ADVERTISEMENT

ಐತಿಹಾಸಿಕ ಚಿತ್ರದಲ್ಲಿ ಅಕ್ಕಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 13:43 IST
Last Updated 9 ಸೆಪ್ಟೆಂಬರ್ 2019, 13:43 IST
ಅಕ್ಷಯ್‌ ಕುಮಾರ್‌
ಅಕ್ಷಯ್‌ ಕುಮಾರ್‌   

ಬಾಲಿವುಡ್‌ನಲ್ಲಿ ಸಾಲು ಸಾಲು ಚಿತ್ರಗಳ ಮುಖೇನ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ನಟ ಅಕ್ಷಯ್‌ಕುಮಾರ್‌ (ಅಕ್ಕಿ) ಈಗ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ‘ಕೇಸರಿ’, ‘ಮಿಷನ್ ಮಂಗಲ್‌’ ಮೂಲಕ ಸದ್ದು ಮಾಡಿದ ಅವರು, ಮತ್ತೊಂದು ಮೇಗಾ ಸಿನಿಮಾದಲ್ಲಿ ನಟಿಸುತ್ತಿದ್ದು, ‘ಪೃಥ್ವಿರಾಜ್‌’ ಚಿತ್ರದ ಟೀಸರ್‌ ಅನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಸಾಹಸ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದ ಅಕ್ಕಿ, ಈ ಬಾರಿ ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ರಾಜ ಸಮರ್ಥ್‌ ಪೃಥ್ವಿರಾಜ್‌ ಚವಾಣ್‌ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಪೃಥ್ವಿರಾಜ್‌ ಚವಾಣರ ಶೌರ್ಯ, ಪರಾಕ್ರಮ ಹಾಗೂ ಅವರ ಮೌಲ್ಯಗಳನ್ನು ಸಾರುವ ಪಾತ್ರದಲ್ಲಿ ಮಿಂಚಲು ಅಕ್ಕಿ ರೆಡಿಯಾಗಿದ್ದಾರೆ.

ಈ ಅದ್ದೂರಿ ಚಿತ್ರವನ್ನು ಯಶ್‌ರಾಜ್‌ ಫಿಲಮ್ಸ್‌ ಬ್ಯಾನರ್‌ನಡಿ ನಿರ್ಮಿಸುತ್ತಿದ್ದು, ಡಾ.ಚಂದ್ರಪ್ರಕಾಶ್‌ ದ್ವಿವೇದಿ ನಿರ್ದೇಶಿಸಲಿದ್ದಾರೆ. ಈ ಅದ್ದೂರಿ ಚಿತ್ರವು 2020 ದೀಪಾವಳಿಗೆ ತೆರೆಗೆ ಬರಲಿದೆ. ಟೀಸರ್‌ ಕೂಡ ಕುತೂಹಲ ಮೂಡಿಸುವಂತಿದ್ದು, ಅಕ್ಷಯ್‌ಕುಮಾರ್‌ ಈ ಟೀಸರ್‌ಪೋಸ್ಟ್‌ ಮಾಡಿದ ಐದು ತಾಸುಗಳಲ್ಲಿ ಸುಮಾರು 3.23 ಲಕ್ಷ ಜನರು ಟ್ವಿಟರ್‌ನಲ್ಲಿ ವೀಕ್ಷಿಸಿದ್ದಾರೆ.

ADVERTISEMENT

‘ನನ್ನ ಜನ್ಮದಿನದಂದು ನನ್ನ ಮೊದಲ ಐತಿಹಾಸಿಕ ಚಿತ್ರದ ಸುದ್ದಿ ಹಂಚಿಕೊಳ್ಳಲು ನಿಜಕ್ಕೂ ಸಂತೋಷವಾಗಿದೆ. ಪೃಥ್ವಿರಾಜ್‌ ಶೌರ್ಯ ಮತ್ತು ಮೌಲ್ಯಗಳನ್ನು ತೆರೆಯ ಮೇಲೆ ತೋರಿಸುವ ಅವಕಾಶ ಸಿಕ್ಕಿರುವುದಕ್ಕೆ ವಿನಮ್ರನಾಗಿದ್ದೇನೆ’ ಎಂದು ಟ್ವಿಟರ್‌ನಲ್ಲಿ ಅಕ್ಕಿ ಬರೆದುಕೊಂಡಿದ್ದಾರೆ.

ನಟಿ ಕೈರಾ ಅಡ್ವಾಣಿ, ಅಕ್ಷಯ್‌ ಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಟ್ವಿಟರ್‌ನಲ್ಲಿ ‘ಲಕ್ಷ್ಮಿ ಬಾಂಬ್‌’ ಹೊಸ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಕಣ್ರೆಪ್ಪೆಗೆಕಾಡಿಗೆ ಹಚ್ಚಿಕೊಳ್ಳುತ್ತಿರವ ಅಕ್ಕಿ ಇದರಲ್ಲಿ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕೈರಾ ಅಡ್ವಾಣಿಯೂ ನಟಿಸುತ್ತಿದ್ದಾರಾ? ಎನ್ನುವ ಕುತೂಹಲವನ್ನು ಅವರು ಹುಟ್ಟು ಹಾಕಿದ್ದಾರೆ. ಇದುವರೆಗೆ ಅಕ್ಕಿ ಕೂಡ ‘ಲಕ್ಷ್ಮಿ ಬಾಂಬ್‌’ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.