ್ತುತ ಕನ್ನಡತಿಯರದ್ದೇ ದರ್ಬಾರ್‌. ಇಂತಹ ನಟಿಯರ ಪೈಕಿ ನಾಲ್ಕೈದು ವರ್ಷಗಳ ಹಿಂದಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ ಕೂಡಾ ಇದ್ದಾರೆ. ಅವರ ಕೈಯಲ್ಲಿ ಪ್ರಸ್ತುತ ಏಳೆಂಟು ಚಿತ್ರಗಳಿದ್ದು, ಬಹುನಿರೀಕ್ಷೆಯ ‘ತೋತಾಪುರಿ’ ಚಿತ್ರದ ಎರಡೂ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ‘ಆನ’ ಚಿತ್ರದಲ್ಲಿ ಸೂಪರ್‌ ವುಮನ್‌ ಆಗಿ, ‘5ಡಿ’ ಚಿತ್ರದಲ್ಲಿ ಆಟೊ ಚಾಲಕಿಯಾಗಿ ವಿಭಿನ್ನ ಪಾತ್ರಗಳಿಗೆ ಬಣ್ಣಹಚ್ಚಲು ಲಾಕ್‌ಡೌನ್‌ ಯಾವಾಗ ಮುಗಿಯುತ್ತದೆ ಎಂದು ಕಾಯುತ್ತಿರುವ ಅದಿತಿ, ತಮ್ಮ ಸಿನಿ ಪಯಣವನ್ನು ‘ಸಿನಿಮಾ ಪುರವಣಿ’ ಜೊತೆಗೆ ಹಂಚಿಕೊಂಡರು.

***

ಹೇಗಿದೆ ಲಾಕ್‌ಡೌನ್‌ ಅನುಭವ. ಕುಟುಂಬದ ಕೆಲ ಸದಸ್ಯರಿಗೆ ಕೋವಿಡ್‌ ಬಂದಾಗ ಹೇಗೆ ಅದನ್ನು ಎದುರಿಸಿದಿರಿ?

ADVERTISEMENT

ಕೋವಿಡ್‌ ಎನ್ನುವುದು ದೈಹಿಕ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೋ ಅಷ್ಟೇ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ದೇಹ ಮತ್ತು ಮನಸ್ಸಿನ ಮೇಲೆ ಇದರ ಪರಿಣಾಮ 50–50 ಎನ್ನಬಹುದು. ನಮ್ಮ ಕುಟುಂಬದ ಸದಸ್ಯರಿಗೆ ಮಾನಸಿಕ ಸ್ಥೈರ್ಯ ಹೆಚ್ಚಾಗಿತ್ತು. ಯಾರೂ ಧೃತಿಗೆಡಲಿಲ್ಲ. ಆದರೂ ಸಣ್ಣಮಟ್ಟಿನ ಭಯವಿತ್ತು. ನಮ್ಮದು ಆರೋಗ್ಯಕರ ಆಹಾರ ಹಾಗೂ ಜೀವನ ಪದ್ಧತಿ ಇದ್ದ ಕಾರಣ ಹೆಚ್ಚಿನ ತೊಂದರೆಯಾಗಿಲ್ಲ. ಈ ಕಾಯಿಲೆ ವಿರುದ್ಧ ಹೆದರಿ ಹೋರಾಟ ಮಾಡುವುದಕ್ಕಿಂತ ಆತ್ಮಸ್ಥೈರ್ಯದಿಂದ, ಪ್ರಜ್ಞಾವಂತರಾಗಿ ಎದುರಿಸುವುದು ಮುಖ್ಯ. ಈ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗಿ ನಿಂತುಕೊಳ್ಳುವುದು ಮುಖ್ಯ. ಈ ಲಾಕ್‌ಡೌನ್‌ನಲ್ಲೂ ನಾನೂ ಇದೇ ಕಾರ್ಯದಲ್ಲಿ ನಿರತ
ಳಾಗಿದ್ದೆ. ನನಗೆ ತಿಳಿದಿದ್ದವರು, ಸಹಾಯ ಕೇಳಿ ಬಂದಾಗ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಜೊತೆಗೆ ವೈಯಕ್ತಿಕ ಆರೋಗ್ಯದತ್ತ ಹೆಚ್ಚಿನ ಗಮನಹರಿಸಿದ್ದೇನೆ ಹಾಗೂ ಇರುವ ಹವ್ಯಾಸವನ್ನು ಒರೆಹಚ್ಚಿದ್ದೇನೆ.

