ADVERTISEMENT

ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲ!

ಸತೀಶ ಬೆಳ್ಳಕ್ಕಿ
Published 17 ಫೆಬ್ರುವರಿ 2020, 19:30 IST
Last Updated 17 ಫೆಬ್ರುವರಿ 2020, 19:30 IST
ಅಮಿತಾ ಕುಲಾಲ್‌
ಅಮಿತಾ ಕುಲಾಲ್‌   

‘ಗಿಫ್ಟ್‌ ಬಾಕ್ಸ್‌’ ಸಿನಿಮಾದಲ್ಲಿ ನಟಿಸಿದ ನಂತರ ಕನ್ನಡ ಚಿತ್ರಗಳಲ್ಲಿ ನಟಿಸಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಅಂದರು ಅಮಿತಾ ಕುಲಾಲ್‌.

ಅರೆ, ‘ನಿಮ್ಮ ಹೊಸ ಚಿತ್ರದ ಬಗ್ಗೆ, ಪಾತ್ರದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೀವು ನೋಡಿದರೆ ಇನ್ನು ಮುಂದೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಂತಿದ್ದೀರಾ. ಕಾರಣ ಏನು’ ಎಂಬ ಪ್ರಶ್ನೆಗೆ ಅಮಿತಾ ಸುದೀರ್ಘ ಉತ್ತರವನ್ನೇ ನೀಡಿದರು.

‘ಗಿಫ್ಟ್‌ ಬಾಕ್ಸ್‌’ ನನ್ನ ಪಾಲಿನ ಅದ್ಭುತ ಸಿನಿಮಾ. ಈ ಚಿತ್ರದಲ್ಲಿ ನಟಿಸಿದ ನಂತರ ನನಗೆ ಜೊಳ್ಳುಜೊಳ್ಳಾದ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಬರುತ್ತಿಲ್ಲ. ನಿಜ ಹೇಳಬೇಕು ಅಂದರೆ, ಕಳೆದ ಒಂದು ವರ್ಷದಲ್ಲಿ 12 ಮೀಟಿಂಗ್ಸ್‌ಗಳನ್ನು ಅಟೆಂಡ್‌ ಮಾಡಿದ್ದೇನೆ. ಹಲವಾರು ಸ್ಕ್ರಿಪ್ಟ್‌ಗಳನ್ನು ಕೇಳಿದ್ದೇನೆ. ಯಾವುದೂ ಇಷ್ಟ ಆಗಲಿಲ್ಲ. ಈ ಸಂಗತಿಯನ್ನೆಲ್ಲಾ ನನ್ನ ದಿನಚರಿ ಪುಸ್ತಕದಲ್ಲಿ ಬರೆದು ಇಟ್ಟಿದ್ದೇನೆ’ ಎಂದ ಅಮಿತಾ, ಕ್ಷಣ ಕಾಲ ಮೌನ ವಹಿಸಿ ನಂತರ ಮಾತು ಮುಂದುವರಿಸಿದರು...

ADVERTISEMENT

ಕೆಲವರು ಕಾಲ್‌ ಮಾಡಿ, ‘ಮ್ಯಾಡಂ ಒಂದು ಸಿನಿಮಾ ಇದೆ. ಹಿರೋಹಿನ್‌ ಹುಡುಕುತ್ತಿದ್ದೇವೆ’ ಎನ್ನುತ್ತಾರೆ. ‘ಕತೆ ಏನು ಸಾರ್‌’ ಅಂದರೆ, ‘ನೀವೇ ಹಿರೋಹಿನ್‌ ಮ್ಯಾಡಂ’ ಅನ್ನುತ್ತಾರೆ. ಆಗ ತುಂಬ ಬೇಸರ ಆಗುತ್ತದೆ. ಕತೆ ಹೇಳಪ್ಪಾ ಅಂದರೆ, ಇಲ್ಲದ ಸಲ್ಲದ ಮಾತುಗಳನ್ನಾಡಿ, ಬರೀ ಬಿಲ್ಡಪ್‌ ನೀಡುವವರ ಜತೆಗೆ ಕೆಲಸ ಮಾಡುವುದು ನನಗೆ ಬಿಲ್‌ಕುಲ್‌ ಇಷ್ಟವಿಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ ಅವರು.

