ADVERTISEMENT

ಅಂಬರೀಷ್.. ಎಲ್ಲೂ ದಾಖಲಾಗದ ಮಾತು ನೂರಿವೆ

ಜಗದೀಶ ಅಂಗಡಿ
Published 26 ಜನವರಿ 2019, 1:24 IST
Last Updated 26 ಜನವರಿ 2019, 1:24 IST
   

‘ಮೇಡ್‍ಂ ನಾನು ಕುಡಿತೀನಿ, ಸೇದ್ತೀನಿ, ನಿಜ. ಜೂಜಾಡ್ತೀನಿ, ಅದೂ ನಿಜ. ನನ್ನ ಮೇಲೆ ಬಂದಿರೋ ಈ ಎಲ್ಲಾ ಕಂಪ್ಲೇಟ್ಸ್ ನಿಜ. ಆದರೆ, ಕುಡಿದು ಫೈಲ್‌ಗೆ ಸಹಿ ಹಾಕ್ತೀನಿ ಅನ್ನೋ ಕಂಪ್ಲೇಟ್ ಇದೆಯಲ್ಲ ಅದು ಮಾತ್ರ ಸುಳ್ಳು. ನಾನು ಕುಡಿದಾಗ ಇಲ್ಲಿ ತನ್ಕ ಒಂದೇ ಒಂದು ಸಿನಿಮಾಗೆ; ಒಂದೇ ಒಂದು ಚೆಕ್‍ಗೂ ಸೈನ್ ಹಾಕ್ದೋನಲ್ಲ. ನಂಬೋದು ಬಿಡಿದೋ ನಿಮ್ಮಿಷ್ಟ’

ಎದುರಿಗೆ ಕುಳಿತಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅಂಬರೀಷ್ ಹೀಗೆ ಹೇಳಿದ್ದರು. ಅವರು ಅಂದು ಕೇಂದ್ರದ ಮಂತ್ರಿ. ಆ ಘಟನೆಯ ನಂತರ ಅಂಬರೀಷ್ ಅವರನ್ನು ತುಸು ಹೆಚ್ಚು ನಂಬತೊಡಗಿದ್ದರು ಸೋನಿಯಾಜಿ!

* * *

ADVERTISEMENT

ಸಮಕಾಲೀನ ಕಲಾವಿದ ಟೈಗರ್ ಪ್ರಭಾಕರ್ ಮಲ್ಯ ಆಸ್ಪತ್ರೆಯಲ್ಲಿ ಅನಾಥ ಶವವಾಗಿದ್ದರು. ಬಿಲ್ ಕಟ್ಟಿ ಶವ ಪಡೆದುಕೊಂಡು ಹೋಗುವ ಅನಿವಾರ್ಯತೆ. ದುಡ್ಡೇ ಇಲ್ಲ.

‘ಹೋಗ್ರೋ ಈ ದುಡ್ಡು ತಗೊಂಡ್ ಹೋಗಿ, ಆಸ್ಪತ್ರೆ ಬಿಲ್ ಕಟ್ಟಿ; ಪ್ರಭಾಕರನ ಶವ ತಗಂಬನ್ರೋ. ಅವ್ನು ಕಲಾವಿದ ಕಣ್ರೋ.’ ಹಾಗೆ ದುಡ್ಡು ಕೊಟ್ಟು ಮಗುವಿನಂತೆ ಗಳಗಳನೇ ಕಣ್ಣೀರಿಟ್ಟಿದ್ದರು ಅಂಬರೀಷ್

**

ಅಂದು ವಿಂಡ್ಸರ್ ಮ್ಯಾನರ್ ಹೋಟೆಲ್ ಹತ್ತಿರದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನ 8ನೇ ಮಹಡಿ.

‘ನಾನು ಜನವರಿ ಅಷ್ಟೊತ್ತಿಗೆ ನನ್ನ ಜೆ.ಪಿ. ನಗರದ ಮನೆಗೆ ಹೋಗಬೇಕು. ಏನ್ ಮಾಡ್ತೀರೋ ಗೊತ್ತಿಲ್ಲ. ಕೊನೆಗೆ ನನ್ನ ಮಾಸ್ಟರ್ ರೂಮ್ ಆದ್ರೂ ಕಂಪ್ಲೀಟ್ ಮಾಡಿ. ಅಲ್ಲೇ ಇದ್ ಬಿಡ್ತೀನಿ. ಇಲ್ಲಾಂದ್ರೆ ನನ್ನನ್ನ ನನ್ನ ಮನಗೆ ಕಳಸೊಲ್ಲ ನೀವು’.