ಚಂದನವನಕ್ಕೆ ಕಾಲಿಟ್ಟು ನಾಲ್ಕೈದು ವರ್ಷವಾಗಿದೆ. ಇಲ್ಲಿಯವರೆಗಿನ ಸಿನಿ ಪಯಣ ಹೇಗಿತ್ತು?

ಯಾವುದೇ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಗಳನ್ನು ಇಟ್ಟು ಸಾಗುತ್ತಿರುವಾಗ ಸಂಕಷ್ಟಗಳು ಎದುರಾಗು
ವುದು ಸಹಜ. ಯಾವುದೇ ಕೆಲಸವಿರಲಿ ಅದನ್ನು ಶ್ರದ್ಧೆಯಿಂದ, ಪರಿಶ್ರಮದಿಂದ ಮಾಡುವುದು ನನ್ನ ಅಭ್ಯಾಸ. ಚಿತ್ರೀಕರಣದ ದಿನಗಳಲ್ಲಿ ನಾನು ಸೆಟ್‌ಗೆ ತಡವಾಗಿ ಹೋಗುತ್ತಿರಲಿಲ್ಲ, ಸಂಜೆ 6ಕ್ಕೆ ಹೋಗಬೇಕು ಎಂದು ಪಟ್ಟುಹಿಡಿದದ್ದಿಲ್ಲ. ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದರೂ ಚಿತ್ರೀಕರಣದ ದಿನಗಳ ನಡುವೆ ಗೊಂದಲ, ಸಮಸ್ಯೆ ಇಲ್ಲಿಯವರೆಗೂ ಆಗಿಲ್ಲ. ಇದರಲ್ಲಿ ನಾನು ಅದೃಷ್ಟವಂತೆ. ಅದಕ್ಕಿಂತ ಮಿಗಿಲಾಗಿ ಇಲ್ಲಿಯವರೆಗೂ ಒಳ್ಳೆಯ ತಂಡಗಳ ಜೊತೆಯೇ ಕಾರ್ಯನಿರ್ವಹಿಸಿದ್ದೇನೆ. ಕಷ್ಟಪಟ್ಟು ಕಾರ್ಯನಿರ್ವಹಿಸಿದರೂ ಮಾನಸಿಕ ನೆಮ್ಮದಿ ಇದೆ. ಈ ಕೋವಿಡ್‌ ಪಿಡುಗು ಬಂದ ನಂತರ ನನ್ನ ಸಿನಿ ಪಯಣದ ಎರಡು ಅದ್ಭುತ ವರ್ಷಗಳನ್ನು ಕಳೆದುಕೊಂಡಿದ್ದೇನೆ ಎನಿಸುತ್ತಿದೆ. ಸಿನಿಮಾ ಕ್ಷೇತ್ರಕ್ಕೆ ಅತಿ ದೊಡ್ಡ ಹೊಡೆತವನ್ನು ಈ ಕೋವಿಡ್‌ ನೀಡಿದೆ.

ಸದ್ಯಕ್ಕೆ ಏಳೆಂಟು ಸಿನಿಮಾಗಳು ಕೈಯಲ್ಲಿವೆ. ಮೂರ್ನಾಲ್ಕು ಚಿತ್ರಗಳ ಚಿತ್ರೀಕರಣ ಮುಗಿದಿದೆ. ಇದನ್ನು ನಿರೀಕ್ಷಿಸಿದ್ರಾ?

ಖಂಡಿತವಾಗಿಯೂ ಇಲ್ಲ. ಬಂದಂತಹ ಅವಕಾಶಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಾ ಹೋದೆ. ಪ್ರತಿ ಸಿನಿಮಾವೂ ಹಿಂದಿನ ಸಿನಿಮಾಗಳ ಜೊತೆಗೆ ಸಂಪರ್ಕ ಹೊಂದಿದೆ. ಉದಾಹರಣೆಗೆ ಒಂದು ಸಿನಿಮಾದ ನಿರ್ದೇಶಕರೇ ನನ್ನನ್ನು ಮತ್ತೊಂದು ಸಿನಿಮಾಗೆ ರೆಫರ್‌ ಮಾಡಿರುತ್ತಾರೆ. ಅವಕಾಶವನ್ನು ನಾನು ಹುಡುಕಿಕೊಂಡು ಹೋಗುವ ಪ್ರಮೇಯವೇ ಬಂದಿಲ್ಲ. ‘ಅದಿತಿ ನಮ್ಮನೆ ಹುಡ್ಗಿ ಇದ್ದಂಗಪ್ಪ, ತಗೊಳೋಣಾ’ ಎನ್ನುವಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಇದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಜವಾಬ್ದಾರಿ ಎನಿಸುತ್ತಿದೆ. ಇಷ್ಟು ಪ್ರೀತಿ, ನಂಬಿಕೆ ಇರಿಸಿಕೊಂಡಾಗ ಭಯವೂ ಆಗುತ್ತದೆ. ನಾನು ಮನೆಯಲ್ಲಿ ಹೇಗಿರುತ್ತೇನೆ, ಸೆಟ್‌ನಲ್ಲೂ ಅದೇ ರೀತಿ ಇರುತ್ತೇನೆ. ಬಹಳ ಖುಷಿಯಲ್ಲಿದ್ದೇನೆ.