ಗಟ್ಟಿ ಕತೆ ಹೊಸೆಯುವ, ಸಿನಿಮಾ ಬಗ್ಗೆ ಪ್ಯಾಷನ್‌ ಇರುವಂತಹ ನಿರ್ದೇಶಕರ ಕನ್ನಡ ಚಿತ್ರಗಳಾದರೆ ಮಾತ್ರ ಸಂತೋಷದಿಂದ ನಟಿಸುತ್ತೇನೆ ಎನ್ನುವ ಅಮಿತಾ, ‘ಗಿಫ್ಟ್‌ ಬಾಕ್ಸ್‌’ ಚಿತ್ರದ ನಂತರ ಹಿಂದಿ ವೆಬ್‌ಸಿರೀಸ್‌ನಲ್ಲಿ ಕಾಣಿಸಿಕೊಳ್ಳುವ ತಯಾರಿ ನಡೆಸಿದ್ದಾರೆ.

‘ನನ್ನ ಅಭಿನಯ ಶಕ್ತಿಯ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ. ನನ್ನ ಈ ಶಕ್ತಿಯನ್ನು ಸಾರ್ಥಕವಾಗಿ ಬಳಸಿಕೊಳ್ಳುವಂತಹ ನಿರ್ದೇಶಕರು, ಕತೆಗಳು ಸಿಕ್ಕರೆ ಖಂಡಿತವಾಗಿಯೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎನ್ನುತ್ತಾರೆ ಅವರು.

ನಂತರ ಅವರ ಮಾತು ಕನ್ನಡ ಹಾಗೂ ತುಳು ಚಿತ್ರರಂಗದ ಕಡೆಗೆ ಹೊರಳಿತು.

‘ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶೇ 5ರಷ್ಟು ಜನರು ಮಾತ್ರ ಸ್ಯಾಂಡಲ್‌ವುಡ್‌ ಅನ್ನು ಒಂದು ಮಟ್ಟಕ್ಕೆ ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಉಳಿದ ಶೇ 95ರಷ್ಟು ಜನರು ಇಲ್ಲ ಸಲ್ಲದ ಸಿನಿಮಾಗಳನ್ನು ಮಾಡಿ ಕನ್ನಡ ಚಿತ್ರರಂಗದ ಗುಣಮಟ್ಟವನ್ನು ಪಾತಾಳಕ್ಕೆ ತುಳಿಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಟ ಸಾರ್ವಭೌಮ ರಾಜ್‌ಕುಮಾರ್, ಪ್ರತಿಭಾವಂತ ನಟ, ನಿರ್ದೇಶಕ ಶಂಕರ್‌ ನಾಗ್‌, ಲೋಕೇಶ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು ನಾನು. ಹಿಂದಿನ ಹಿರಿಯ ನಟರೆಲ್ಲರೂ ಚಿತ್ರರಂಗವನ್ನು ಮೇಲ್ಮಟ್ಟಕ್ಕೆ ತಂದಿದ್ದರು. ಅವರ ಕಾಲ ಮುಗಿದ ನಂತರ ಕನ್ನಡ ಚಿತ್ರರಂಗದ ಸ್ಥಿತಿ ಗತಿ ಏರಿಳಿತದಲ್ಲೇ ಸಾಗುತ್ತಿದೆ’ ಕಳವಳ ವ್ಯಕ್ತಪಡಿಸಿದರು.