ಕಟ್ಟಡ ಗುತ್ತಿಗೆದಾರನಿಗೆ ತುಸು ಖಾರವಾಗಿಯೇ ಹೇಳಿದ್ದರು ಅಂಬರೀಷ್. ಸಾವಿಗೆ ಕೇವಲ ಒಂದು ತಿಂಗಳ ಹಿಂದೆ.

* * *

ಅಂದು ವಿಷ್ಣುವರ್ಧನ್ ಅಂತ್ಯಕ್ರಿಯೆ ಮುಗಿಸಿ ಪೊಲೀಸ್‌ ವ್ಯಾನ್‌ನಲ್ಲಿ, ಪೊಲೀಸ್‌ ರಕ್ಷಣೆಯೊಂದಿಗೆ ಮರಳಿ ಬರುತ್ತಿದ್ದ ಸಮಯ. ರಮೇಶ್ ಅರವಿಂದ್, ದೇವರಾಜ್, ದುನಿಯಾ ವಿಜಿ ಹಾಗೂ ಇತರೆ ಕಲಾವಿದರು ಇದ್ದರು.

‘ಇದು ಒಬ್ಬ ಕಲಾವಿದನನ್ನು ಕಳಿಸೋ ರೀತಿನಾ? ರಾಜ್‌ಕುಮಾರ್ ಅಂತ್ಯಕ್ರಿಯೆಯಲ್ಲಿ ಮನೆಯವ್ರಿಗೇ ಮಣ್ಣು ಸಿಗಲಿಲ್ಲ.

ವಿಷ್ಣುವರ್ಧನ್‌ದು ಪೊಲೀಸರ ಸರ್ಪಗಾವಲಿನಲ್ಲಿ ಅಂತ್ಯಕ್ರಿಯೆ! ಒಬ್ಬ ಕಲಾವಿದ ಇಹಲೋಕ ತ್ಯಜಿಸಿದಾಗ ಉಳಿದ ಕಲಾವಿದರು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಕಳಿಸಿ ಕೊಡಬೇಕು. ಅದು ನಿಜವಾದ ಗೌರವ. ಅದು ಕಲಾವಿದನ ಆತ್ಮಕ್ಕೂ ಶಾಂತಿ ನೀಡಬಹುದು. ಆ ಗೌರವ ಇವ್ರಿಬ್ರಿಗೂ ಸಿಗಲಿಲ್ಲವಲ್ಲ.. ಎಂಥ ನೋವಿನ ಸಂಗತಿ’ ವ್ಯಾನಿನಲ್ಲಿದ್ದವರೆಲ್ಲರೂ ಅಂಬರೀಷ್ ಮಾತನ್ನು ಕೇಳುತ್ತಲೇ ಇದ್ದರು. ತಲೆದೂಗಿದ್ದರು.

ಪ್ರೇಮಲೋಕ ಚಲನಚಿತ್ರದ ಸಮಯ. ದಿನವೊಂದಕ್ಕೆ ಮೂರು ಶಿಫ್ಟ್‌ಗಳಲ್ಲಿ ಕೆಲಸ. ಅಷ್ಟೊಂದು ಬೇಡಿಕೆಯಿದ್ದ ನಟ. ಪ್ರೇಮಲೋಕ ಚಿತ್ರಕ್ಕೆ ಸರ್ವರ್ ರೋಲ್ ಮಾಡಬೇಕಿತ್ತು. ಅದಕ್ಕೆ ತೀವ್ರ ಪ್ರತಿರೋಧ. ಇಮೇಜ್‍ಗೆ ಡ್ಯಾಮೇಜ್ ಆಗುತ್ತೆ ಅನ್ನೋ ಭಯ.

‘ಲೋ! ಆ ವೀರಸ್ವಾಮಿ ನನಗೆ ಅನ್ನವಿಕ್ಕಿದ ಧಣಿ ಕಣ್ರೋ. ಅದೇನಾದ್ರೂ ಸರಿ. ಆ ಧಣಿಗಾಗಿ ನಾನು ಸರ್ವರ್ ರೋಲ್ ಮಾಡೇ ಮಾಡ್ತೀನಿ‘ ಎಂದಿದ್ದರು ಅಂಬರೀಷ್.