ಜಗ್ಗೇಶ್‌ ಅವರ ಜೊತೆಗಿನ ‘ತೋತಾಪುರಿ’ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆ ಇದೆ ಅಲ್ಲವೇ?

ಎರಡು ಭಾಗಗಳಲ್ಲಿ ಈ ಚಿತ್ರವು ತೆರೆ ಕಾಣಲಿದ್ದು, ಲಾಕ್‌ಡೌನ್‌ಗಿಂತ ಸ್ವಲ್ಪ ಮುಂಚೆಯಷ್ಟೇ ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದ್ದೆವು. ಜಗ್ಗೇಶ್‌ ಅವರ ಚಿತ್ರವನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬಂದವರು ನಾವು. ಯಾರದೇ
ಮನೆಯಾಗಲಿ ಅಲ್ಲಿ ಜಗ್ಗೇಶ್‌ ಅವರ ಸಿನಿಮಾ ಟಿ.ವಿಯಲ್ಲಿ ಬಂದಾಗ ಖಂಡಿತವಾಗಿಯೂ ಚಾನೆಲ್‌ ಬದಲಾಯಿಸುವುದಿಲ್ಲ. ಕೆಲವು ಕಲಾವಿದರಿಗೆ ಸರಸ್ವತಿ ಪೂರ್ಣವಾಗಿ ಒಲಿದುಬಂದಿರುತ್ತಾಳೆ. ಅಂತಹ ಕಲಾವಿದರಲ್ಲಿ ಜಗ್ಗೇಶ್‌ ಅವರೂ ಒಬ್ಬರು. ಸಿನಿಮಾ ಮುಖಾಂತರ ಜನರಿಗೆ ಸಂದೇಶ ನೀಡುವ ರೀತಿಯು ಒಬ್ಬೊಬ್ಬ ನಿರ್ದೇಶಕರಿಗೂ ವಿಭಿನ್ನವಾಗಿರುತ್ತದೆ. ‘ನೀರ್‌ದೋಸೆ’ಯ ವಿಜಯ್‌ ಪ್ರಸಾದ್‌–ಜಗ್ಗೇಶ್‌ ಜೋಡಿ ಇದೀಗ ಈ ಸಿನಿಮಾದಲ್ಲಿ ಒಂದಾಗಿದ್ದು, ಇವರದೇ ವಿಶಿಷ್ಟ ಶೈಲಿಯಲ್ಲಿ ಸಂದೇಶ ನೀಡಿದ್ದಾರೆ. ಚಿತ್ರರಂಗದಲ್ಲಿರುವ ಅರ್ಧದಷ್ಟು ಹಿರಿಯ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಈ ಅನುಭವದ ಲಾಭವನ್ನು ನಾನು ಪಡೆದಿದ್ದೇನೆ.

ಚಿತ್ರದ ಡಬ್ಬಿಂಗ್‌ಗೆ ಹೋದ ಸಂದರ್ಭದಲ್ಲಿ ನನಗೆ ನಾನು ಡಬ್ಬಿಂಗ್‌ ಮಾಡುತ್ತಿದ್ದೇನೆ ಎಂದು ಅನಿಸಲೇ ಇಲ್ಲ. ಬೇರೆ ಯಾರಿಗೋ ನಾನು ಧ್ವನಿ ನೀಡುತ್ತಿದ್ದೇನೆ ಎನ್ನುವ ಅನುಭವ ನನಗೆ ಮೊದಲ ಬಾರಿ ಆಯಿತು. ‘ಶಕೀಲ ಬಾನು’ ಎನ್ನುವ ಪಾತ್ರವನ್ನು ಈ ಚಿತ್ರದಲ್ಲಿ ನಾನು ಮಾಡುತ್ತಿದ್ದೇನೆ. ಮುಸ್ಲಿಂ ಪಾತ್ರವಾದರೂ ಶುದ್ಧವಾದ ಕನ್ನಡವನ್ನೇ ಆಕೆ ಮಾತನಾಡುತ್ತಾಳೆ. ಇತರೆ ಚಿತ್ರದಲ್ಲಿ ನಿಜಜೀವನದ ಅದಿತಿ ಪ್ರಭುದೇವ ನನ್ನ ಪಾತ್ರದಲ್ಲಿ ಒಂದೆರಡು ಕಡೆ ಕಾಣಿಸಿಕೊಂಡಿದ್ದಿದೆ. ಆದರೆ ‘ತೋತಾಪುರಿ’ಯಲ್ಲಿ ನನ್ನ ಹಾವಭಾವವೇ ಬದಲಾಗಿದೆ. ಹೀಗಾಗಿ ಡಬ್ಬಿಂಗ್‌ ವೇಳೆ ವಿಭಿನ್ನ ಅನುಭವವಾಯಿತು.