‘ವಾರಕ್ಕೆ 10–12 ಸಿನಿಮಾಗಳು ತೆರೆಕಾಣುತ್ತಿವೆ. ಇದು ನಿಜಕ್ಕೂ ಒಳ್ಳೆ ಬೆಳವಣಿಗೆ ಅಲ್ಲ. ಇದೇನು ಹೀಗಾಗುತ್ತಿದೆ ಎಂದು ತಲೆ ಕೆಡಿಸಿಕೊಂಡ ನಾನು ಎರಡು ವಾರಗಳಲ್ಲಿ ಬಿಡುಗಡೆ ಆದ ಎಲ್ಲ ಕನ್ನಡ ಚಿತ್ರಗಳನ್ನೂ ನೋಡಿದೆ. 10ರಲ್ಲಿ 8 ಸಿನಿಮಾಗಳು ಜೊಳ್ಳು. ನಟನೆಯ ಅ ಆ ಇ ಈ ಕೂಡ ಗೊತ್ತಿರದವರೆಲ್ಲರೂ ನಾಯಕ– ನಾಯಕಿಯರಾಗಿದ್ದಾರೆ. ಇದನ್ನು ನೆನೆದಾಗ ಮನಸ್ಸಿಗೆ ತುಂಬ ಬೇಸರ ಆಗುತ್ತದೆ’ ಎಂದರು ಅಮಿತಾ.

‘ತುಳು ಚಿತ್ರರಂಗದ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ತುಳು ಸಿನಿಮಾ ಎಂಬ ಹೆಸರಿನಲ್ಲಿ ಎರಡು– ಎರಡೂವರೆ ಗಂಟೆಯ ಕಾಮಿಡಿ ಶೋ ಮಾಡುತ್ತಿದ್ದಾರೆ. ಏನಾಗುತ್ತಿದೆ ಕೋಸ್ಟಲ್‌ವುಡ್‌ನಲ್ಲಿ? ಈ ಕಾರಣಕ್ಕಾಗಿಯೇ ನಾನು ತುಳು ಚಿತ್ರಗಳಿಗೆ ಬಣ್ಣ ಹಚ್ಚುವುದಿಲ್ಲ. ತುಳು ನನ್ನ ಮಾತೃ ಭಾಷೆ. ಅಲ್ಲೂ ಒಳ್ಳೊಳ್ಳೆ ಸಿನಿಮಾಗಳು ಬರಬೇಕು ಎಂಬ ಆಸೆ ಇದೆ’ ಎಂದು ತನ್ನ ಸಾತ್ವಿಕ ಸಿಟ್ಟನ್ನು ಹೊರಹಾಕಿದರು ಅಮಿತಾ.

‘ಮಂಗಳೂರಿನಲ್ಲಿರುವ ಧಕ್ಕೆ ಗೊತ್ತುಂಟ ನಿಮಗೆ’ ಎಂದ ಅಮಿತಾ, ‘ಅಲ್ಲಿ ಕೆಲವರು ಬುಟ್ಟಿಯಲ್ಲಿ ಮೀನು ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಅವರಲ್ಲಿ ಕ್ವಾಲಿಟಿ ಇಲ್ಲ. ಕ್ವಾಂಟಿಟಿ ಮಾತ್ರ ಇರುತ್ತದೆ. ಇದು ಚಿತ್ರರಂಗದ ಈಗಿನ ಪರಿಸ್ಥಿತಿ. ನಾನು ಈ ವಿಚಾರವನ್ನು ನಗುತ್ತಾ ಹೇಳುತ್ತಿದ್ದರೂ, ಮನಸ್ಸಿನಾಳದಲ್ಲಿ ತುಂಬ ನೋವಿದೆ. ತುಂಬ ಬೇಜಾರ್‌ ಆಗ್ತಾ ಉಂಟು. ಒಬ್ಬರು ಇಬ್ಬರಿಂದ ಏನು ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಸೇರಿದರೆ ಚಿತ್ರರಂಗವನ್ನು ಬೆಳೆಸಬಹುದು’ ಎನ್ನುತ್ತಾರೆ ಅವರು.