* * *

ಕೆಂಪೇಗೌಡ ನಗರದ ಕೆಂಪೇಗೌಡ ಪ್ರತಿಮೆ ಸಂಸ್ಥಾಪಕ ರಾಜೂ ಕಳೆದ ಎರಡು ದಶಕಗಳಿಂದ ಅಂಬರೀಷ್ ಅವರ ಹತ್ತಿರದ ಒಡನಾಡಿ. ಅಂಬರೀಷ್ ಅವರ ಖಾಸಾ ವಲಯದ ಖಾಯಂ ಸದಸ್ಯ. ಅಂಬರೀಷ್ ಕಾಲವಾದ ನಂತರದ ಮೂರು ದಿನಗಳೂ ಅವರ ಪಾರ್ಥೀವ ಶರೀರದ ಹತ್ತಿರವೇ ಇದ್ದು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನೋಡಿಕೋಂಡವರು ರಾಜು.

‘ಕಾಣದೇ ಹೋದ ಅಂಬರೀಷ್’ ಅವರನ್ನು ನೆನಪಿನಾಳದಿಂದ ಹೆಕ್ಕಿ ತೆಗೆದು ರಾಜು ಮಾತಿಗೆ ನಿಂತಿದ್ದರು.

ಜೆ.ಪಿ ನಗರದಲ್ಲಿ ಅವರು 90ರ ದಶಕದ ಆದಿಯಲ್ಲಿ ಮನೆಕಟ್ಟಿಸಿದ್ದರು. ಅದರ ರಿನೋವೇಷನ್ ಈಗ ನೆಡೆದಿದೆ. ಆ ಮನೆ ಬಗ್ಗೆ ಅಂಬರೀಷ್ ಅವರಿಗೆ ವಿಪರೀತ ಪ್ರೀತಿ. ಜನವರಿ ತಿಂಗಳಲ್ಲಿ ಗೃಹಪ್ರವೇಶ ಮಾಡಬೇಕು. ಆ ಸಂದರ್ಭದಲ್ಲಿ ಎಲ್ಲರಿಗೂ ಊಟ ಹಾಕಿಸಬೇಕು. ಅಭಿಷೇಕ್‍ನ ಮೊದಲ ಸಿನಿಮಾದ ಪ್ರೀಮಿಯರ್ ಶೋ ತಮ್ಮ ಮಾಸ್ಟರ್ ರೂಮ್ನಲ್ಲಿಯೇ ಆಗಬೇಕು. ಇದೆಲ್ಲ ಅಂಬರೀಷ್ ಅವರ ಆಸೆಯಾಗಿತ್ತು. ಹೀಗಾಗಿ ಕಾಂಟ್ರ್ಯಾಕ್ಟರ್‌ಗೆ ಪದೇ ಪದೇ ಒತ್ತಾಯಿಸುತ್ತಿದ್ದರು.

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಮಯದಲ್ಲಿ ಅದೊಂದು ದಿನ ಪ್ರಚಾರ ಕಾರ್ಯ ಬಿಡದಿಯಲ್ಲಿ ನಡೆದಿತ್ತು. ಬಿಡದಿ ಹತ್ತಿರವಿದ್ದ ವೆಳ್ಳಿಯಪ್ಪ ಫ್ಯಾಕ್ಟರಿ ಕಾರ್ಮಿಕರ ಹಾಗೂ ಮ್ಯಾನೇಜ್‌ಮೆಂಟ್ ನಡುವೆ ನಡೆದ ಗಲಾಟೆಯಿಂದಾಗಿ ಗೋಲಿಬಾರ್ ಆಗಿ ಮೂವರು ಕಾರ್ಮಿಕರು ಸತ್ತರು. ತುಂಬ ನೊಂದುಕೊಂಡಿದ್ದ ಅಂಬರೀಷ್ ಆ ಮೂರು ಕುಟುಂಬಗಳಿಗೆ ಅನೇಕ ವರ್ಷಗಳ ಕಾಲ ತಪ್ಪದೇ ಪ್ರತಿ ತಿಂಗಳು ಹಣಕಾಸು ಸಹಾಯ ಮಾಡುತ್ತಿದ್ದರು. ಅವರು ಮೂರು ಅವಧಿಗೆ ಎಂ.ಪಿ. ಒಮ್ಮೆ ಕೇಂದ್ರದ ಮತ್ತೊಮ್ಮೆ ರಾಜ್ಯ ಸರ್ಕಾರದ ಮಂತ್ರಿ. ಹಾಗಿದ್ದೂ ತಮ್ಮ ಅಧಿಕಾರಾವಧಿಯಲ್ಲಿ ಎಂದೂ ಸರ್ಕಾರಿ ಕಾರ್ ಬಳಸಲಿಲ್ಲ. ತಮ್ಮ ಕಾರ್ ತಾವೇ ಚಲಾಯಿಸುತ್ತಿದ್ದರು! ವಿನಾಯಿತಿಯಿದ್ದರೂ ಆ ಮನುಷ್ಯ ತಪ್ಪದೇ ಟೋಲ್ ಕಟ್ಟುತ್ತಿದ್ದರು.