ವಿಭಿನ್ನ ಪಾತ್ರಗಳೇ ಅದಿತಿ ಅವರನ್ನು ಅರಸಿಕೊಂಡು ಬರುತ್ತಿವೆಯೇ?

ಸಿನಿ ಪಯಣದ ಆರಂಭದ ಕಾಲದಲ್ಲಿ ಸೂಪರ್‌ಸ್ಟಾರ್‌ ಜೊತೆ ಸಿನಿಮಾ ಮಾಡಬೇಕು, ದೊಡ್ಡ ನಿರ್ದೇಶಕರ ಜೊತೆ ಸಿನಿಮಾ ಮಾಡಬೇಕು ಎಂದು ತಲೆಯಲ್ಲಿತ್ತು. ಬಹುತೇಕ ಎಲ್ಲ ಕಲಾವಿದರಿಗೂ ಇಂತಹ ಆಸೆ ಇರುತ್ತದೆ. ಆದರೆ, ಚಿತ್ರರಂಗವನ್ನು ಆಳವಾಗಿ ನೋಡಿದಾಗ ಅದು ಹೊಸ ನಟರಾಗಿರಲಿ, ನಿರ್ದೇಶಕರಾಗಿರಲಿ ಒಬ್ಬ ಕಲಾವಿದ ಎಷ್ಟು ಆಗುತ್ತದೆಯೋ ಅಷ್ಟು ಪಾತ್ರವನ್ನು ಮಾಡುವ ಪ್ರಯತ್ನ ಮಾಡಬೇಕು ಎಂದೆನಿಸಿತು. ‘ಆನ’ ಚಿತ್ರದಲ್ಲಿ ಯುವ ನಿರ್ದೇಶಕರ ಜೊತೆ ಅದೇ ‘5ಡಿ’ ಚಿತ್ರದಲ್ಲಿ ಹಿರಿಯ ನಿರ್ದೇಶಕರಾದ ಎಸ್‌.ನಾರಾಯಣ್‌ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದೇನೆ. ಸಿಗುತ್ತಿರುವ ಪ್ರತಿ ಪಾತ್ರವೂ ನನಗೆ ಹೊಂದಿಕೊಳ್ಳುತ್ತಿದೆ. ವಿಭಿನ್ನವಾದ ಪಾತ್ರದ ಆಫರ್‌ ಬರುವುದೇ ದೊಡ್ಡ ಪ್ರೋತ್ಸಾಹ ಎಂದುಕೊಂಡಿದ್ದೇನೆ.

ಇತರೆ ಭಾಷೆಗಳ ಸಿನಿಮಾಗಳಿಂದಲೂ ಅವಕಾಶಗಳು ಬಂದಿವೆ. ಆದರೆ ಚಂದನವನದಲ್ಲೇ ಹೆಚ್ಚಿನ ಅವಕಾಶ ಇರುವುದರಿಂದ ಸದ್ಯಕ್ಕೆ ಪರಭಾಷಾ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಪ್ರತಿ ಬಾರಿ ಹಣವೇ ಮುಖ್ಯ ಆಗುವುದಿಲ್ಲ. ನನ್ನನ್ನು ನಂಬಿ ಇಲ್ಲಿ ಕೆಲಸ ನೀಡಿರುವಾಗ ಚಂದನವನ ಬಿಟ್ಟು ಹೋಗುವುದಿಲ್ಲ. ಕೈಯಲ್ಲಿರುವ ಸಿನಿಮಾಗಳನ್ನೇ ಪೂರ್ಣಗೊಳಿಸುವುದರತ್ತ ನನ್ನ ಚಿತ್ತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.