‘ಪಡ್ಡಾಯಿ’, ‘ಮದಿಪು’, ‘ದೇಯಿ ಬೈದ್ಯೆತಿ’ಯಂತಹ ಸಿನಿಮಾಗಳು ಬರಬೇಕು. ಇವೆಲ್ಲವೂ ಕ್ವಾಲಿಟಿ ಸಿನಿಮಾಗಳು. ಆಗ ಮಾತ್ರ ಸಹೃದಯಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದರು ಅಮಿತಾ.

‘ಗಿಫ್ಟ್‌ ಬಾಕ್ಸ್‌’ ಜತೆಗೆ ಟ್ರಾವೆಲ್‌ ಮಾಡಿ

ಗಿಫ್ಟ್‌ ಬಾಕ್ಸ್‌ ಸಿನಿಮಾ ನೋಡಿದ ಪ್ರೇಕ್ಷಕರೆಲ್ಲರೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪ್ರೇಕ್ಷಕರು ಸಿನಿಮಾದ ಜತೆಗೆ ಟ್ರಾವೆಲ್‌ ಮಾಡಬೇಕು. ಇಡೀ ಸಿನಿಮಾ ‘ರೂಪಕ’ಗಳಲ್ಲಿ ಅದ್ದಿ ತೆಗೆದಂತಿದೆ. ಅದು ನಿರ್ದೇಶಕ ಎಸ್‌.ಪಿ.ರಘು ಅವರ ಸ್ಟ್ರೆಂಥ್‌ ಎಂದರು ‘ಗಿಫ್ಟ್‌ ಬಾಕ್ಸ್‌’ ಚೆಲುವೆ ಅಮಿತಾ.

ಈ ಸಿನಿಮಾದಲ್ಲಿನ ನನ್ನ ಪಾತ್ರದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂಪ್ರದಾಯಬದ್ಧ ಕುಟುಂಬದ, ಕಟ್ಟುಪಾಡುಗಳಲ್ಲೇ ಬೆಳೆದ ತುಳಸಿ ಎಂಬ ಹೆಣ್ಣುಮಗಳು ವೇಶ್ಯಾವಾಟಿಕೆಗೆ ಹೇಗೆ ಬರುತ್ತಾಳೆ ಎಂಬುದೇ ಒಂದು ಅಚ್ಚರಿ. ತುಳಸಿ ಪಾತ್ರದ ಇಂತಹದ್ದೊಂದು ಪರಿವರ್ತನೆಯನ್ನು ಚೆನ್ನಾಗಿ ನಿರ್ವಹಿಸಿದ ಆತ್ಮತೃಪ್ತಿ ನನಗೆ ಇದೆ. ಇದರ ಎಲ್ಲ ಕ್ರೆಡಿಟ್‌ ನಿರ್ದೇಶಕರಿಗೆ ಸಲ್ಲಬೇಕು’ ಎನ್ನುತ್ತಾರೆ ಅವರು.

ಚಿತ್ರದ ಇನ್ನೊಂದು ಪ್ಲಸ್‌ ಪಾಯಿಂಟ್‌ ಅಂದರೆ ಇದು ನೈಜ ಕತೆಯಾಧಾರಿತ ಸಿನಿಮಾ. ಸಂಗೀತ ಇಡೀ ಚಿತ್ರವನ್ನು ಮತ್ತೊಂದು ಹಂತಕ್ಕೆ ಮೇಲೆತ್ತಿದೆ.

ಚಿತ್ರ ನೋಡಿದ ಪ್ರೇಕ್ಷಕರು ಪಾತ್ರಗಳೊಟ್ಟಿಗೆ ಕನೆಕ್ಟ್‌ ಆಗುತ್ತಿದ್ದಾರೆ. ಕೆಲವರು ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ಇದನ್ನೆಲ್ಲಾ ನೋಡಿದಾಗ ನಮ್ಮ ಶ್ರಮ ಸಾರ್ಥಕವಾಯಿತು ಅನ್ನಿಸುತ್ತದೆ ಎನ್ನುತ್ತಾರೆ ಅಮಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.