‘ಅವರು ಬಹುತೇಕ ರಾತ್ರಿ ಮಾತ್ರ ಕುಡಿಯುತ್ತಿದ್ದರು. ಕುಡಿದಾಗ ಮಾತ್ರ ಸಿಗರೇಟ್ ಸೇವನೆ. ಅಂಕೆ ಮೀರಿ ಎಂದೂ ಕುಡಿದವರಲ್ಲ. ಕುಡಿದಾಗ ಎಂದೂ ತಪ್ಪಾಗಿ ವರ್ತಿಸಿದವರಲ್ಲ. ಕುಡಿದು ಸೆಟ್‍ಗೋ ಅಥವಾ ಕಾರ್ಯಕ್ರಮಕ್ಕೋ ಹೋದವರಲ್ಲ’ ಎಂದು ರಾಜೂ ಹೇಳುತ್ತಾರೆ.

ಒಬ್ಬ ಕಲಾವಿದ ಇಹಲೋಕ ತ್ಯಜಿಸಿದಾಗ ಹೇಗೆ ಕಳುಹಿಸಿಕೊಡಬೇಕೆಂದುಕೊಂಡಿದ್ದರೋ ಹಾಗೆಯೇ ಆಯ್ತು. ಅಂದು ಆ ಪೊಲೀಸ್‌ ವ್ಯಾನಿನಲ್ಲಿ ನಾನೂ ಇದ್ದೆ. ಆ ಮಾತು ನೆನಪಾಯಿತು. ಅದರಂತೆಯೇ ಎಲ್ಲವನ್ನೂ ನಿರ್ವಹಿಸಿದೆವು. ಕಲಾವಿದರು ಅವರ ಪಾರ್ಥಿವ ಶರೀರ ಹೊತ್ತು ನಡೆದರು. ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಗೆ ಸಿಗದೇ ಇದ್ದ ಭಾಗ್ಯ ಅಂಬರೀಷ್ ಅವರಿಗೆ ಸಿಕ್ಕಿತುಎಂದು ಹೇಳುವಾಗರಾಜು ತುಸು ಗದ್ಗದಿತರಾದರು.

**

ಧೋನಿಗೆ 2 ಲಕ್ಷ ರೂ ಚೆಕ್‌

‘ಕ್ರಿಕೆಟಿಗ ಎಂ.ಎಸ್. ಧೋನಿ ಭಾರತ ತಂಡದಲ್ಲಿ ಆಗಷ್ಟೇ ಆಡುತ್ತಿದ್ದ ದಿನಗಳು. ಅದೊಂದು ದಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ಪಂದ್ಯದ ನಂತರ ಧೋನಿಗೆ ಭೇಟಿಯಾಗಿ ಎರಡು ಲಕ್ಷ ರೂ ಚೆಕ್ ನೀಡಿದ್ದರು. ಬಡಕುಟುಂಬದಿಂದ ಬಂದು ಹುಡುಗ. ಚೆನ್ನಾಗಿ ಆಡ್ತಾನೆ. ಬೆನ್ನುತಟ್ಟಿ ಪ್ರೋತ್ಸಾಹಿಸ್ಬೇಕ್ರೋ. ಅದಕ್ಕೆ ಆತನಿಗೆ ಚೆಕ್ ಕೊಟ್ಟೆ’ಎಂದಿದ್ದರು ಅಂಬರೀಷ್.

ನಟ ಅಂಬರೀಷ್ ಆಪ್ತಮಿತ್ರ ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.